Asianet Suvarna News Asianet Suvarna News

Laver Cup 2022: ದಿಗ್ಗಜರ ಸಮಾಗಮ, ಒಟ್ಟಾಗಿ ಟೆನಿಸ್ ಆಡಲಿದ್ದಾರೆ ಫೆಡರರ್‌-ನಡಾಲ್‌..!

* ಲೇವರ್ ಕಪ್ ಟೆನಿಸ್‌ ಟೂರ್ನಿಯಲ್ಲಿ ರೋಜರ್ ಫೆಡರರ್-ರಾಫೆಲ್ ನಡಾಲ್‌ ಒಟ್ಟಾಗಿ ಆಡಲಿದ್ದಾರೆ

* ಸೆಪ್ಟೆಂಬರ್ 23-25ರವರೆಗೆ ನಡೆಯಲಿರುವ ಲೇವರ್‌ ಕಪ್‌ ಟೆನಿಸ್ ಟೂರ್ನಿ

* ದಿಗ್ಗಜರ ಸಮಾಗಮವನ್ನು ಕಣ್ತುಂಬಿಕೊಳ್ಳಲು ರೆಡಿಯಾದ ಟೆನಿಸ್ ಅಭಿಮಾನಿಗಳು

Laver Cup 2022 Tennis Legend Roger Federer Rafael Nadal confirmed to compete together kvn
Author
Bengaluru, First Published Feb 4, 2022, 12:21 PM IST

ಲಂಡನ್‌(ಫೆ.04): ವಿಶ್ವ ಟೆನಿಸ್ ಜಗತ್ತಿನ ಇಬ್ಬರು ದಿಗ್ಗಜ ಆಟಗಾರರು ಒಟ್ಟಾಗಿ ಆಡುವ ಕಾಲ ಮತ್ತೊಮ್ಮೆ ಕೂಡಿ ಬಂದಿದೆ. ಲಂಡನ್‌ನ O2 ಅರೇನಾ ಒಳಾಂಗಣ ಸ್ಟೇಡಿಯಂನಲ್ಲಿ ಮುಂಬರುವ ಸೆಪ್ಟೆಂಬರ್ 23-25ರವರೆಗೆ ನಡೆಯಲಿರುವ ಲೇವರ್‌ ಕಪ್‌ ಟೆನಿಸ್ ಟೂರ್ನಿಯಲ್ಲಿ ರಾಫೆಲ್ ನಡಾಲ್ (Rafael Nadal) ಹಾಗೂ ರೋಜರ್ ಫೆಡರರ್‌ (Roger Federer) ಒಟ್ಟಾಗಿ ಕಣಕ್ಕಿಳಿಯಲಿದ್ದಾರೆ. ವಿಶ್ವ ಟೆನಿಸ್‌ನ ಇಬ್ಬರು ಶ್ರೇಷ್ಠ ಟೆನಿಸ್‌ ಆಟಗಾರರು (Tennis Players) ಒಟ್ಟಾಗಿ ಆಡುವುದನ್ನು ಕಣ್ತುಂಬಿಕೊಳ್ಳಲು ಟೆನಿಸ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ

ಹೌದು. ವಿಶ್ವ ಶ್ರೇಷ್ಠ ಟೆನಿಸ್‌ ಆಟಗಾರರಾದ ರೋಜರ್‌ ಫೆಡರರ್‌ ಮತ್ತು ರಾಫೆಲ್‌ ನಡಾಲ್‌ ಇಬ್ಬರೂ ಜಂಟಿಯಾಗಿ ಮುಂದಿನ ಆವೃತ್ತಿಯ ಲೇವರ್‌ ಕಪ್‌ನಲ್ಲಿ (Laver Cup 2022) ಆಡುವುದಾಗಿ ಹೇಳಿದ್ದಾರೆ. 2017ರಲ್ಲಿ ಯುರೋಪ್‌ ತಂಡವನ್ನು ಪ್ರತಿನಿಧಿಸಿದ್ದ ಈ ಜೋಡಿ, ತಂಡ ಲೇವರ್‌ ಕಪ್‌ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಡಾಲ್‌ ಇತ್ತೀಚೆಗಷ್ಟೇ ಆಸ್ಪ್ರೇಲಿಯನ್‌ ಓಪನ್‌ (Australian Open) ಗೆಲ್ಲುವ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ದಾಖಲೆಯ 21 ಗ್ರ್ಯಾನ್‌ಸ್ಲಾಂಗಳನ್ನು ಜಯಿಸಿದ್ದು, ಫೆಡರರ್‌ 20 ಗ್ರಾನ್‌ಸ್ಲಾಂಗಳನ್ನು ಗೆದ್ದಿದ್ದಾರೆ. ಸೆಪ್ಟೆಂಬರ್‌ನಿಂದ ಲಂಡನ್‌ನಲ್ಲಿ ನಡೆಯಲಿರುವ ಲೇವರ್‌ ಕಪ್‌ನಲ್ಲಿ ಇವರು ಯುರೋಪ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದೀಗ ರೋಜರ್ ಫೆಡರರ್ ಹಾಗೂ ರಾಫೆಲ್‌ ನಡಾಲ್ ಯೂರೋಪ್ ತಂಡದ ಪರ ಮೂರನೇ ಬಾರಿಗೆ ಒಟ್ಟಾಗಿ ಡಬಲ್ಸ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವಿಬ್ಬರು ಲಂಡನ್‌ನಲ್ಲಿ ಒಟ್ಟಾಗಿ ಡಬಲ್ಸ್ ಆಡೋಣವೆಂದು ರೋಜರ್ ಫೆಡರರ್ ಅವರಿಗೆ ಸಲಹೆ ನೀಡಿದೆ. ಅದಕ್ಕವರು ಸಮ್ಮತಿ ಸೂಚಿಸಿದರು. ಈಗ ನಮ್ಮ ಕ್ಯಾಪ್ಟನ್‌ ಬಿಜ್ರೋನ್ ಅವರ ಮನವೊಲಿಸಬೇಕಿದೆ. ನನ್ನ ಟೆನಿಸ್ ವೃತ್ತಿಜೀವನದ ಬೆಳವಣಿಗೆಯಲ್ಲಿ ರೋಜರ್ ಫೆಡರರ್ ಮಹತ್ವದ ಪಾತ್ರ ವಹಿಸಿದ್ದಾರೆ. ಅವರೊಬ್ಬ ಒಳ್ಳೆಯ ಎದುರಾಳಿ ಹಾಗೂ ಅತ್ಯುತ್ತಮ ಗೆಳೆಯ. ಯೂರೂಪ್ ತಂಡದ ಪರ ಒಟ್ಟಾಗಿ ಕಣಕ್ಕಿಳಿಯುತ್ತಿರುವುದಕ್ಕೆ ನಾನು ಥ್ರಿಲ್ ಆಗಿದ್ದೇನೆ. ಒಂದು ವೇಳೆ ನಾವಿಬ್ಬರು ಡಬಲ್ಸ್‌ನಲ್ಲಿ ಮತ್ತೊಮ್ಮೆ ಟೆನಿಸ್ ಕೋರ್ಟ್‌ ಹಂಚಿಕೊಂಡರೆ, ವೃತ್ತಿಜೀವನದ ಈ ಹಂತದಲ್ಲಿ ನಮ್ಮಿಬ್ಬರಿಗೂ ಒಂದೊಳ್ಳೆಯ ಅನುಭವವಾಗಲಿದೆ ಎಂದು ಲೇವರ್‌ ಕಪ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ 21 ಗ್ರ್ಯಾನ್ ಸ್ಲಾಂ ಒಡೆಯ ರಾಫೆಲ್ ನಡಾಲ್ ಅಭಿಪ್ರಾಯಪಟ್ಟಿದ್ದಾರೆ.

 
 
 
 
 
 
 
 
 
 
 
 
 
 
 

A post shared by Laver Cup (@lavercup)

ಇದೇ ವೇಳೆ ಸ್ವಿಸ್ ಟೆನಿಸ್‌ ದಿಗ್ಗಜ ರೋಜರ್ ಫೆಡರರ್, ನಾನು ಈ ವರ್ಷಾಂತ್ಯದ ವೇಳೆಗೆ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಲು ಎದುರು ನೋಡುತ್ತಿದ್ದೇನೆ. ಅಂದಹಾಗೆ ನನ್ನ ಯೋಜನೆಯಲ್ಲಿ ಲೇವರ್‌ ಕಪ್‌ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಲೋಚನೆಯೂ ಇದೆ. ರಾಫೆಲ್ ನಡಾಲ್ ಅವರೊಬ್ಬ ಅದ್ಭುತ ವ್ಯಕ್ತಿ ಹಾಗೂ ನನ್ನ ಹಾಗೂ ಅಸಂಖ್ಯಾತ ಜನರ ಪಾಲಿಗೆ ಅವರು ಸ್ಪೂರ್ತಿಯ ಚಿಲುಮೆ. ಕಳೆದ ವರ್ಷ ಬೋಸ್ಟ್ವಾನಾದಲ್ಲಿ ನಡೆದ ಲೇವರ್ ಕಪ್ ಮುಕ್ತಾಯದ ಬಳಿಕ ರಾಫೆಲ್‌ ನಡಾಲ್ ಸಾಮಾಜಿಕ ಜಾಲತಾಣದ ಮೂಲಕ ನನಗೆ ಸಂದೇಶ ಕಳಿಸಿದ್ದರು. ಆ ಸಂದೇಶದಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಲೇವರ್‌ ಕಪ್‌ನಲ್ಲಿ ನಾವಿಬ್ಬರು ಒಟ್ಟಾಗಿ ಡಬಲ್ಸ್ ಆಡೋಣ ಎಂದು ಸಲಹೆ ನೀಡಿದ್ದರು. ಖಂಡಿತವಾಗಿಯೂ ನಾನಂತೂ ಲೇವರ್‌ ಕಪ್‌ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು 20 ಗ್ರ್ಯಾನ್ ಸ್ಲಾಂ ಒಡೆಯ ರೋಜರ್ ಫೆಡರರ್ ಹೇಳಿದ್ದಾರೆ.

Australian Open: ರೂ 8 ಕೋಟಿ ಮೌಲ್ಯದ ವಾಚ್‌ ತೊಟ್ಟು ಫೈನಲ್‌ ಪಂದ್ಯವನ್ನಾಡಿದ ರಾಫೆಲ್ ನಡಾಲ್‌..!

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೂ ಮುನ್ನ ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೊವಾಕ್ ಜೋಕೋವಿಚ್ (Novak Djokovic) ತಲಾ 20 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದರು. ಗಾಯದ ಸಮಸ್ಯೆಯಿಂದಾಗಿ 2022ರ ಆಸ್ಟ್ರೇಲಿಯನ್ ಓಪನ್‌ನಿಂದ ರೋಜರ್ ಫೆಡರರ್ ಹಿಂದೆ ಸರಿದಿದ್ದರು. ಇನ್ನು ಕೋವಿಡ್‌ ಲಸಿಕೆ ಪಡೆಯದ ಹಿನ್ನೆಲೆಯಲ್ಲಿ ನೊವಾಕ್ ಜೋಕೋವಿಚ್‌ಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಸ್ಪೇನ್ ಟೆನಿಸಿಗ ರಾಫೆಲ್‌ ನಡಾಲ್ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ರೋಚಕವಾಗಿ ಮಣಿಸಿ 21ನೇ ಟೆನಿಸ್ ಗ್ರ್ಯಾನ್ ಸ್ಲಾಂ ಗೆದ್ದು ಇತಿಹಾಸ ನಿರ್ಮಿಸಿದ್ದರು.

Follow Us:
Download App:
  • android
  • ios