ಮಲೇಷ್ಯಾ ಮಾಸ್ಟರ್ಸ್: ಸಿಂಧು, ಸೈನಾ ಕ್ವಾರ್ಟರ್‌ಗೆ ಲಗ್ಗೆ
ವರ್ಷದ ಮೊದಲ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಭರ್ಜರಿ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಕೌಲಾಲಂಪುರ(ಜ.10): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. 2020ರ ಮೊದಲ ಅಂ.ರಾ. ಟೂರ್ನಿಯಲ್ಲಿ ಈ ಇಬ್ಬರು ಶಟ್ಲರ್‌ಗಳು ಜಯದ ಲಯದಲ್ಲಿದ್ದಾರೆ.
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: 2ನೇ ಸುತ್ತಿಗೆ ಸಿಂಧು, ಸೈನಾ
ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ 6ನೇ ಶ್ರೇಯಾಂಕಿತೆ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 21-10, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 34 ನಿಮಿಷಗಳ ಆಟದಲ್ಲಿ ಒಹೊರಿರನ್ನು ಮಣಿಸಿದ ಸಿಂಧು ಅಂತಿಮ 8ರ ಘಟ್ಟಕ್ಕೇರಿದರು. ಒಹೊರಿ ವಿರುದ್ಧ ಸಿಂಧುಗೆ ಇದು 9ನೇ ಗೆಲುವಾಗಿದೆ. ಕ್ವಾರ್ಟರ್‌ನಲ್ಲಿ ಸಿಂಧು, ವಿಶ್ವ ನಂ.1 ತೈಪೆಯ ತೈ ತ್ಸು ಯಿಂಗ್ ಎದುರು ಸೆಣಸಲಿದ್ದಾರೆ.
ಮತ್ತೊಂದು ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ದಕ್ಷಿಣ ಕೊರಿಯಾದ ಸೆ ಯಂಗ್ ಆನ್ ವಿರುದ್ಧ 25-23, 21-12 ಗೇಮ್‌ಗಳಲ್ಲಿ ರೋಚಕ ಗೆಲುವು ಪಡೆದರು. ಯಂಗ್ ಆನ್ ಎದುರು ಸೈನಾಗೆ ಇದು ಮೊದಲ ಗೆಲುವು. ಕ್ವಾರ್ಟರ್‌ನಲ್ಲಿ ಸೈನಾಗೆ ಒಲಿಂಪಿಕ್ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಎದುರಾಗಲಿದ್ದಾರೆ.
ಪ್ರಣಯ್, ಸಮೀರ್‌ಗೆ ಸೋಲು: ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಎಚ್.ಎಸ್. ಪ್ರಣಯ್ ಹಾಗೂ ಸಮೀರ್ ವರ್ಮಾ ಸೋಲುಂಡು ಟೂರ್ನಿಯಿಂದ ಹೊರಬಿದ್ದರು. ಮೊದಲ ಸುತ್ತಲ್ಲಿ ಗೆದ್ದು ನಿರೀಕ್ಷೆ ಮೂಡಿಸಿದ್ದ ಪ್ರಣಯ್, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮಟಾ ವಿರುದ್ಧ 14-21, 16-21 ಗೇಮ್‌ಗಳಲ್ಲಿ ಪರಾಭವಗೊಂಡರೆ, ಸಮೀರ್ ಮಲೇಷ್ಯಾದ ಲೀ ಜೀ ಜಿಯಾ ಎದುರು 19-21, 20-22 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.