ಭಾನುವಾರ ರಿಪಿಕೇಜ್ ಸುತ್ತಿನಲ್ಲಿ ಸ್ಪರ್ಧಿಸಿದ ಬಾಲ್‌ರಾಜ್ ಪನ್ವಾರ್, 2ನೇ ಸ್ಥಾನ ಪಡೆದ ಕಾರಣ ಅಂತಿಮ 8ರ ಘಟ್ಟ ಪ್ರವೇಶಿಸಿದರು. ಸ್ಪರ್ಧೆಯಲ್ಲಿ ಅವರು 2000 ಮೀ. ದೂರವನ್ನು 7 ನಿಮಿಷ 12.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
ಪ್ಯಾರಿಸ್: ರೋಯಿಂಗ್ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಬಾಲ್‌ರಾಜ್ ಪನ್ವಾರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶನಿವಾರ ಅರ್ಹತಾ ಸುತ್ತಿನ ಹೀಟ್ಸ್‌ನಲ್ಲಿ 4ನೇ ಸ್ಥಾನ ಪಡೆದ 25 ವರ್ಷದ ಬಾಲ್‌ರಾಜ್ ನೇರ ಕ್ವಾರ್ಟರ್ ಅವಕಾಶ ತಪ್ಪಿಸಿಕೊಂಡಿದ್ದರು.
ಭಾನುವಾರ ರಿಪಿಕೇಜ್ ಸುತ್ತಿನಲ್ಲಿ ಸ್ಪರ್ಧಿಸಿದ ಅವರು, 2ನೇ ಸ್ಥಾನ ಪಡೆದ ಕಾರಣ ಅಂತಿಮ 8ರ ಘಟ್ಟ ಪ್ರವೇಶಿಸಿದರು. ಸ್ಪರ್ಧೆಯಲ್ಲಿ ಅವರು 2000 ಮೀ. ದೂರವನ್ನು 7 ನಿಮಿಷ 12.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಕ್ವಾರ್ಟರ್ ಫೈನಲ್ ಹಂತ ಮಂಗಳವಾರ ನಡೆಯಲಿದೆ.
ಶರತ್‌ಗೆ ಸೋಲಿನ ಆಘಾತ: ಬಾತ್ರಾ, ಶ್ರೀಜಾ ಶುಭಾರಂಭ
ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಭಾನುವಾರ ಮಿಶ್ರ ಫಲಿತಾಂತ ಲಭಿಸಿದೆ. ಕ್ರೀಡಾಕೂಟದ ಪಥಸಂಚಲನದಲ್ಲಿ ಭಾರತದ ಧ್ವಜಧಾರಿಯಾಗಿದ್ದ ಶರತ್ ಕಮಾಲ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸ್ಲೊವೇನಿಯಾದ ಡೆನಿ ಕೊಝುಲ್ ವಿರುದ್ಧ 2-4 ಗೇಮ್‌ಗಳಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು. ಇದೇ ವೇಳೆ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಶ್ರೀಜಾ ಅಕುಲಾ ಸ್ವೀಡನ್‌ನ ಕ್ರಿಸ್ಟಿನಾ ಕಾಲ್ಬೆರ್ಗ್ ವಿರುದ್ಧ 4-0 ಅಂತರದಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಮನಿಕಾ ಬಾತ್ರಾ ಬ್ರಿಟನ್‌ನ ಅನ್ನಾ ಹರ್ಸೆ ವಿರುದ್ಧ 4-1 ಅಂತರದಲ್ಲಿ ಗೆದ್ದು ಮುಂದಿನ ಸುತ್ತಿಗೇರಿದರು.
ಪ್ಯಾರಿಸ್ ಒಲಿಂಪಿಕ್ಸ್ ಪದಕ ಬೇಟೆಯಾಡಿದ ಮನು ಭಾಕರ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು!
ಮಹಿಳಾ ಆರ್ಚರಿ: ಭಾರತ ತಂಡಕ್ಕೆ ಕ್ವಾರ್ಟರಲ್ಲಿ ಆಘಾತ
ಆರ್ಚರಿ ಸ್ಪರ್ಧೆಯಲ್ಲಿ ಭಾರತ ಮಹಿಳಾ ರೀಕರ್ವ್ ತಂಡ ಭಾನುವಾರ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಅಭಿಯಾನ ಕೊನೆಗೊಳಿಸಿದೆ. ದೀಪಿಕಾ ಕುಮಾರಿ, ಭಜನ್ ಕೌರ್ ಹಾಗೂ ಅಂಕಿತಾ ಭಕತ್ ಅವರನ್ನೊಳಗೊಂಡ ತಂಡ ನೆದರ್‌ಲೆಂಡ್ಸ್ ವಿರುದ್ಧ ಅಂತಿಮ 8ರ ಘಟ್ಟದ ಪಂದ್ಯದಲ್ಲಿ 0-6 ಅಂತರದಲ್ಲಿ ಸೋಲನುಭವಿಸಿತು. ಸ್ಪರ್ಧೆಯಲ್ಲಿ ಭಾರತ 51-52, 49-54, 48-95 ಅಂಕಗಳಲ್ಲಿ ಪರಾಭವಗೊಂಡಿತು.
ಪ್ರತಿ ಸೆಟ್‌ನಲ್ಲಿ ಮೂರು ಆರ್ಚರ್‌ಗಳು ತಲಾ 2 ಯತ್ನ ನಡೆಸಲಿದ್ದಾರೆ. ಪ್ರತಿ ಪ್ರಯತ್ನದಲ್ಲಿ ಗರಿಷ್ಠ 10 ಅಂಕ ಪಡೆಯಬಹುದು. 6 ಯತ್ನಗಳ ಮುಕ್ತಾಯಕ್ಕೆ ಹೆಚ್ಚು ಅಂಕ ಗಳಿಸುವ ತಂಡಕ್ಕೆ 2 ಸೆಟ್ ಅಂಕ ದೊರೆಯಲಿದೆ. ಎಲ್ಲಾ 3 ಸೆಟ್‌ಗಳಲ್ಲೂ ಭಾರತ ಹಿನ್ನಡೆ ಅನುಭವಿಸಿ ನಿರಾಸೆಗೊಂಡಿತು. ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತ ನೇರವಾಗಿ ಕ್ವಾರ್ಟರ್ ಫೈನಲ್‌ಗೇರಿತ್ತು.
ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ್ದ ಮಾತನ್ನೇ ನಾನು ಅನುಸರಿಸಿದೆ, ಇದೇ ಯಶಸ್ಸಿಗೆ ಕಾರಣ ಎಂದ ಮನು ಭಾಕರ್!
ಟೆನಿಸ್: ಸೋತು ಹೊರಬಿದ್ದ ನಗಾಲ್
ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದ್ದಾರೆ. ಭಾನುವಾರ ಪುರುಷರ ಸಿಂಗಲ್ಸ್‌ನಲ್ಲಿ 26 ವರ್ಷದ ನಗಾಲ್ ಅವರು, ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ವಿರುದ್ಧ 2-6, 6-2, 5-7 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು. ಮೊದಲ ಸೆಟ್‌ನ ಹಿನ್ನಡೆ ಬಳಿಕ ಪುಟಿದೆದ್ದ ನಗಾಲ್, ಸ್ಥಳೀಯ ಆಟಗಾರನ ವಿರುದ್ಧ ಪ್ರಬಲ ಹೋರಾಟ ಪ್ರದರ್ಶಿಸಿದರು. ಆದರೆ ಕೊನೆಯಲ್ಲಿ ಒತ್ತಡಕ್ಕೊಳಗಾದಂತೆ ಕಂಡುಬಂತ ನಗಾಲ್, ಪಂದ್ಯ ಕೈಚೆಲ್ಲಿದರು. ಇದರೊಂದಿಗೆ ಟೆನಿಸ್‌ನ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
