ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ದಾಖಲೆಯ 600 ಮಂದಿ ಅರ್ಜಿ ಸಲ್ಲಿಕೆ..!
* ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಈ ಬಾರಿ ದಾಖಲೆಯ ಅರ್ಜಿ ಸಲ್ಲಿಕೆ
* 600ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳಿಂದ ಅರ್ಜಿ ಸಲ್ಲಿಕೆ
* ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಕೆಯಾಗಿದ್ದವು
ನವದೆಹಲಿ(ಸೆ.16): ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗಾಗಿ ಈ ವರ್ಷ 600ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರವಾಹದ ರೂಪದಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದು, ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಸಿದ್ದರು.
ಈ ವರ್ಷದಿಂದ ಮರುನಾಮಕರಣಗೊಂಡಿರುವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 35 ಮಂದಿ ಸಲ್ಲಿಸಿದ್ದು, ಅರ್ಜುನ ಪ್ರಶಸ್ತಿಗೆ ದಾಖಲೆಯ 215 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದ್ರೋಣಾಚಾರ್ಯ ಪ್ರಶಸ್ತಿಗೂ 100ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಸಾಮಾನ್ಯವಾಗಿ ಪ್ರತಿವರ್ಷ ಸುಮಾರು 48 ಅರ್ಜಿಗಳು ಸಲ್ಲಿಕೆ ಆಗುತ್ತಿದ್ದವು. ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಹೆಸರಿನಲ್ಲಿ ನೀಡಲಾಗುವ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಗೆ 138ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್, ದೇವೇಂದ್ರ ಝಝಾರಿಯಾ ನೇಮಕ
ಈ ವರ್ಷ ಖೇಲ್ ರತ್ನ ಪ್ರಶಸ್ತಿಯ ಮೊತ್ತವನ್ನು 7.5 ಲಕ್ಷ ರುಪಾಯಿಗಳಿಂದ 25 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದ್ದು, ಅರ್ಜುನ ಪ್ರಶಸ್ತಿಯ ಮೊತ್ತವನ್ನು 10 ಲಕ್ಷದಿಂದ 15 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ. ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧಕರ ಹೆಸರನ್ನು ಖೇಲ್ ರತ್ನಗೆ ಪರಿಗಣಿಸಬೇಕೆಂದು ಕ್ರೀಡಾ ಸಚಿವಾಲಯವು ಪ್ರಶಸ್ತಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಲಿದೆ