* ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಸುಶೀಲ್ ಕುಮಾರ್* ಇದೀಗ ಜೈಲಿನಲ್ಲೇ ಸುಶೀಲ್ ಕುಮಾರ್‌ಗೆ ಜೀವ ಬೆದರಿಕೆ* ಗ್ಯಾಂಗ್‌ಸ್ಟರ್‌ ಕಾಲಾ ಜಥೇಡಿ ಕುಸ್ತಿಪಟು ಸುಶೀಲ್‌ ಹತ್ಯೆಗೆ ಸುಫಾರಿ ನೀಡಿದ ಆರೋಪ

ನವದೆಹಲಿ(ಜೂ.09): ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ 2 ಬಾರಿ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. 

ಸುಶೀಲ್‌ ಕುಮಾರ್‌ರನ್ನು ಇರಿಸಲಾಗಿರುವ ದೆಹಲಿಯ ಮಾಂಡೋಲಿ ಜೈಲಿನಲ್ಲೇ ಅವರನ್ನು ಕೊಲೆ ಮಾಡಲು, ದುಬೈನಲ್ಲಿದ್ದಾನೆ ಎನ್ನಲಾಗಿರುವ ಗ್ಯಾಂಗ್‌ಸ್ಟರ್‌ ಕಾಲಾ ಜಥೇಡಿ ಸುಪಾರಿ ನೀಡಿದ್ದಾನೆ ಎನ್ನುವ ಶಂಕೆ ಇದೆ. ತಮ್ಮ ಸಹಚರರ ಮೂಲಕ ಜಥೇಡಿ, ಮಾಂಡೋಲಿ ಜೈಲಿನಲ್ಲೇ ಇದ್ದ ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್‌ ಬಿಷ್ಣೋಯ್‌ ಹಾಗೂ ಸಂಪತ್‌ ನೆಹ್ರಾಗೆ ಸುಶೀಲ್‌ರನ್ನು ಕೊಲ್ಲುವಂತೆ ತಿಳಿಸಿದ್ದ ಎನ್ನಲಾಗಿದೆ. ಈ ಕಾರಣದಿಂದಾಗಿ, ಲಾರೆನ್ಸ್‌ ಹಾಗೂ ಸಂಪತ್‌ರನ್ನು ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣ: ಸುಶೀಲ್‌ ಕುಮಾರ್ ಶಸ್ತ್ರಾಸ್ತ್ರ ಪರವಾನಗಿ ಅಮಾನತು

38 ವರ್ಷದ ಸುಶೀಲ್‌ ಕುಮಾರ್ ಹಾಗೂ ಮತ್ತವರ ಬೆಂಬಲಿಗರು ನವದೆಹಲಿಯ ಛತ್ರಸಾಲ್‌ ಸ್ಟೇಡಿಯಂನಲ್ಲಿ ಜೂನಿಯರ್ ನ್ಯಾಷನಲ್‌ ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಸಂಬಂಧ ತಲೆ ಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಜೂನ್‌ 3ರಂದು 14 ದಿನಗಳ ಕಾಲ ಸುಶೀಲ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.