ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಜಯಿಸಿ ಭಾರತಕ್ಕೆ ಬಂದಿಳಿದ ಮನು ಭಾಕರ್, ಕಾಂಗ್ರೆಸ್ ಮುಖ್ಯಸ್ಥೆ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತದ ತಾರಾ ಶೂಟರ್ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೀಗ ಪ್ಯಾರಿಸ್‌ನಿಂದ ತವರಿಗೆ ಬಂದಿಳಿದ ಮನು ಭಾಕರ್, ಕಾಂಗ್ರೆಸ್ ಸಂಸದೀಯ ಸಮಿತಿಯ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿರುವ 10 ಜನಪಥ್ ನಿವಾಸದಲ್ಲಿ ಭೇಟಿ ಮಾಡಿ ಗಮನ ಸೆಳೆದಿದ್ದಾರೆ.
ಈ ವಿಚಾರವನ್ನು ಕಾಂಗ್ರೆಸ್ ಪಕ್ಷವು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಮನು ಭಾಕರ್ ಹಾಗೂ ಸೋನಿಯಾ ಗಾಂಧಿ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿದೆ. ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಹಾಗೂ 10 ಮೀಟರ್ ಮಿಶ್ರ ತಂಡ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಮನು ಭಾಕರ್, ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ್ದ ಸ್ವತಂತ್ರ್ಯ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್ ಚಾನ್ಸ್..! ಆದ್ರೆ ಪವಾಡ ನಡಿಬೇಕು..!
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಧಿಕೃತ 'ಎಕ್ಸ್'(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, "ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿದ ಮನು ಭಾಕರ್, ಇಂದು ಸಿಪಿಪಿ ಮುಖ್ಯಸ್ಥೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು" ಎಂದು ಬರೆದುಕೊಂಡಿದೆ.
ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಮಾತನಾಡಿದ ಮನು ಭಾಕರ್, "ಈಗ ಒಂದು ಒಲಿಂಪಿಕ್ಸ್ ಮುಕ್ತಾಯವಾಗಿದೆ. ನನ್ನ ಗುರಿ ಈಗ ಮುಂದಿನ ಒಲಿಂಪಿಕ್ಸ್ ಮೇಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ ಈಗಾಗಲೇ ಶುರುವಾಗಿದೆ" ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಮನುಗೆ ಅದ್ಧೂರಿ ಸ್ವಾಗತ:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದ ತಾರಾ ಶೂಟರ್ ಮನು ಭಾಕರ್ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮನು ಹಾಗೂ ಅವರ ಕೋಚ್ ಜಸ್‌ಪಾಲ್ ರಾಣಾರನ್ನು ನೂರಾರು ಅಭಿಮಾನಿಗಳು, ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರಿಗೂ ಹೂ ಹಾರ ಹಾಗೂ ನೋಟಿನ ಮಾಲೆ ಹಾಕಿ, ತೆರೆದ ಕಾರಿನಲ್ಲಿ ಮೆರವಣಿಗೆ ನಡೆಸಿದರು.
22 ವರ್ಷದ ಮನು ಅವರನ್ನು ಭಾರತ ಒಲಿಂಪಿಕ್ ಸಂಸ್ಥೆ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಆಯ್ಕೆ ಮಾಡಿದೆ. ಹೀಗಾಗಿ ಅವರು ಶನಿವಾರ ಪ್ಯಾರಿಸ್‌ಗೆ ವಾಪಸಾಗಿ, ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ವಪ್ನಿಲ್‌ಗೂ ಭವ್ಯ ಸ್ವಾಗತ
ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತದ ಮತ್ತೋರ್ವ ಶೂಟರ್ ಸ್ವಪ್ನಿಲ್ ಕುಸಾಲೆಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಕುಟುಂಬಸ್ಥರು, ನೂರಾರು ಅಭಿಮಾನಿಗಳು ಸ್ವಪ್ನಿಲ್‌ಗೆ ಹೂ ಹಾರ ಹಾಕಿ, ಭುಜದ ಮೇಲೆ ಕುಳ್ಳಿರಿಸಿ, ಜೈಕಾರ ಕೂಗಿ ಸಂಭ್ರಮಿಸಿದರು.
