ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ, ಭಾರತದ ಕ್ರೀಡೆಯಲ್ಲಿನ ಮಹತ್ತರ ಬದಲಾವಣೆಗೆ ಕಾರಣವಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕನ ಪಾಡೆಲ್ ಸ್ಪೋರ್ಟ್ಸ್ ಹೂಡಿಕೆ ಏನು? 

ಬೆಂಗಳೂರು(ಜ.08) : ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ಐಪಿಎಲ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನು ಬಿಡುವಿನ ವೇಳೆ ಧೋನಿ ಕೃಷಿ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗಂತ ಧೋನಿ ಕ್ರೀಡೆಯಿಂದ ದೂರ ಉಳಿದಿಲ್ಲ. ಎಂಎಸ್ ಧೋನಿ ಹಲವು ಕ್ರೀಡೆಗಳಿಗೆ ಪೋತ್ಸಾಹ ನೀಡುತ್ತಾ, ಹೂಡಿಕೆ ಮೂಲಕ ದೇಶಾದ್ಯಂತ ಕ್ರೀಡೆಗೆ ಪ್ರಚಾರ ನೀಡುತ್ತಿದ್ದಾರೆ. ಇದೀಗ ಪಾಡೆಲ್ ಕ್ಷೇತ್ರದಲ್ಲಿ ಧೋನಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ‘7ಪ್ಯಾಡೆಲ್ ಎಂಎಸ್ ಧೋನಿ’ ಎಂಬ ದೇಶದ ಪ್ರಮುಖ ಪಾಡೆಲ್ ಇಕೋಸಿಸ್ಟಮ್ ಆಗಿರುವ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ.

ಜಿಂದಾಲ್ JSW ಸ್ಪೋರ್ಟ್ಸ್‌ ಜೊತೆ ಧೋನಿ ಪಾಲುದಾರಿಕೆ

ಆಗಸ್ಟ್ 2024ರಿಂದ JSW ಸ್ಪೋರ್ಟ್ಸ್‌ನ ಸ್ಥಾಪಕ ಹಾಗೂ ದೇಶದ ಬಹು ಕ್ರೀಡಾ ವಿಭಾಗಗಳ ಅತಿದೊಡ್ಡ ಕಾರ್ಪೊರೇಟ್ ಪ್ರವರ್ತಕರಲ್ಲಿ ಒಬ್ಬರಾದ ಪಾರ್ಥ್ ಜಿಂದಾಲ್, ಪಾಡೆಲ್ ಪಾರ್ಕ್ ಇಂಡಿಯಾದ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ವಿಲೀನಗೊಂಡ ಘಟಕದಲ್ಲಿ ಎಂಎಸ್ ಧೋನಿ ಪಾಲುದಾರರಾಗಿ ಸೇರ್ಪಡೆಯಾಗಿರುವುದು, ದೇಶದಲ್ಲಿ ಪಾಡೆಲ್‌ನ ಮುಂದಿನ ಹಂತದ ವಿಸ್ತರಣೆಗೆ ಇನ್ನಷ್ಟು ವಿಶ್ವಾಸವನ್ನು ನೀಡಲಿದೆ.

ಭಾರತದಲ್ಲಿ 1 ಕೋಟಿಗೂ ಹೆಚ್ಚು ಪಾಡೆಲ್ ಆಟಗಾರರಿದ್ದಾರೆ. ಟೈಯರ್-1 ನಗರಗಳು ಪಾಡೆಲ್ ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದನ್ನು ಈಗಾಗಲೇ ತೋರಿಸಿವೆ ಎಂದು ಎಂಸ್ ಧೋನಿ ಹೇಳಿದ್ದಾರೆ.. ಮುಂದಿನ ಹಂತದಲ್ಲಿ ಈ ಕ್ರೀಡೆಯನ್ನು ಹೊಸ ಮಾರುಕಟ್ಟೆಗಳತ್ತ ಕೊಂಡೊಯ್ಯುವುದು ಹಾಗೂ ಮೆಟ್ರೋ ನಗರಗಳ ಹೊರಗೂ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಪಾಡೆಲ್ ಒಂದು ಸಾಮಾಜಿಕ ಕ್ರೀಡೆಯಾಗಿದ್ದು ಡಬಲ್ಸ್‌ನಲ್ಲಿ ಆಡಲಾಗುತ್ತದೆ. ಪಾಡೆಲ್ ಕೋರ್ಟ್‌ಗಳು ಲಭ್ಯವಾದಾಗ ಜನರು ಸಹಜವಾಗಿಯೇ ಈ ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ ಎಂದು ಧೋನಿ ಹೇಳಿದ್ದಾರೆ.

ಈ ಪಾಲುದಾರಿಕೆ ಭಾರತದಲ್ಲಿ ಪಾಡೆಲ್ ಹೇಗೆ ಬೆಳೆಯಬೇಕು ಎಂಬುದಕ್ಕೆ ಪ್ರತಿಬಿಂಬವಾಗಿದೆ. ‘7ಪ್ಯಾಡೆಲ್ ಎಂಎಸ್ ಧೋನಿ’ ಮತ್ತು ಪಾಡೆಲ್ ಪಾರ್ಕ್ ಇಂಡಿಯಾ ಒಟ್ಟಾಗಿ ಈ ಕ್ರೀಡೆಯನ್ನು ಇನ್ನಷ್ಟು ಬಲಪಡಿಸಲಿವೆ. ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಮೌಲ್ಯಗಳು ನಮ್ಮ ಗುರಿಗಳಿಗೆ ಹೆಚ್ಚಿನ ಬಲ ನೀಡಲಿವೆ ಎಂದು ಪಾಡೆಲ್ ಪಾರ್ಕ್ ಇಂಡಿಯಾದ ಸಹ-ಸ್ಥಾಪಕ ನಿಖಿಲ್ ಸಚ್‌ದೇವ್ ಹೇಳಿದ್ದಾರೆ.

ನಿಖಿಲ್ ಸಚ್‌ದೇವ್, ಜಿಗರ್ ದೋಷಿ, ಪ್ರತೀಕ್ ದೋಷಿ ಮತ್ತು ರೋನಕ್ ದಫ್ತರಿ ಸ್ಥಾಪಿಸಿದ ಪಾಡೆಲ್ ಪಾರ್ಕ್ ಇಂಡಿಯಾ, ಭಾರತದ ಅತ್ಯಂತ ಸಮಗ್ರ ಪಾಡೆಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ಸಂಸ್ಥೆ 40ಕ್ಕೂ ಹೆಚ್ಚು ಸ್ವಂತ ಹಾಗೂ ನಿರ್ವಹಿತ ಕೋರ್ಟ್‌ಗಳನ್ನು ನಡೆಸುತ್ತಿದ್ದು, ದೇಶಾದ್ಯಂತ ಒಟ್ಟು 200ಕ್ಕೂ ಹೆಚ್ಚು ಕೋರ್ಟ್‌ಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಮುಂದಿನ ಒಂದು ವರ್ಷದೊಳಗೆ 400–500 ಕೋರ್ಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಭಾರತಾದ್ಯಂತ ವಿಶ್ವಮಟ್ಟದ ಪಾಡೆಲ್ ಸೌಲಭ್ಯಗಳ ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶ ಹೊಂದಿದೆ. ಅಂತರರಾಷ್ಟ್ರೀಯ ಪಾಡೆಲ್ ಫೆಡರೇಶನ್ (FIP) ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ World Padel Report 2025 ಪ್ರಕಾರ, ಪಾಡೆಲ್ ಈಗ ವಿಶ್ವದಾದ್ಯಂತ 150 ದೇಶಗಳಲ್ಲಿ 77,300ಕ್ಕೂ ಹೆಚ್ಚು ಕೋರ್ಟ್‌ಗಳನ್ನು ಹೊಂದಿದ್ದು, ಈ ಕ್ರೀಡೆಯ ಸ್ಥಿರ ಜಾಗತಿಕ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತದೆ.

7ಪ್ಯಾಡೆಲ್ ಎಂಎಸ್ ಧೋನಿ

2023ರಲ್ಲಿ ಸುಮಾರು 70 ಕೋರ್ಟ್‌ಗಳಿಂದ ಆರಂಭವಾದ ಪಾಡೆಲ್, 2024ರ ಮಧ್ಯಭಾಗಕ್ಕೆ ಸುಮಾರು 100 ಕೋರ್ಟ್‌ಗಳಿಗೆ ಏರಿಕೆಯಾಗಿ, ಇದೀಗ ದೇಶಾದ್ಯಂತ 300ಕ್ಕೂ ಹೆಚ್ಚು ಕೋರ್ಟ್‌ಗಳಿಗೆ ತಲುಪಿದೆ. ಇದು ಮೆಟ್ರೋ ನಗರಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಈ ಕ್ರೀಡೆ ಎಷ್ಟು ವೇಗವಾಗಿ ಬೇರು ಬಿಟ್ಟಿದೆ ಎಂಬುದನ್ನು ತೋರಿಸುತ್ತದೆ. ನವೆಂಬರ್ 2025ರಲ್ಲಿ ಅಂತರರಾಷ್ಟ್ರೀಯ ಪಾಡೆಲ್ ಫೆಡರೇಶನ್ (FIP) ಹಾಗೂ ಪಾಡೆಲ್ ಏಷ್ಯಾ, ಕ್ರೀಡೆಯ ಜಾಗತಿಕ ಅಭಿವೃದ್ಧಿಯಲ್ಲಿ ಐತಿಹಾಸಿಕ ಹೆಜ್ಜೆಯನ್ನು ಘೋಷಿಸಿವೆ. ಪಾಡೆಲ್‌ಗೆ ಏಷ್ಯನ್ ಒಲಿಂಪಿಕ್ ಕೌನ್ಸಿಲ್ (OCA) ಅಧಿಕೃತ ಮಾನ್ಯತೆ ನೀಡಲಾಗಿದ್ದು, ಮುಂದಿನ ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಅಧಿಕೃತ ಕ್ರೀಡೆಯಾಗಿ ಸೇರಿಸಲಾಗುತ್ತದೆ. ‘7ಪ್ಯಾಡೆಲ್ ಎಂಎಸ್ ಧೋನಿ’ ಮತ್ತು ಪಾಡೆಲ್ ಪಾರ್ಕ್ ಇಂಡಿಯಾ ಒಟ್ಟಾಗಿ ದೇಶಾದ್ಯಂತ ಪಾಡೆಲ್‌ನ ಬೆಳವಣಿಗೆಯನ್ನು ವೇಗಗೊಳಿಸಲು ಸಜ್ಜಾಗಿದ್ದು, ಭಾರತಾದ್ಯಂತ ಪ್ರವೇಶಿಸಬಹುದಾದ, ಸಮುದಾಯ ನೇತೃತ್ವದ ಹಾಗೂ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಕ್ರೀಡೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ.