ಡೇವಿಸ್ ಕಪ್: ಪಾಕ್ ವಿರುದ್ಧ ಭಾರತ ಕ್ಲೀನ್ ಸ್ವೀಪ್
ಟೆನಿಸ್ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು 4-0 ಅಂತರದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿಯುವ ಮೂಲಕ ವಿಶ್ವ ಗುಂಪಿನ ಅರ್ಹತಾ ಸುತ್ತನ್ನು ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಜಕಸ್ತಾನ(ಡಿ.01): ಏಷ್ಯಾ/ಓಷಿಯಾನಿಯಾ ಡೇವಿಸ್ ಕಪ್ ಟೆನಿಸ್ ಪಂದ್ಯದ ಮೊದಲನೇ ಸುತ್ತಿನ ಹಣಾಹಣಿಯಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 4-0ಯಿಂದ ಗೆಲುವು ಪಡೆದಿದೆ. ಈ ಗೆಲುವಿನೊಂದಿಗೆ ಭಾರತ ಟೆನಿಸ್ ತಂಡ ಮುಂದಿನ ವರ್ಷ ಮಾರ್ಚ್ನಲ್ಲಿ ಕ್ರೊವೇಶಿಯಾದಲ್ಲಿ ನಡೆಯಲಿರುವ ವಿಶ್ವ ಗುಂಪಿನ ಅರ್ಹತಾ ಸುತ್ತನ್ನು ಪ್ರವೇಶಿಸಿದೆ.
ಡೇವಿಸ್ ಕಪ್: ಸಿಂಗಲ್ಸ್‌ನಲ್ಲಿ ಸುಮಿತ್, ರಾಮ್‌ಕುಮಾರ್‌ಗೆ ಜಯ
2ನೇ ದಿನವಾದ ಶನಿವಾರ ಇಲ್ಲಿನ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ ನಡೆದ ಡಬಲ್ಸ್‌ನಲ್ಲಿ ಭಾರತದ ತಾರಾ ಟೆನಿಸಿಗ ಲಿಯಾಂಡರ್ ಪೇಸ್ ಹಾಗೂ ಜೀವನ್ ನೆಡುಂಚಿಳಿಯಾನ್ ಜೋಡಿ, ಪಾಕಿಸ್ತಾನದ ಯುವ ಜೋಡಿ ಮೊಹಮ್ಮದ್ ಶೋಯೆಬ್ ಹಾಗೂ ಹುಫೈಜಾ ಅಬ್ದುಲ್ ರೆಹ್ಮಾನ್ ವಿರುದ್ಧ 6-1, 6-3 ನೇರ ಸೆಟ್ಗಳಿಂದ ಜಯಿಸಿದರು. 53 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಪೇಸ್-ಜೀವನ್ ಜೋಡಿ ಭಾರತಕ್ಕೆ 3-0 ಮುನ್ನಡೆ ಒದಗಿಸಿತು.
ರಿವರ್ಸ್ ಸಿಂಗಲ್ಸ್ನ ಮೊದಲ ಪಂದ್ಯದಲ್ಲಿ ಭಾರತದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್, ಪಾಕಿಸ್ತಾನದ ಯೂಸಫ್ ಖಲೀಲ್ ಎದುರು 6-1, 6-0 ನೇರ ಸೆಟ್ಗಳಲ್ಲಿ ಗೆಲುವು ಪಡೆದರು. ಶುಕ್ರವಾರ ನಡೆದ ಮೊದಲ ದಿನದಾಟದಲ್ಲಿ 2 ಸಿಂಗಲ್ಸ್ ಪಂದ್ಯ ಗೆದ್ದು 2-0 ಮುನ್ನಡೆ ಸಾಧಿಸಿದ್ದ ಭಾರತ, 2ನೇ ದಿನದಾಟದಲ್ಲಿ ಡಬಲ್ಸ್ ಪಂದ್ಯ ಗೆಲ್ಲುವ ಮೂಲಕ 3-0 ಯಿಂದ ವಿಶ್ವ ಗುಂಪಿನ ಅರ್ಹತಾ ಸುತ್ತನ್ನು ಪ್ರವೇಶಿಸಿತ್ತು. ಆದರೂ 4ನೇ ಪಂದ್ಯ ಆಡಿಸಲಾಗಿದ್ದು, ಪಾಕಿಸ್ತಾನವನ್ನು 4-0ಯಿಂದ ಭಾರತ ಬಗ್ಗುಬಡಿಯಿತು.
ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಫೈನಲ್‌ಗೆ ಲಗ್ಗೆ ಇಟ್ಟ ಸೌರಭ್!
ರಿವರ್ಸ್ ಸಿಂಗಲ್ಸ್‌ನಲ್ಲಿ 2ನೇ ಪಂದ್ಯ ಅಥವಾ ಒಟ್ಟಾರೆ 5ನೇ ಪಂದ್ಯ ಆಡದಿರಲು ಎರಡೂ ತಂಡಗಳು ಒಮ್ಮತದ ನಿರ್ಧಾರ ತೆಗೆದುಕೊಂಡವು. 5ನೇ ಪಂದ್ಯ ಆಡದಿರಲು ಡೇವಿಸ್ ಕಪ್ ನಿಯಮಗಳು ಅನುಮತಿ ಇದೆ. ಇದರಿಂದ ಹುಫೈಜಾ ಅಬ್ದುಲ್ ರೆಹಮನ್ ಹಾಗೂ ರಾಮ್ಕುಮಾರ್ ರಾಮನಾಥನ್ ನಡುವಣ ರಿವರ್ಸ್ ಸಿಂಗಲ್ಸ್ ಪಂದ್ಯ ನಡೆಯಲಿಲ್ಲ.
ಮಾರ್ಚ್ನಲ್ಲಿ ವಿಶ್ವ ಗುಂಪು!
ವಿಶ್ವ ಗುಂಪಿನ ಅರ್ಹತಾ ಸುತ್ತಲ್ಲಿ 24 ರಾಷ್ಟ್ರಗಳು ಮುಖಾಮುಖಿ ಆಗಲಿದ್ದು, ಗೆದ್ದ 12 ರಾಷ್ಟ್ರಗಳು ನವೆಂಬರ್ನಲ್ಲಿ ನಡೆಯಲಿರುವ ಫೈನಲ್ಸ್‌ಗೆ ನೇರ ಪ್ರವೇಶಿಸಲಿವೆ. ಒಟ್ಟು 18 ರಾಷ್ಟ್ರಗಳು ಡೇವಿಸ್ ಕಪ್ ಫೈನಲ್ಸ್ ಆಡಲಿದ್ದು, 2019ನೇ ಸಾಲಿನ 6 ಸೆಮಿಫೈನಲ್ಗೇರಿರುವ ತಂಡಗಳು ಈಗಾಗಲೇ ಅರ್ಹತೆ ಸಂಪಾದಿಸಿವೆ. ಕೆನಡಾ, ಗ್ರೇಟ್ ಬ್ರಿಟನ್, ರಷ್ಯಾ, ಸ್ಪೇನ್ ಹಾಗೂ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಫ್ರಾನ್ಸ್ ಹಾಗೂ ಸರ್ಬಿಯಾ ಫೈನಲ್ಸ್ ಆಡಲಿವೆ. ಮಾ.6 ಮತ್ತು 7ರಂದು ನಡೆಯುವ ವಿಶ್ವ ಗುಂಪಿನ ಅರ್ಹತಾ ಸುತ್ತಿನಲ್ಲಿ ಭಾರತ ವಿಶ್ವ ನಂ.2 ಕ್ರೊವೇಶಿಯಾವನ್ನು ಎದುರಿಸಲಿದೆ. ಕ್ರೊವೇಶಿಯಾ ಮಣಿಸಿದರೆ ಭಾರತ ನೇರವಾಗಿ ಮ್ಯಾಡ್ರಿಡ್ನ ಡೇವಿಸ್ ಕಪ್ ಫೈನಲ್ಸ್ ಹಂತಕ್ಕೆ ಸೇರಲಿದೆ.
ದಾಖಲೆ ಉತ್ತಮ ಪಡಿಸಿಕೊಂಡ ಪೇಸ್
ಕಳೆದ ವರ್ಷದ ಡೇವಿಸ್ ಕಪ್‌ನಲ್ಲಿ 43ನೇ ಡಬಲ್ಸ್ ಜಯ ಸಾಧಿಸಿದ್ದ ಪೇಸ್, ಇಟಲಿಯ ನಿಕೋಲಾ ಪೀಟ್ರಾಂಗೇಲಿ (42) ಹಿಂದಿಕ್ಕಿ ಡೇವಿಸ್ ಕಪ್ನ ಅತ್ಯಂತ ಯಶಸ್ವಿ ಆಟಗಾರನೆಂಬ ದಾಖಲೆ ಬರೆದಿದ್ದರು. ಇದೀಗ ಪಾಕ್ ವಿರುದ್ದದ ಡಬಲ್ಸ್‌ನಲ್ಲಿ ಮತ್ತೊಂದು ಜಯ ಪಡೆಯುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಪೇಸ್ 57ನೇ ಪಂದ್ಯದಲ್ಲಿ 44ನೇ ಜಯ ಪಡೆದಿದ್ದಾರೆ. ನಿಕೋಲಾ 66 ಪಂದ್ಯಗಳಲ್ಲಿ 42 ಜಯ ಕಂಡಿದ್ದಾರೆ.