ಸಹಚರನಿಗೆ ಗಲಾಟೆ ಘಟನೆ ವಿಡಿಯೋ ಮಾಡಲು ತಿಳಿಸಿದ್ದ ಸುಶೀಲ್ ಕುಮಾರ್..!
* ಯುವ ಕುಸ್ತಿಪಟು ಕೊಲೆ ಪ್ರಕರಣ, ಸುಶೀಲ್ ಕುಮಾರ್ ಬಂಧನ
* 6 ದಿನಗಳ ಪೊಲೀಸ್ ವಿಚಾರಣೆ ಒಪ್ಪಿಸಿದ ಕೋರ್ಟ್
* ಹಲ್ಲೆಯ ಘಟನೆಯನ್ನು ವಿಡಿಯೋ ಮಾಡಿಸಿದ್ದ ಸುಶೀಲ್ ಕುಮಾರ್
ನವದೆಹಲಿ(ಮೇ.24): ಇಲ್ಲಿನ ಛತ್ರಸಾಲ್ ಮೈದಾನದಲ್ಲಿ ನಡೆದ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಸಾಘರ್ ರಾಣಾ ಹತ್ಯೆ ಆರೋಪಿ ಸುಶೀಲ್ ಕುಮಾರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಈ ಘಟನೆ ಉರುಳಾಗುವ ಸಾಧ್ಯತೆಯಿದೆ.
ಹೌದು, ಮೇ.04ರಂದ ಸುಶೀಲ್ ಕುಮಾರ್ ಬೆಂಬಲಿಗರು ಹಾಗೂ ಸಾಗರ್ ರಾಣಾ ನಡುವೆ ರಾಷ್ಟ್ರರಾಜಧಾನಿ ನವದೆಹಲಿಯ ಛತ್ರಸಾಲ್ ಮೈದಾನದಲ್ಲಿ ಗಲಾಟೆ ನಡೆದಿತ್ತು. ಮರುದಿನವೇ ರಾಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ಪಂಜಾಬ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿದ ದೆಹಲಿ ರೋಹಿಣಿ ಕೋರ್ಟ್ 6 ದಿನಗಳ ಪೊಲೀಸ್ ವಶಕ್ಕೆ ನೀಡಿದೆ.
ಗಲಾಟೆಯನ್ನು ವಿಡಿಯೋ ಮಾಡಿಕೊಳ್ಳಲು ಹೇಳಿದ್ದ ಸುಶೀಲ್ ಕುಮಾರ್: ಭವಿಷ್ಯದಲ್ಲಿ ಯಾರೂ ಸುಶೀಲ್ ಕುಮಾರ್‌ಗೆ ಎದುರು ಮಾತನಾಡಬಾರದು ಎಂದು ತೋರಿಸುವ ಉದ್ದೇಶದಿಂದ ಈ ಹಲ್ಲೆಯ ಘಟನೆಯನ್ನು ವಿಡಿಯೋ ಮಾಡಲು ಸುಶೀಲ್ ಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ. ಎಎನ್‌ಐ ಮೂಲಗಳ ಪ್ರಕಾರ ತನ್ನ ಸಹಚರ ಪ್ರಿನ್ಸ್ ಎಂಬಾತನಿಗೆ ಸುಶೀಲ್ ಕುಮಾರ್ ಹಾಗೂ ಮತ್ತವರ ಸಹಚರರು ಸಾಗರ್ ರಾಣಾ ಮೇಲೆ ಹಲ್ಲೆ ಮಾಡುವುದನ್ನು ವಿಡಿಯೋ ಮಾಡಲು ಹೇಳಿದ್ದರಂತೆ. ಈ ಘಟನೆಯಲ್ಲಿ ಸಾಗಾರ್ ರಾಣಾ ಕೊನೆಯುಸಿರೆಳೆದರೆ, ರಾಣಾ ಸ್ನೇಹಿತರಾದ ಅಮಿತ್ ಕುಮಾರ್ ಹಾಗೂ ಸೋನು ಹೆದರಿ ಓಡಿ ಹೋಗಿದ್ದರು ಎಂದು ತಿಳಿದು ಬಂದಿದೆ.
23 ವರ್ಷದ ಕುಸ್ತಿಪಟು ಕೊಲೆ ಪ್ರಕರಣ: ಒಲಿಂಪಿಕ್ಸ್ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್
ಈ ಘಟನೆಯ ಸಂಬಂಧ ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 5 ಮಂದಿಯನ್ನು ಡೆಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಮೇಲೆ ಕೊಲೆ, ಕೊಲೆಯತ್ನ, ಹಲ್ಲೆ, ಅಪರಾಧ ಪಿತೂರಿ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಡೆಲ್ಲಿ ಪೊಲೀಸ್ ಡೆಪ್ಯೂಟಿ ಕಮಿಷನರ್(ವಿಶೇಷ ವಿಭಾಗ)ದ ಪ್ರಮೋದ್ ಕುಷ್ವ್ ತಿಳಿಸಿದ್ದಾರೆ.
ಭಾರತದ ಕ್ರೀಡಾ ತಾರೆ ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ದಿದ್ದನ್ನು ಸ್ಮರಿಸಬಹುದಾಗಿದೆ.