ವಿಂಬಲ್ಡನ್: ಗಾಯಗೊಂಡು ಮೊದಲ ಸುತ್ತಿನಲ್ಲೇ ಹೊರಬಿದ್ದ ಸೆರೆನಾ ವಿಲಿಯಮ್ಸ್
* ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಸೆರೆನಾ ವಿಲಿಯಮ್ಸ್
* 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಸೆರೆನಾ ಕನಸು ಭಗ್ನ
* ಬೆಲಾರಸ್‌ನ ಅಲೆಕ್ಸಾಂಡ್ರಾ ಸಾನೊವಿಚ್ ವಿರುದ್ದದ ಪಂದ್ಯದಲ್ಲಿ ಸರ್ವ್ ಮಾಡುವ ವೇಳೆ ಸೆರೆನಾ ಗಾಯಕ್ಕೊಳಗಾಗಿದ್ದಾರೆ
ಲಂಡನ್(ಜೂ.30): 24ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ತಾರಾ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕನಸು ಮತ್ತೊಮ್ಮೆ ಭಗ್ನವಾಗಿದೆ. ಮಂಗಳವಾರ ನಡೆದ ಮೊದಲ ಸುತ್ತಿನ ವಿಂಬಲ್ಡನ್ ಟೂರ್ನಿಯಲ್ಲಿ ಎಡಗಾಲಿಗೆ ಗಾಯಮಾಡಿಕೊಂಡ ಸೆರೆನಾ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಸೆಂಟರ್ ಕೋರ್ಟ್‌ನಲ್ಲಿ ಬೆಲಾರಸ್‌ನ ಅಲೆಕ್ಸಾಂಡ್ರಾ ಸಾನೊವಿಚ್ ವಿರುದ್ದದ ಪಂದ್ಯದ ವೇಳೆ ಸೆರೆನಾ ಗಾಯಕ್ಕೊಳಗಾಗಿದ್ದಾರೆ. ಟೂರ್ನಿಯಿಂದ ಹಿಂದೆ ಸರಿಯುವ ಮುನ್ನ ಸೆರೆನಾ ವಿಲಿಯಮ್ಸ್ ಮೊದಲ ಸೆಟ್‌ನಲ್ಲಿ 3-3ರ ಸಮಬಲ ಸಾಧಿಸಿದ್ದರು. ಈ ವೇಳೆ ನೋವಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆಡಲು ಸಾಧ್ಯವಾಗದಿದ್ದಾಗ ಟೆನಿಸ್ ಕೋರ್ಟ್ ತೊರೆಯಲು ತೀರ್ಮಾನ ತೆಗೆದುಕೊಂಡರು. ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಸೆರೆನಾ ಎರಡನೇ ಬಾರಿಗೆ ಮೊದಲ ಸುತ್ತಿನಲ್ಲೇ ಹೊರಬಿದ್ದಂತೆ ಆಗಿದೆ.
2018ರ ವಿಂಬಲ್ಡನ್ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದ ಸಾಧನೆ ಮಾಡಿದ್ದ ಪ್ರಸ್ತುತ 100ನೇ ಶ್ರೇಯಾಂಕಿತೆ ಅಲೆಕ್ಸಾಂಡ್ರಾ ಸಾನೊವಿಚ್, ಸೆರೆನಾ ಬಗ್ಗೆ ನನಗೆ ತುಂಬಾ ದುಃಖವಾಗಿದೆ. ಆಕೆ ಚಾಂಪಿಯನ್ ಆಟಗಾರ್ತಿ. ಟೆನಿಸ್‌ನಲ್ಲಿ ಒಮ್ಮೊಮ್ಮೆ ಇಂತಹ ಘಟನೆಯನ್ನು ನಡೆಯುತ್ತದೆ. ಆದಷ್ಟು ಬೇಗ ಆಕೆ ಗುಣಮುಖರಾಗಲಿ ಎಂದು ಬೆಲಾರಸ್ ಆಟಗಾರ್ತಿ ಹೇಳಿದ್ದಾರೆ.
ವಿಂಬಲ್ಡನ್ ಗ್ರ್ಯಾನ್ ಸ್ಲಾಂ: 2ನೇ ಸುತ್ತಿಗೆ ಜೋಕೋ, ಮರ್ರೆ ಲಗ್ಗೆ
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 7 ಬಾರಿ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸೆರೆನಾ 2016ರಲ್ಲಿ ಕಡೆಯ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ 2018 ಹಾಗೂ 2019ರ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇನ್ನು ಕಳೆದ ವರ್ಷ ಕೋವಿಡ್ 19 ಕಾರಣದಿಂದಾಗಿ ವಿಂಬಲ್ಡನ್ ಟೂರ್ನಿಯನ್ನು ರದ್ದು ಮಾಡಲಾಗಿತ್ತು.