Asianet Suvarna News Asianet Suvarna News

ಒಲಿಂಪಿಕ್ ಜಾವೆಲಿನ್ ಚಾಂಪಿಯನ್‌ ನೀರಜ್ ಚೋಪ್ರಾಗೆ 2ನೇ ಬಂಗಾರದ ಗುರಿ: ಇಂದು ಫೈನಲ್‌

ನೀರಜ್ ಚೋಪ್ರಾ ಇಂದು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ ಈ ಬಾರಿ ನೀರಜ್‌ಗೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

Neeraj Chopra javelin throw final in Paris Olympics When and where to watch all you need to know kvn
Author
First Published Aug 8, 2024, 12:17 PM IST | Last Updated Aug 8, 2024, 12:29 PM IST

ಪ್ಯಾರಿಸ್‌: ಭಾರತದ ಕ್ರೀಡಾ ಕ್ಷೇತ್ರದ ಬಂಗಾರದ ಮನುಷ್ಯ ಎನಿಸಿಕೊಂಡಿರುವ ನೀರಜ್‌ ಚೋಪ್ರಾ, ಟೋಕಿಯೋ ಬಳಿಕ ಪ್ಯಾರಿಸ್‌ನಲ್ಲೂ ಹೊಸ ಚರಿತ್ರೆ ಸೃಷ್ಟಿಸುವ ಕಾತರದಲ್ಲಿದ್ದಾರೆ. ಗುರುವಾರ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದು, ಸತತ 2ನೇ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

2021ರಲ್ಲಿ ಟೋಕಿಯೋದಲ್ಲಿ ನೀರಜ್‌ ಚಾಂಪಿಯನ್‌ ಆಗಿದ್ದರು. ಈ ಬಾರಿ ಮತ್ತೊಮ್ಮೆ ಕೋಟ್ಯಂತರ ಭಾರತೀಯರ ನಿರೀಕ್ಷೆಯ ಭಾರವನ್ನು ಹೊತ್ತುಕೊಂಡು ಅವರು ಪ್ಯಾರಿಸ್‌ಗೆ ತೆರಳಿದ್ದು, ಚಾಂಪಿಯನ್‌ ಪಟ್ಟದೊಂದಿಗೆ ತವರಿಗೆ ಹಿಂದಿರುಗುವ ತವಕದಲ್ಲಿದ್ದಾರೆ.

ಮಂಗಳವಾರ 26 ವರ್ಷದ ನೀರಜ್‌ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ ಪ್ರವೇಶಿಸಿದ್ದರು. ಒಟ್ಟು 32 ಸ್ಪರ್ಧಿಗಳಿದ್ದ ಅರ್ಹತಾ ಸುತ್ತಿನಲ್ಲಿ 84 ಮೀ. ದೂರ ದಾಖಲಿಸಿದರೆ ಫೈನಲ್‌ಗೇರಬಹುದಿತ್ತು. ನೀರಜ್‌ ಮೊದಲ ಪ್ರಯತ್ನದಲ್ಲೇ ಗುರಿ ತಲುಪಿ ಪದಕ ಸುತ್ತು ಪ್ರವೇಶಿಸಿದ್ದರು.

ಒಲಿಂಪಿಕ್ ಪದಕ ಗೆದ್ದು ಬಂದ ಮನು ಭಾಕರ್ ಮೊದಲು ಭೇಟಿಯಾಗಿದ್ದು ಸೋನಿಯಾ ಗಾಂಧಿಯನ್ನ..!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ 87.58 ಮೀ. ದೂರ ದಾಖಲಿಸಿ ಐತಿಹಾಸಿಕ ಬಂಗಾರ ಪಡೆದಿದ್ದರು. ಆ ಬಳಿಕ ಅವರು 90 ಮೀ. ನಿರೀಕ್ಷೆ ಇಟ್ಟುಕೊಂಡಿದ್ದರೂ ಈ ವರೆಗೂ ಯಶಸ್ಸು ಕಂಡಿಲ್ಲ. ಆದರೆ ಈ ಬಾರಿ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರ ದಾಖಲಿಸಿರುವ ನೀರಜ್‌, ಫೈನಲ್‌ನಲ್ಲಿ 90 ಮೀ. ಗುರಿ ತಲುಪುವ ಕಾತರದಲ್ಲಿದ್ದಾರೆ.

ಒಂದು ವೇಳೆ ಅವರು ಚಿನ್ನ ಗೆದ್ದರೆ, ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಸತತ 2 ಬಾರಿ ಚಾಂಪಿಯನ್‌ ಆದ ವಿಶ್ವದ 5ನೇ ಅಥ್ಲೀಟ್‌ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, ಸ್ವಾತಂತ್ರ್ಯದ ಬಳಿಕ 2 ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 4ನೇ ಕ್ರೀಡಾಪಟು ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು (ತಲಾ 1ಬೆಳ್ಳಿ, ಕಂಚು), ಕುಸ್ತಿಪಟು ಸುಶೀಲ್‌ ಕುಮಾರ್‌ (ತಲಾ 1 ಬೆಳ್ಳಿ, ಕಂಚು), ಶೂಟರ್‌ ಮನು ಭಾಕರ್‌ (2 ಕಂಚು) ತಲಾ 2 ಪದಕ ಗೆದ್ದಿದ್ದಾರೆ.

ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್‌ ಚಾನ್ಸ್‌..! ಆದ್ರೆ ಪವಾಡ ನಡಿಬೇಕು..!

ನೀರಜ್‌ ಮುಂದೆ ಭಾರಿ ಸವಾಲು

ನೀರಜ್‌ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಫೈನಲ್‌ನಲ್ಲಿ ಅವರಿಗೆ ಭಾರಿ ಸವಾಲು ಎದುರಾಗುವ ಸಾಧ್ಯತೆಯಿದೆ. ಅರ್ಹತಾ ಸುತ್ತಿನಲ್ಲಿ 88.63 ಮೀಟರ್‌ ದೂರ ಜಾವೆಲಿನ್‌ ಎಸೆದಿರುವ 2 ಬಾರಿ ವಿಶ್ವ ಚಾಂಪಿಯನ್‌, ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌, 87.76 ಮೀ. ದೂರ ದಾಖಲಿಸಿ 3ನೇ ಸ್ಥಾನ ಪಡೆದಿದ್ದ ಜರ್ಮನಿಯ ಜೂಲಿಯನ್‌ ವೆಬೆರ್‌ ಹಾಗೂ ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌, ಪಾಕಿಸ್ತಾನದ ಅರ್ಶದ್‌ ನದೀಮ್‌ (86.59 ಮೀ.) ಫೈನಲ್‌ನಲ್ಲಿ ನೀರಜ್‌ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಎಷ್ಟು ಗಂಟೆಯಿಂದ ಆರಂಭ?

ಇಂದು ರಾತ್ರಿ 11.55 ಗಂಟೆಯಿಂದ ಪುರುಷರ ಜಾವೆಲಿನ್ ಥ್ರೋ ಫೈನಲ್‌ ಪಂದ್ಯವು ಆರಂಭವಾಗಲಿದೆ.

ನೇರ ಪ್ರಸಾರ:

ಈ ಜಾವೆಲಿನ್ ಥ್ರೋ ಫೈನಲ್ ಪಂದ್ಯದ ನೇರ ಪ್ರಸಾರ ಸ್ಪೋರ್ಟ್ಸ್18 ಚಾನೆಲ್ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ.

Latest Videos
Follow Us:
Download App:
  • android
  • ios