ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್, ದೇವೇಂದ್ರ ಝಝಾರಿಯಾ ನೇಮಕ
* ರಾಷ್ಟ್ರೀಯ ಕ್ರೀಡಾಪ್ರಶಸ್ತಿ ವಿಜೇತರ ಆಯ್ಕೆಗೆ ಸಮಿತಿ ರಚನೆ
* ಕನ್ನಡಿಗ ವೆಂಕಟೇಶ್ ಪ್ರಸಾದ್, ಪ್ಯಾರಾಲಿಂಪಿಯನ್ ದೇವೇಂದ್ರ ಝಝಾರಿಯಾಗೆ ಸ್ಥಾನ
* ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆ ಸಾಧ್ಯತೆ
ನವದೆಹಲಿ(ಸೆ.08): ಮೂರು ಬಾರಿ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ದೇವೇಂದ್ರ ಝಝಾರಿಯಾ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಮಾಜಿ ವಿಶ್ವಚಾಂಪಿಯನ್ ಬಾಕ್ಸರ್ ಎಲ್. ಸರಿತಾ ದೇವಿ 2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯಸ್ಥರಾದ ಮುಕುದಕುಂ ಶರ್ಮಾ ಆಯ್ಕೆಯಾಗಿದ್ದಾರೆ. ಇದಷ್ಟೇ ಅಲ್ಲದೇ ಮಾಜಿ ಶೂಟರ್ ಅಂಜಲಿ ಭಾಗ್ವತ್, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಅವರನ್ನು ನೇಮಕ ಮಾಡಿ ಕ್ರೀಡಾ ಸಚಿವಾಲಯ ಆದೇಶ ಹೊರಡಿಸಿದೆ.
ಮುಕುಂದಕುಂ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಇನ್ನು ಕೆಲವೇ ದಿನಗಳಲ್ಲಿ ಸಭೆ ಸೇರಲಿದ್ದು, ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಿದೆ. ಈ ವರ್ಷ ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ತೋರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದ್ದರಿಂದ ರಾಷ್ಟ್ರೀಯ ಕ್ರೀಡಾಪ್ರಶಸ್ತಿ ಪ್ರದಾನ ಕೊಂಚ ತಡವಾಗಲಿದೆ.
ಈ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣೆ ವಿಳಂಬ..!
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ ಸಹಿತ 7 ಪದಕಗಳನ್ನು ಬಾಚಿಕೊಂಡಿತ್ತು. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ ಸಹಿತ ದಾಖಲೆಯ 19 ಪದಕಗಳನ್ನು ದೇಶದ ಪ್ಯಾರಾಥ್ಲೀಟ್‌ಗಳು ಬಾಚಿಕೊಂಡಿದ್ದರು. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಸಾಧಕನಾಗಿ ಹೊರಹೊಮ್ಮಿದ್ದರು.
ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಈ ಬಾರಿ ಬದಲಾಯಿಸಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯು ಈ ಬಾರಿಯಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯಾಗಿ ಬದಲಾಗಿದೆ. ಖೇಲ್ ರತ್ನ ಬಳಿಕ ಅರ್ಜುನ ಪ್ರಶಸ್ತಿಯು ಕ್ರೀಡಾ ಕ್ಷೇತ್ರದಲ್ಲಿ ನೀಡಲಾಗುವ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ.
ಖೇಲ್ ರತ್ನ ಪ್ರಶಸ್ತಿಯು 25 ಲಕ್ಷ ರುಪಾಯಿ ನಗದು, ಸ್ಮರಣಿಕ ಹಾಗೂ ಅರ್ಜುನ ಪ್ರಶಸ್ತಿ 15 ಲಕ್ಷ ರುಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇನ್ನು ಕೋಚ್‌ಗಳಿಗಾಗಿ ದ್ರೋಣಾಚಾರ್ಯ ಪ್ರಶಸ್ತಿ, ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯು ಹಾಕಿ ಕೋಚ್ ಬಲ್ದೇವ್ ಸಿಂಗ್, ಸಾಯ್ ನಿರ್ದೇಶಕ ಸಂದೀಪ್ ಪ್ರಧಾನ್, ಹಿರಿಯ ಕ್ರೀಡಾ ಪತ್ರಕರ್ತರಾದ ವಿಜಯ್ ಲೋಕಪಲ್ಲೆ ಹಾಗೂ ವಿಕ್ರಾಂತ್ ಗುಪ್ತಾರನ್ನು ಒಳಗೊಂಡಿದೆ.