ಬ್ಯಾಂಕಾಕ್(ಜ‌.13): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಎಚ್‌.ಎಸ್‌.ಪ್ರಣಯ್‌ರ ಕೋವಿಡ್‌ ಪರೀಕ್ಷಾ ವರದಿ ಗೊಂದಲ ಬಗೆಹರಿದಿದೆ. ಮಂಗಳವಾರ ಇಬ್ಬರ ವರದಿ ಪಾಸಿಟಿವ್‌ ಎಂದು ಬಂದಿತ್ತು. ಹೀಗಾಗಿ ಇಬ್ಬರೂ ಥಾಯ್ಲೆಂಡ್‌ ಓಪನ್‌ನಿಂದ ಹೊರಬಿದ್ದಿದ್ದರು. 

ಸೈನಾ ಜೊತೆ ಹೋಟೆಲ್‌ ಕೊಠಡಿಯಲ್ಲಿ ಉಳಿದುಕೊಂಡಿದ್ದ ಅವರ ಪತಿ ಪಿ.ಕಶ್ಯಪ್‌ರನ್ನೂ ಟೂರ್ನಿಯಿಂದ ಹೊರ ನಡೆಯುವಂತೆ ಸೂಚಿಸಲಾಗಿತ್ತು. ಆದರೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಎಂದು ವರದಿ ಬಂದ ಕಾರಣ, ಇಬ್ಬರಿಗೂ ಟೂರ್ನಿಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಸೈನಾ ಹಾಗೂ ಪ್ರಣಯ್‌ ಇಬ್ಬರೂ 2 ತಿಂಗಳ ಹಿಂದಷ್ಟೇ ಕೋವಿಡ್‌ಗೆ ತುತ್ತಾಗಿ ಬಳಿಕ ಚೇತರಿಸಿಕೊಂಡಿದ್ದರು.

ಸೈನಾ ನೆಹ್ವಾಲ್‌, ಪ್ರಣಯ್‌ಗೆ ಕೊರೋನಾ ಪಾಸಿಟಿವ್‌, ಥಾಯ್ಲೆಂಡ್ ಓಪನ್‌ನಿಂದ ಔಟ್

ಸಿಂಧು, ಪ್ರಣೀತ್‌ ಔಟ್‌: ಕೋವಿಡ್‌ ಬಳಿಕ ಮೊದಲ ಬಾರಿಗೆ ಕಣಕ್ಕಿಳಿದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಸಾಯಿ ಪ್ರಣೀತ್‌ ಥಾಯ್ಲೆಂಡ್‌ ಓಪನ್‌ನ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ. ಸಿಂಧು ಡೆನ್ಮಾರ್ಕ್‌ನ ಮಿಯಾ ವಿರುದ್ಧ ಸೋತರೆ, ಪ್ರಣೀತ್‌ ಥಾಯ್ಲೆಂಡ್‌ನ ಕ್ಯಾಂಟಾಫ್ಟನ್‌ ವಿರುದ್ಧ ಪರಾಭವಗೊಂಡರು.