ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿಖಾತ್ ಜರೀನ್ ದಾಖಲೆ, ಮೆರಿ ಕೋಮ್ ಬಳಿಕ 2 ಚಿನ್ನ ಗೆದ್ದ ಭಾರತದ ಬಾಕ್ಸರ್!
ಭಾರತದ ಬಾಕ್ಸಿಂಗ್ ಕ್ರೀಡಾ ಕ್ಷೇತ್ರದಲ್ಲಿ ನಿಖಾತ್ ಜರೀನ್ ಹೊಸ ಅಧ್ಯಾ ಬರೆದಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖಾತ್ ಸತತ 2ನೇ ಚಿನ್ನದ ಸಾಧನೆ ಮಾಡಿದ್ದಾರೆ. ಈ ಮೂಲಕ ಮೇರಿ ಕೋಮ್ ಹಾದಿಯಲ್ಲಿ ಸಾಗಿದ್ದಾರೆ.
ನವದೆಹಲಿ(ಮಾ.26): ವಿಶ್ವ ಬಾಕಿಂಗ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ ರಚಿಸಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ನಿಖಾತ್ ಜರೀನ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಸತತ 2 ಚಿನ್ನ ಗೆದ್ದ ಭಾರತದ 2ನೇ ಬಾಕ್ಸರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜರೀನ್‌ಗೂ ಮೊದಲು ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್ ಈ ಸಾಧನೆ ಮಾಡಿದ್ದಾರೆ.
ಫೈನಲ್ ಪಂದ್ಯದ 50 ಕೆಜಿ ಮಹಿಳಾ ವಿಭಾಗದಲ್ಲಿ ನಿಖಾತ್ ಜರೀನ್, ವಿಯೆಟ್ನಾಂನ ಎನ್‌ಗ್ಯುಯೆನ್ ಥಿ ಥಾಮ್ ವಿರುದ್ಧ ದಿಟ್ಟ ಫೈಟಿಂಗ್ ಪ್ರದರ್ಶಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 2022ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ನಿಖಾತ್ ಜರೀನ್ ತಮ್ಮ ಮೊದಲ ಚಿನ್ನ ಗೆದ್ದುಕೊಂಡಿದ್ದರು. ಇದೀಗ 2023ರ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಚಿನ್ನ ಗೆದ್ದ ಎರಡನೇ ಬಾಕ್ಸರ್ ಅನ್ನೋ ದಾಖಲೆ ಬರೆದಿದ್ದಾರೆ.
ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್: ಚಿನ್ನಕ್ಕೆ ಕೊರಳೊಡ್ಡಿದ ನೀತು & ಸ್ವೀಟಿ
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಸುರಿಮಳೆ
50 ಕೆಜಿ ವಿಭಾಗದಲ್ಲಿ ನಿಖಾತ್ ಜರೀನ್ ಇಂದು ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಭಾರತದ ತಾರಾ ಬಾಕ್ಸಿಂಗ್ ಪಟುಗಳಾದ ನೀತು ಗಂಗಾಸ್ ಹಾಗೂ ಸ್ವೀಟಿ ಬೋರಾ ಮಹಿಳಾ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. 48 ಕೆಜಿ ವಿಭಾಗದ ಬಾಕ್ಸಿಂಗ್ ಹೋರಾಟದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಮಂಗೋಲಿಯಾದ ಲುತ್ಸೈಖಾನ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್ ಚಿನ್ನಕ್ಕೆ ಮುತ್ತಿಟ್ಟರು. ಈ ಮೂಲಕ ಮೊದಲ ಪ್ರಯತ್ನದಲ್ಲೇ ದಾಖಲೆ ಬರೆದಿದ್ದಾರೆ. ಆರಂಭದಲ್ಲೇ ಆಕ್ರಮಣಕಾರಿಯಾಗಿ ಪಂಚ್ಗಳ ಮೂಲಕ ಮೇಲುಗೈ ಸಾಧಿಸಿದ ನೀತು ಯಾವ ಕ್ಷಣದಲ್ಲೂ ಎದುರಾಳಿಗೆ ತಿರುಗೇಟು ನೀಡಲು ಅವಕಾಶ ನೀಡಲಿಲ್ಲ. ಇದೇ ವೇಳೆ 81+ ಕೆ.ಜಿ. ವಿಭಾಗದಲ್ಲಿ ಸ್ವೀಟಿ 2018ರ ವಿಶ್ವ ಚಾಂಪಿಯನ್, ಚೀನಾದ ವ್ಯಾಂಗ್ ಲಿನಾ ವಿರುದ್ಧ 4-3 ಅಂತರದಲ್ಲಿ ಗೆದ್ದು ವಿಶ್ವ ಚಾಂಪಿಯನ್ ಎನಿಸಿಕೊಂಡರು. ಇದರೊಂದಿಗೆ ಲೈಟ್ ಹೇವಿವೈಟ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್ ಎಂಬ ಖ್ಯಾತಿಗೆ ಪಾತ್ರರಾದರು.