ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು ರಾಯಲ್ಸ್' ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. ಬೆಂಗಳೂರಿನಲ್ಲಿ ನಡೆದ ಪಿಕ್ಕಲ್‌ಬಾಲ್ ಟೂರ್ನಿ ಹೊಸ ಅಭಿಮಾನಿ ಬಳಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು (ಅ.13) : ಕರ್ನಾಟಕ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಮೊದಲ ಆವೃತ್ತಿಯು ರೋಚಕ ಅಂತ್ಯ ಕಂಡಿದೆ. ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು ರಾಯಲ್ಸ್' ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಸೂರು ರಾಯಲ್ಸ್ ತಂಡ ಮೊದಲ ಕೆಪಿಪಿಎಲ್ ಟ್ರೋಫಿ ಗೆದ್ದುಕೊಂಡಿದೆ.

ತುಮಕೂರು ಟೈಟಾನ್ಸ್-ಮೈಸೂರು ರಾಯಲ್ಸ್ ನಡುವೆ ಫೈನಲ್

ಬೆಂಗಳೂರಿನ ಜಿಕೆವಿಕೆ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ ಈ ರೋಮಾಂಚಕ ಟೂರ್ನಿಯಲ್ಲಿ ರಾಜ್ಯದ ವಿವಿಧ ನಗರಗಳ ಪ್ರಮುಖ ಫ್ರ್ಯಾಂಚೈಸಿಗಳು ಪಾಲ್ಗೊಂಡಿದ್ದವು. 45 ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ದೇಶದ 50ಕ್ಕೂ ಹೆಚ್ಚು ಶ್ರೇಷ್ಠ ಆಟಗಾರರು ತಮ್ಮ ಚುರುಕಿನ ಆಟದ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಕೇವಲ ಒಂದು ಎಸೆತ ಬಾಕಿ ಇರುವಂತೆ ನಡೆದ ಫೈನಲ್ ಪಂದ್ಯವು ಪ್ರೇಕ್ಷಕರಲ್ಲಿ ಭಾರೀ ರೋಮಾಂಚನ ಮೂಡಿಸಿತು. ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ಹಾಗೂ ಮೈಸೂರು ರಾಯಲ್ಸ್ ನಡುವಿನ ಹೋರಾಟ ಅಭಿಮಾನಿಗಳಿಗೆ ಮನರಂಜನೆ ನೀಡಿದೆ.

ಕಳೆದ ಮೂರು ದಿನಗಳಿಂದ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ ಬೆಂಗಳೂರಿನಲ್ಲಿ ಕಳೆಗಟ್ಟಿತ್ತು. ಅಪಾರ ಅಭಿಮಾನಿ ಬಳಗ ಸೃಷ್ಟಿಸಿರುವ ಪಿಕ್ಕಲ್‌ಬಾಲ್ ಇದೀಗ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಟೂರ್ನಿಯಲ್ಲಿ ಏಳು ತಂಡಗಳು ಪಾಲ್ಗೊಂಡಿತ್ತು. ಬಳ್ಳಾರಿ ಟೈಗರ್ಸ್, ಬೆಂಗಳೂರು ಚಾರ್ಜರ್ಸ್, ಮಂಗಳೂರು ರೋರರ್ಸ್, ಕೂರ್ಗ್ ಒರಿಜಿನಲ್ಸ್, ಬೆಳಗಾವಿ ಬ್ಯಾರನ್ಸ್, ತುಮಕೂರು ಟೈಟನ್ಸ್ ಮತ್ತು ಮೈಸೂರು ರಾಯಲ್ಸ್ ತಂಡ ಸಕ್ರಿಯವಾಗಿ ಪಾಲ್ಗೊಂಡಿತ್ತು.

ಸಮಾರೋಪ ಸಮಾರಂಭದಲ್ಲಿ ಕನ್ನಡದ ಖ್ಯಾತ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ವಿಜೇತರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಅತ್ಯುತ್ತಮ ಪುರುಷ ಆಟಗಾರರಾಗಿ ಅರ್ಥವ್ ನೀಮಾ, ಮಹಿಳಾ ಆಟಗಾರ್ತಿಯಾಗಿ ಆಲ್ಯಕಾ ಎಬ್ರಾಹಿಂ ಹಾಗೂ ಮೈಸೂರು ರಾಯಲ್ಸ್ ತಂಡದ ವಂಶಿಕ್ ಕಪಾಡಿಯಾ 'ಮ್ಯಾನ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದರು. ಕರ್ನಾಟಕ ರಾಜ್ಯ ಪಿಕ್ಕಲ್‌ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಈ ಲೀಗ್ ರಾಜ್ಯದಲ್ಲಿ ಹೊಸ ಕ್ರೀಡಾ ಸಂಸ್ಕೃತಿಗೆ ನಾಂದಿ ಹಾಡಿದೆ.