ಬೆಂಗಳೂರು ಓಪನ್ ಟೆನಿಸ್: ಡಬಲ್ಸ್ ಫೈನಲ್‌ನಲ್ಲಿ ರಾಮ್‌ಕುಮಾರ್-ಪೂರವ್ ಜೋಡಿ ಎದುರು ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದ ಪೇಸ್ ಜೋಡಿ. ತವರಿನ ಕೊನೆಯ ಪಂದ್ಯದಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.
ಬೆಂಗಳೂರು(ಫೆ.16): ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಜೋಡಿ, ಎಟಿಪಿ ಚಾಲೆಂಜರ್ ಟೂರ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್‌ನಲ್ಲಿ ನೇರ ಸೆಟ್‌ಗಳ ಅಂತರದಲ್ಲಿ ಪರಾಭವ ಹೊಂದಿತು. ಈ ಸೋಲಿನ ಮೂಲಕ ತವರಲ್ಲಿ ಆಡಿದ ಕೊನೆಯ ಟೂರ್ನಿಯಲ್ಲಿ ಪೇಸ್ ಸೋಲಿನ ಆಘಾತ ಎದುರಿಸಿದರು. 2020 ವೃತ್ತಿ ಜೀವನದ ಅಂತಿಮ ವರ್ಷ ಎಂದು ಪೇಸ್ ಈಗಾಗಲೇ ಹೇಳಿದ್ದಾರೆ. ಭಾರತದಲ್ಲಿನ ಕೊನೆ ಟೂರ್ನಿಯಲ್ಲಿ ಪೇಸ್ ಗೆಲ್ಲಬೇಕು ಎಂದು ಅಭಿಮಾನಿಗಳು ಆಶಿಸಿದ್ದರು. ಆದರೆ ಈ ಸೋಲು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಲಿಯಾಂಡರ್ ಎನ್ನುವ ವಂಡರ್ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!
ಟೂರ್ನಿಯ ಆರಂಭದಿಂದಲೂ ಪೇಸ್ ಜೋಡಿ ಅದ್ಭುತ ಪ್ರದರ್ಶನ ತೋರಿತ್ತು. ಕ್ವಾರ್ಟರ್ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದಿದ್ದರಿಂದ ಫೈನಲ್‌ನಲ್ಲಿ ಪೇಸ್ ಜೋಡಿ ಜಯಭೇರಿ ಬಾರಿಸಲಿದೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಪ್ರಶಸ್ತಿ ಸುತ್ತಲ್ಲಿ ಪೇಸ್ ಜೋಡಿ ಭಾರತದವರೇ ಆದ ರಾಮ್‌ಕುಮಾರ್ ರಾಮನಾಥನ್ ಹಾಗೂ ಪೂರವ್ ರಾಜಾ ಜೋಡಿ ಎದುರು ಸೋಲುವ ಮೂಲಕ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿತು.
ಇದನ್ನೂ ಓದಿ: ಬೆಂಗಳೂರಲ್ಲಿ ಲಿಯಾಂಡರ್ ಪೇಸ್ ಕೊನೆಯ ಘರ್ಜನೆ..!
ಶನಿವಾರ ನಡೆದ ಡಬಲ್ಸ್ ಫೈನಲ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಆಸ್ಪ್ರೇಲಿಯಾದ ಎಬ್ಡೆನ್ ಮ್ಯಾಥ್ಯೂ ಜೋಡಿ, ಭಾರತದ ರಾಮ್‌ಕುಮಾರ್ ರಾಮನಾಥನ್ ಹಾಗೂ ಪೂರವ್ ರಾಜಾ ಜೋಡಿ ವಿರುದ್ಧ 0-6, 3-6 ನೇರ ಸೆಟ್‌ಗಳಲ್ಲಿ ಸೋಲುಂಡಿತು. ಕೇವಲ 55 ನಿಮಿಷಗಳ ಆಟದಲ್ಲಿ ಪೇಸ್ ಜೋಡಿ, ಸೋಲು ಅನುಭವಿಸಿತು. ಮೊದಲ ಸೆಟ್‌ನಲ್ಲಿ ಯಾವುದೇ ಸವ್‌ರ್ ಉಳಿಸಿಕೊಳ್ಳುವಲ್ಲಿ ವಿಫಲವಾದ ಪೇಸ್ ಜೋಡಿ, 2ನೇ ಸೆಟ್‌ನಲ್ಲಿ 3 ಸವ್‌ರ್ ಉಳಿಸಿಕೊಂಡಿತು. ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು.
