ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿಯೇ ಮತ್ತೆರಡು ಪದಕ ಗೆಲ್ಲುವ ಭರವಸೆ ಮೂಡುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಭಾರತದ ಶೂಟರ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಲಯ ಕಂಡುಕೊಂಡಿದ್ದು, ಸೋಮವಾರ ಮತ್ತೆರಡು ಪದಕಗಳ ನಿರೀಕ್ಷೆ ಮೂಡಿಸಿದ್ದಾರೆ. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಿಗೆ ಸ್ಪರ್ಧಿಸಿ ಫೈನಲ್‌ಗೇರಲು ವಿಫಲರಾಗಿದ್ದ ರಮಿತಾ ಜಿಂದಾಲ್‌ ಹಾಗೂ ಅರ್ಜುನ್‌ ಬಬುತಾ, ವೈಯಕ್ತಿಕ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರ ಎರಡೂ ಸ್ಪರ್ಧೆಗಳ ಫೈನಲ್‌ಗಳು ನಡೆಯಲಿವೆ.

ಭಾನುವಾರ ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ ಅರ್ಜುನ್‌ 630.1 ಅಂಕಗಳನ್ನು ಪಡೆದು 7ನೇ ಸ್ಥಾನಿಯಾದರು. ಆದರೆ ಸಂದೀಪ್‌ ಸಿಂಗ್‌ 629.3 ಅಂಕಗಳೊಂದಿಗೆ 12ನೇ ಸ್ಥಾನ ಪಡೆದು ಸ್ಪರ್ಧೆಯಿಂದ ನಿರ್ಗಮಿಸಿದರು.

ಇನ್ನು, ಮಹಿಳಾ ವಿಭಾಗದ ಅರ್ಹತಾ ಸುತ್ತಿನಲ್ಲಿ ರಮಿತಾ 631.5 ಅಂಕಗಳನ್ನು ಸಂಪಾದಿಸಿ 5ನೇ ಸ್ಥಾನ ಪಡೆದು ಫೈನಲ್‌ ಸ್ಥಾನ ಖಚಿತಪಡಿಸಿಕೊಂಡರು. ಆದರೆ ಭಾರತದ ಮತ್ತೋರ್ವ ಸ್ಪರ್ಧಿ ಇಳವೆನಿಲ್‌ ವಳರಿವನ್‌ 630.7 ಅಂಕಗಳೊಂದಿಗೆ 10ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು. ಅಗ್ರ-8 ಸ್ಪರ್ಧಿಗಳು ಫೈನಲ್‌ಗೇರಿದರು.

Paris Olympics 2024 ರೋಯಿಂಗ್‌ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಪ್ರವೇಶಿಸಿದ ಬಾಲ್‌ರಾಜ್‌ ಪನ್ವಾರ್‌

ಸಿಂಧು ಭರ್ಜರಿ ಶುಭಾರಂಭ: ಅಶ್ವಿನಿ-ತನಿಶಾಗೆ ಸೋಲು

ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು ಹಾಗೂ ಎಚ್ ಎಸ್ ಪ್ರಣಯ್ ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಭರ್ಜರಿ ಶುಭಾರಂಭ ಮಾಡಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಮಾಲ್ಡೀವ್ಸ್‌ನ ಫಾತಿಮತ್‌ ಅಬ್ದುಲ್‌ ರಜಾಕ್‌ ವಿರುದ್ಧ 21-9, 21-6 ಗೇಮ್‌ಗಳಲ್ಲಿ ಗೆದ್ದರು. ಪಂದ್ಯ ಕೇವಲ 29 ನಿಮಿಷಗಳಲ್ಲೇ ಮುಕ್ತಾಯಗೊಂಡಿತು. ಬುಧವಾರ ‘ಎಂ’ ಗುಂಪಿನ 2ನೇ ಪಂದ್ಯದಲ್ಲಿ 10ನೇ ಶ್ರೇಯಾಂಕಿತೆ ಸಿಂಧು, ಎಸ್ಟೋನಿಯಾದ ಕ್ರಿಸ್ಟಿನ್‌ ಕ್ಯೂಬಾ ವಿರುದ್ಧ ಸೆಣಸಲಿದ್ದಾರೆ. 

ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ ಎಸ್ ಪ್ರಣಯ್ ಸಹ ಮೊದಲ ಪಂದ್ಯದಲ್ಲಿ ಜಯಿಸಿದರು. 'ಕೆ' ಗುಂಪಿನ ಪಂದ್ಯದಲ್ಲಿ ಜರ್ಮನಿಯ ಪ್ಯಾಬಿಯಾನ್ ರೊಥ್ ವಿರುದ್ಧ 21-18,21-12ರಲ್ಲಿ ಗೆಲುವಿನ ನಗೆ ಬೀರಿದರು.

ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ್ದ ಮಾತನ್ನೇ ನಾನು ಅನುಸರಿಸಿದೆ, ಇದೇ ಯಶಸ್ಸಿಗೆ ಕಾರಣ ಎಂದ ಮನು ಭಾಕರ್!

ಇದೇ ವೇಳೆ ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ದ.ಕೊರಿಯಾದ ಕಿಮ್‌ ಸೊ ಯೊಂಗ್‌ ಹಾಗೂ ಕೊಂಗ್‌ ಹೀ ಯೊಂಗ್‌ ವಿರುದ್ಧ ಪರಾಭವಗೊಂಡರು. ಇದರ ಹೊರತಾಗಿಯೂ ಭಾರತೀಯ ಜೋಡಿಗೆ ಮುಂದಿನ ಸುತ್ತಿಗೇರುವ ಅವಕಾಶವಿದ್ದು, ಗುಂಪು ಹಂತದಲ್ಲಿ ಇನ್ನೆರಡು ಪಂದ್ಯಗಳನ್ನೂ ಗೆಲ್ಲಬೇಕಿದೆ.

ಈಜಿನಲ್ಲಿ ಭಾರತದ ಸವಾಲು ಅಂತ್ಯ

ಭಾರತದ ಈಜುಪಟುಗಳು ಒಲಿಂಪಿಕ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನ ಹೀಟ್ಸ್‌ನಲ್ಲಿ ಬೆಂಗಳೂರಿನ ಶ್ರೀಹರಿ ನಟರಾಜು 55.01 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಿಯಾದರು. ಆದರೆ ಒಟ್ಟಾರೆ 46 ಸ್ಪರ್ಧಿಗಳ ಪೈಕಿ 33ನೇ ಸ್ಥಾನ ಪಡೆದ ಕಾರಣ ಸೆಮಿಫೈನಲ್‌ ಪ್ರವೇಶಿಸಲಾಗಲಿಲ್ಲ. ಅಗ್ರ-16ರಲ್ಲಿ ಸ್ಥಾನ ಪಡೆದಿದ್ದರೆ ಸೆಮೀಸ್‌ಗೇರಬಹುದಿತ್ತು. 

ಇನ್ನು, ಮಹಿಳೆಯರ 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಂಗಳೂರಿನ 14 ವರ್ಷದ ಧಿನಿಧಿ ದೇಸಿಂಘು 2 ನಿಮಿಷ 06.96 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೀಟ್ಸ್‌ನಲ್ಲಿ ಅಗ್ರಸ್ಥಾನ ಪಡೆದರು. ಆದರೆ ಒಟ್ಟಾರೆ 30 ಸ್ಪರ್ಧಿಗಳ ಪೈಕಿ 23ನೇ ಸ್ಥಾನ ಪಡೆದ ಮುಂದಿನ ಸುತ್ತು ಪ್ರವೇಶಿಸಲು ವಿಫಲರಾದರು. ಈ ವಿಭಾಗದಲ್ಲೂ ಅಗ್ರ-16 ಸ್ಪರ್ಧಿಗಳು ಸೆಮೀಸ್‌ಗೇರಿದರು.