ಚಂಡೀಗಢ(ಮೇ.21): ಭಾರತದ ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 91 ವರ್ಷದ ಮಿಲ್ಖಾ ಇಲ್ಲಿನ ತಮ್ಮ ನಿವಾಸದಲ್ಲಿ ಐಸೋಲೇಷನ್‌ನಲ್ಲಿದ್ದು, ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ತಿಳಿದುಬಂದಿದೆ. 

ಮಿಲ್ಖಾ ಅವರನ್ನು ಹೊರತುಪಡಿಸಿ ಅವರ ಕುಟುಂಬದ ಬೇರಾರ‍ಯವ ಸದಸ್ಯರಿಗೂ ಕೊರೋನಾ ಸೋಂಕು ತಗುಲಿಲ್ಲ. ತಮಗೆ ಸೋಂಕು ಹೇಗೆ ತಗುಲಿತೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿರುವ ಮಿಲ್ಖಾ ತಾವು ಆರೋಗ್ಯವಿರುವುದಾಗಿ ಹೇಳಿಕೊಂಡಿದ್ದಾರೆ.

ನಾನು ಆರೋಗ್ಯವಾಗಿದ್ದೇನೆ. ನನಗೆ ಜ್ವರ ಅಥವಾ ಕೆಮ್ಮಿನ ಲಕ್ಷಣಗಳು ಇಲ್ಲ. ನಾನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗಲಿದ್ದೇನೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆಯಷ್ಟೇ ನಾನು ಜಾಗಿಂಗ್‌ ಮಾಡಿದ್ದೇನೆ ಹಾಗೂ ಚಟುವಟಿಯಿಂದ ಇದ್ದೇನೆ ಎಂದು ಪ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಹೇಳಿದ್ದಾರೆ.

ಭಾರತದ ದಿಗ್ಗಜ ಮಾಜಿ ಓಟಗಾರ ಮಿಲ್ಖಾ ಸಿಂಗ್‌ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ 4 ಬಾರಿ ಚಿನ್ನದ ಪದಕ ಜಯಿಸಿದ್ದರು. ಇನ್ನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಆದರೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ 1960ರ ಓಲಿಂಪಿಕ್ಸ್‌ನ 400 ಮೀಟರ್ ಫೈನಲ್‌ ಸ್ಪರ್ಧೆಯಲ್ಲಿ ಕೂದಲೆಳೆ ಅಂತರದಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. 1960ರ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಸಿಂಗ್‌ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಮಿಲ್ಖಾ ಸಿಂಗ್ ಪುತ್ರ, ಖ್ಯಾತ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ಸದ್ಯ ದುಬೈನಲ್ಲಿ ನೆಲೆಸಿದ್ದು, ಈ ವಾರಾಂತ್ಯದಲ್ಲಿ ತವರಿಗೆ ಮರಳುವುದಾಗಿ ತಿಳಿಸಿದ್ದಾರೆ.

ಮಿಲ್ಖಾ ಸಿಂಗ್ ಜೀವನಾಧಾರಿತ ಚಿತ್ರ ಭಾಗ್ ಮಿಲ್ಖಾ ಭಾಗ್ 2013ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ ಕೊಳ್ಳೆಹೊಡೆದಿತ್ತು. ಮಿಲ್ಖಾ ಸಿಂಗ್ ಪಾತ್ರಕ್ಕೆ ಫರ್ಹಾನ್ ಅಖ್ತರ್ ಜೀವ ತುಂಬಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona