PKL9 ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಅ.7 ರಂದು ಬೆಂಗಳೂರಲ್ಲಿ ಅದ್ಧೂರಿ ಉದ್ಘಾಟನೆ!
9ನೇ ಆವೃತ್ತಿ ಪ್ರೊ ಕಬಡ್ಡಿ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಲೀಗ್‌ನ ಮೊದಲಾರ್ಥದ ವೇಳಾಪಟ್ಟಿ ಪ್ರಕಟಗೊಂಡಿದೆ. ವಿಶೇಷ ಬೆಂಗಳೂರಿನಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಮೊದಲ ಹಂತದ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್ 7 ರಿಂದ ಅದ್ಧೂರಿಯಾಗಿ ಟೂರ್ನಿ ಆರಂಭಗೊಳ್ಳುತ್ತಿದೆ. ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.21): ಕಬಡ್ಡಿ..ಕಬಡ್ಡಿ..ಕಬಡ್ಡಿ...ಅದೇ ರೋಚಕತೆ, ಅದೇ ಉತ್ಸಾಹ, ಅದೇ ಪೈಪೋಟಿ..ಇದು ಪ್ರೊ ಕಬಡ್ಡಿ ಲೀಗ್. ಇದೀಗ 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲಾರ್ಧದ ವೇಳಾಪಟ್ಟಿ ಪ್ರಕಟಗೊಂಡಿದೆ. ಅಕ್ಟೋಬರ್ 7 ರಿಂದ ಕಬಡ್ಡಿ ಲೀಗ್ ಟೂರ್ನಿ ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಟೂರ್ನಿ ಉದ್ಘಾಟನೆಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಬಳಿಕ ಪುಣೆಯ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಳ್ಳಲಿದೆ. ಕೊರೋನಾ ಕಾರಣ ಪ್ರೊ ಕಬಡ್ಡಿ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಈ ಬಾರಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಮಾಡಿಕೊಡಲಾಗಿದೆ. ಅದ್ಧೂರಿಯಾಗಿ ಲೀಗ್ ಉದ್ಘಾಟನೆಗೊಳ್ಳಲಿದ್ದು, ಮೂರು ದಿನಗಳ ಕಾಲ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿದೆ. 66 ಪಂದ್ಯಗಳಿಂದ ಕೂಡಿದ ವೇಳಾಪಟ್ಟಿಯಲ್ಲಿ ಪ್ರತಿಯೊಂದು ಪಂದ್ಯ ವಿಭಿನ್ನವಾಗಿದ್ದು, ಮೊದಲ 2 ದಿನಗಳೊಳಗೆ ಕಬಡ್ಡಿ ಅಭಿಮಾನಿಗಳು ಎಲ್ಲ 12 ತಂಡಗಳ ಆಟವನ್ನು ವೀಕ್ಷಿಸಬಹುದು. ಪಿಕೆಎಲ್ 9ನೇ ಋತುವಿನಲ್ಲಿ ಲೀಗ್ ಹಂತದಲ್ಲಿ ಪ್ರತಿ ಶುಕ್ರವಾರ ಮತ್ತು ಭಾನುವಾರ ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳ ಸಂಭ್ರಮವನ್ನು ಸವಿಯಬಹುದು.
ಅಕ್ಟೋಬರ್ 7ರಂದು ನಡೆಯುವ 9ನೇ ಋತುವಿನ(Pro Kabaddi League) ಮೊದಲ ಪಂದ್ಯದಲ್ಲಿ 8ನೇ ಋತುವಿನ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಲಿದೆ. ನಂತರ ನಡೆಯುವ ಲೀಗ್‌ನ ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಬುಲ್ಸ್(Bengaluru Bulls) ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಯು.ಪಿ. ಯೋಧಾಸ್ ವಿರುದ್ಧ ಹೋರಾಟ ನಡೆಸಲಿದೆ.
ಕೈ ತಪ್ಪಿದ ಪವನ್ ಶೆರಾವತ್, ಕಣ್ಣೀರಿಟ್ಟ ಬೆಂಗಳೂರು ಬುಲ್ಸ್ ಕೋಚ್!
ಟೂರ್ನಿಯ(PKL 9) ಎರಡನೇ ಹಂತದಲ್ಲಿ ತಂಡಗಳು ತಮ್ಮ ರಣತಂತ್ರ ರೂಪಿಸಲು, ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುಲು ಅವಕಾಶ ನೀಡುವ ದೃಷ್ಟಿಯಿಂದ ಲೀಗ್‌ನ ಎರಡನೇ ಹಂತದ ವೇಳಾಪಟ್ಟಿಯಲ್ಲಿ(PK Schedule) 2022ರ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು.
ಬೆಂಗಳೂರು(Bengaluru), ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ವಿವೋ ಪಿಕೆಎಲ್ 9ನೇ ಆವೃತ್ತಿಯು ಭಾರತದಲ್ಲಿರುವ ಕ್ರೀಡಾಭಿಮಾನಿಗಳಿಗೆ(Kabaddi fans) ಜಗತ್ತಿನ ಉತ್ತಮ ಕಬಡ್ಡಿ ಪಂದ್ಯಗಳ ಸಂಭ್ರಮವನ್ನು ನೀಡಲಿದೆ. ಹಿಂದಿನ ಎಲ್ಲ ಪ್ರೋ ಕಬಡ್ಡಿ ಲೀಗ್‌ಗಳಿಗಿಂತ 9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಮತ್ತು ಅದರ ಪ್ರಸಾರಕರು ಜೊತೆಯಲ್ಲಿ 12 ತಂಡಗಳು ಭಾರತದಲ್ಲಿ ಕಬಡ್ಡಿ ಅಭಿವೃದ್ಧಿಗೆ ಕ್ರೀಡಾಂಗಣದ ಒಳಗಡೆ ಮತ್ತು ಸ್ಕ್ರೀನ್‌ನ ಮೇಲೂ ಬಲಿಷ್ಠ ಮಾನದಂಡವನ್ನು ನಿರ್ಮಿಸಲಿವೆ ಎಂದು ವಿವೋ ಪ್ರೊಕಬಡ್ಡಿ ಲೀಗ್‌ನ ಕಮಿಷನರ್ ಮತ್ತು ಮಷಾಲ್ ಸ್ಪೋರ್ಟ್ಸ್‌ನ ಸ್ಪೋರ್ಟ್ಸ್ ಲೀಗ್‌ನ ಪ್ರಧಾನ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.
PKL Auction 2022 ಪಿಕೆಎಲ್‌ನಲ್ಲಿ ದಾಖಲೆ ಬರೆದ ಪವನ್ ಶೆರಾವತ್, ಬೆಂಗಳೂರು ಬುಲ್ಸ್‌ಗೆ ವಿಕಾಸ್ ಖಂಡೋಲಾ!
2017ರಲ್ಲಿ ಕಂಠೀರವದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆ ವರ್ಷ ಬೆಂಗಳೂರು ಬುಲ್ಸ್ ತನ್ನ ತವರಿನ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಿತ್ತು. ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಬಹುಕೋಟಿ ವೆಚ್ಚದಲ್ಲಿ ಹೊಸದಾಗಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗಿದೆ. ಈ ಹಿಂದೆ ಐಎಸ್‌ಎಲ್ ಫುಟ್ಬಾಲ್ ಪಂದ್ಯಗಳು ಕಂಠೀರವದಲ್ಲಿ ನಡೆದಾಗ ಟ್ರ್ಯಾಕ್ ಹಾಳು ಮಾಡಿದ ಪ್ರಸಂಗಗಳು ನಡೆದಿದ್ದವು. ಈ ಬಾರಿ ಕ್ರೀಡಾ ಇಲಾಖೆಯು ಕಠಿಣ ಷರತ್ತುಗಳೊಂದಿಗೆ ಕ್ರೀಡಾಂಗಣವನ್ನು ಬಿಟ್ಟುಕೊಡಲು ನಿರ್ಧರಿಸಿದೆ. ಜೊತೆಗೆ ಪಂದ್ಯವಿದ್ದಾಗ ಮಾತ್ರ ಬಾಡಿಗೆಗೆ ನೀಡಲಿದ್ದು, ಉಳಿದ ಸಮಯದಲ್ಲಿ ಕ್ರೀಡಾಂಗಣವನ್ನು ಬಳಸಲು ಐಎಸ್‌ಎಲ್ ಆಯೋಜಕರಿಗೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.