ಬ್ಯಾಂಕಾಕ್‌(ಜ.11): ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಎಚ್‌. ಎಸ್‌ ಪ್ರಣಯ್‌ಗೆ ಮತ್ತೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಗೂ ಮುನ್ನ ನಡೆಸಲಾದ ಕೋವಿಡ್‌ 19 ಪರೀಕ್ಷೆಯಲ್ಲಿ ಈ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಹೌದು, ಜನವರಿ 12ರಿಂದ 17ರ ವರೆಗೆ ನಡೆಯಲಿರುವ ಯೊನೆಕ್ಸ್‌ ಥಾಯ್ಲೆಂಡ್ ಓಪನ್‌, ಜನವರಿ 19 ರಿಂದ 24ರವರೆಗೆ ನಡೆಯಲಿರುವ ಟಯೋಟ ಥಾಯ್ಲೆಂಡ್ ಓಪನ್‌ ಹಾಗೂ ಜನವರಿ 27ರಿಂದ 31ರವರೆಗೆ ಜರುಗಲಿರುವ ಎಚ್‌ಎಸ್‌ಬಿಸಿ ಬಿಡಬ್ಲ್ಯೂಎಫ್‌ ವರ್ಲ್ಡ್‌ ಟೂರ್ ಫೈನಲ್ಸ್‌ನಲ್ಲಿ ಭಾಗವಹಿಸಲು ಈ ಇಬ್ಬರು ಬ್ಯಾಡ್ಮಿಂಟನ್‌ ಪಟುಗಳು ಎದುರು ನೋಡುತ್ತಿದ್ದರು.

ಸೈನಾ ನೆಹ್ವಾಲ್ ಹಾಗೂ ಪ್ರಣಯ್‌ಗೆ ಕೋವಿಡ್‌ 19 ಸೋಂಕು ತಗುಲಿರುವುದು ಸೋಮವಾರ ನಡೆಸಿದ ಕೋವಿಡ್‌ ಟೆಸ್ಟ್‌ನಲ್ಲಿ ದೃಢಪಟ್ಟಿದೆ. ಹೀಗಾಗಿ ಇವರಿಬ್ಬರು ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಪಾರುಪಳ್ಳಿ ಕಶ್ಯಪ್‌ ಕೂಡಾ ಪ್ರಾಥಮಿಕ ಸಂಪರ್ಕ ಹೊಂದಿರುವುದರಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ತಿಳಿಸಿದೆ. ಹೀಗಾಗಿ ಈ ಮೂವರು ಬ್ಯಾಡ್ಮಿಂಟನ್‌ ಪಟುಗಳು ಯೊನೆಕ್ಸ್‌ ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದಿದ್ದು, ಇನ್ನುಳಿದ ಭಾರತೀಯ ಶಟ್ಲರ್‌ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಇಂದಿನಿಂದ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌

ಈ ಮೊದಲು ಸೈನಾ ನೆಹ್ವಾಲ್‌, ಪ್ರಣಯ್, ಕಶ್ಯಪ್‌ ಮಾತ್ರವಲ್ಲದೇ ಆರ್‌ಎಂವಿ ಗುರುಸಾಯಿದತ್ ಹಾಗೂ ಪ್ರಭವ್ ಚೋಪ್ರಾ ಕಳೆದ ತಿಂಗಳಷ್ಟೇ ಕೊರೋನಾ ಸೋಂಕಿಗೆ ತುತ್ತಾಗಿ ಆ ಬಳಿಕ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿ ಕೊರೋನಾದಿಂದ ಗುಣಮುಖರಾಗಿದ್ದರು.

ಇದೀಗ ಯೊನೆಕ್ಸ್‌ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು, ಕೀದಂಬಿ ಶ್ರೀಕಾಂತ್, ಸೌರಬ್ ವರ್ಮಾ, ಸಾತ್ವಿಕ್‌ರಾಜ್‌, ಚಿರಾಗ್‌ ಶೆಟ್ಟಿ ಮತ್ತು ಅಶ್ವಿನಿ ಪೊನ್ನಪ್ಪ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ.