Kolkata Marathon 2022 ಕೋಲ್ಕತಾ ಮ್ಯಾರಾಥಾನ್ ಗೆದ್ದ ರೂಪನ್ ದೇಬ್‌ನಾಥ್!
- 2 ಗಂಟೆ 42 ನಿಮಿಷ 39 ಸೆಕೆಂಡ್‌ಗಳಲ್ಲಿ ಓಟ ಮುಕ್ತಾಯಗೊಳಿಸಿದ ರೂಪನ್
- ಕೋಲ್ಕತಾ ಮ್ಯಾರಾಥಾನ್‌ನಲ್ಲಿ 6,000 ಕ್ಕೂ ಹೆಚ್ಚು ಓಟಗಾರರು ಭಾಗಿ
- ಕೊರೋನಾ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಮ್ಯಾರಥಾನ್ ಆಯೋಜನೆ
ಕೋಲ್ಕತಾ(ಮಾ.22) : ಖ್ಯಾತ ದೂರಗಾಮಿ ಓಟಗಾರ ರೂಪನ್ ದೇಬ್‌ನಾಥ್ ಭಾನುವಾರ ನಡೆದ 2022ರ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಕೋಲ್ಕತಾ ಮ್ಯಾರಾಥಾನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಸುಡು ಬಿಸಿಲಿನಲ್ಲಿ ಆಕರ್ಷಕ ಪ್ರದರ್ಶನ ತೋರಿದ ದೇಬನಾಥ್ 2 ಗಂಟೆ 42 ನಿಮಿಷ 39 ಸೆಕೆಂಡ್‌ಗಳಲ್ಲಿ ಓಟ ಮುಕ್ತಾಯಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ದುಲು ಸರ್ಕಾರ್ (2 ಗಂಟೆ 46 ನಿಮಿಷ 31 ಸೆಕೆಂಡ್) ಹಾಗೂ ನಿಮೇಶ್ ಚೆಟ್ರಿ (3 ಗಂಟೆ 5 ನಿಮಿಷ 48 ಸೆಕೆಂಡ್) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನಗಳನ್ನು ಪಡೆದರು.
‘ಸಿಟಿ ಆಫ್ ಜಾಯ್’ ಎಂದೇ ಕರೆಸಿಕೊಳ್ಳುವ ಕೋಲ್ಕತಾ 6,000 ಕ್ಕೂ ಹೆಚ್ಚು ಓಟಗಾರರಿಂದ ಸ್ಪರ್ಧೆಗೆ ವೇದಿಕೆಯಾಯಿತು. 13 ತಿಂಗಳುಗಳ ಬಳಿಕ ಈ ಪ್ರಮಾಣದ ಸ್ಪರ್ಧೆಗೆ ನಗರ ಸಾಕ್ಷಿಯಾಯಿತು. ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು.
‘ಬಹಳ ದಿನಗಳ ಬಳಿಕ ಪೂರ್ಣ ಪ್ರಮಾಣದ ಮ್ಯಾರಾಥಾನ್ ಓಟವನ್ನು ಆಯೋಜಿಸುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಆಗುತ್ತಿದೆ. ಸ್ಪರ್ಧೆಗೆ ಅಮೋಘ ಪ್ರತಿಕ್ರಿಯೆ ದೊರೆತಿದ್ದು, ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ’ ಎಂದರು ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‌ನ ಸಿಎಂಒ ಕಾರ್ತಿಕ್ ರಾಮನ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೋವಿಡ್‍ನಿಂದ ಸ್ಥಗಿತಗೊಂಡಿದ್ದ ಮುಂಬೈ ಹಾಫ್ ಮ್ಯಾರಾಥಾನ್ ಮತ್ತೆ ಆರಂಭ, ಶುಭಹಾರೈಸಿದ ಸಚಿನ್!
ಮ್ಯಾರಾಥಾನ್ ಆಯೋಜಕರಾದ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯು ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದು, ಅವು ಸರಿಯಾದ ರೀತಿಯಲ್ಲಿ ಪಾಲನೆ ಆಗುವಂತೆ ಮೇಲ್ವಿಚಾರಣೆ ನಡೆಸಿತು. ಐತಿಹಾಸಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಓಟವು, ಬಿಸ್ವಾ ಬಾಂಗ್ಲಾ ದ್ವಾರದ ಮೂಲಕ ಸಾಗಿ ಪುನಃ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲೇ ಮುಕ್ತಾಯಗೊಂಡಿತು.
ವಿಜೇತರನ್ನು ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಖಾತೆ ಸಚಿವರಾಗಿರುವ ಸುಜಿತ್ ಬೋಸ್, ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ| ರೂಪಾಲಿ ಬಸು, ಎನ್‌ಇಬಿ ಸ್ಪೋರ್ಟ್ಸ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ(ಸಿಎಂಡಿ) ನಾಗರಾಜ ಅಡಿಗ, ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‌ನ ಸಿಎಂಒ ಕಾರ್ತಿಕ್ ರಾಮನ್ ಸನ್ಮಾನಿಸಿ ಗೌರವಿಸಿದರು.
ಮಹಿಳೆಯರ ಪೂರ್ಣ ಮ್ಯಾರಾಥಾನ್ ಓಟದಲ್ಲಿ ಸ್ಥಳೀಯ ಅಥ್ಲೀಟ್ ತಮಾಲಿ ಬಸು (4 ಗಂಟೆ 01 ನಿಮಿಷ 12 ಸೆಕೆಂಡ್) ಚಾಂಪಿಯನ್ ಪಟ್ಟ ಅಲಂಕರಿಸಿದರು. ಶೃತಿ ಅಗರ್‌ವಾಲ್( 4 ಗಂಟೆ 39 ನಿಮಿಷ 15 ಸೆಕೆಂಡ್) ಹಾಗೂ ಪ್ರೇಮಾ ರಾಜಾರಾಮ್(5 ಗಂಟೆ 07 ನಿಮಿಷ 27 ಸೆಕೆಂಡ್) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ನವದೆಹಲಿ ಮ್ಯಾರಾಥಾನ್ ಗೆದ್ದ ಶ್ರೀನು ಬುಗಥಾ, ಸುಧಾ ಸಿಂಗ್!
ಹಾಫ್ ಮ್ಯಾರಾಥಾನ್‌ನಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. 2000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸಾಹಿನುರ್ ಮೊಲ್ಲಾ (1 ಗಂಟೆ 14 ನಿಮಿಷ 02ಸೆಕೆಂಡ್) ಮೊದಲ ಸ್ಥಾನ ಪಡೆದರೆ, ರಿಷಿಕೇಶ್ ಚಕ್ರವರ್ತಿ (1 ಗಂಟೆ 15 ನಿಮಿಷ 28 ಸೆಕೆಂಡ್) ಹಾಗೂ ಪ್ರಶಾಂತ್ ರೊಪಲ್ (1ಗಂಟೆ 19 ನಿಮಿಷ 01 ಸೆಕೆಂಡ್) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನಗಳನ್ನು ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ2020ರ ವಿಜೇತೆ ಸಬೀನಾ ಕಾಥೂನ್(1 ಗಂಟೆ 42 ನಿಮಿಷ 03 ಸೆಕೆಂಡ್) ಮತ್ತೊಮ್ಮೆ ಪ್ರಶಸ್ತಿ ಜಯಿಸಿದರು. ಅನಿತಾ ದಾಸ್ (1 ಗಂಟೆ49 ನಿಮಿಷ 04 ಸೆಕೆಂಡ್) ರನ್ನರ್-ಅಪ್ ಸ್ಥಾನ ಪಡೆದರೆ, ಪ್ರಿಯಾಂಕ ಗುಪ್ತಾ (1 ಗಂಟೆ 50 ನಿಮಿಷ 38 ಸೆಕೆಂಡ್) 3ನೇ ಸ್ಥಾನಕ್ಕೆ ಖುಷಿ ಪಟ್ಟರು.
10ಕೆ (10 ಕಿಲೋ ಮೀಟರ್) ಓಟದಲ್ಲಿ ಸಯನ್ ದಾಸ್ (30 ನಿಮಿಷ 42 ಸೆಕೆಂಡ್), ಸುಪ್ರೊಭಾತ್ ಮೊಹಾಪಾತ್ರ(36 ನಿಮಿಷ 29 ಸೆಕೆಂಡ್) ಹಾಗೂ ಮಿನಿತಾ ಬಿರ್ಮನ್ (37 ನಿಮಿಷ, 15 ಸೆಕೆಂಡ್) ಮೊದಲ ಮೂರು ಸ್ಥಾನಗಳನ್ನು ಪಡೆದರು. ಮಹಿಳೆಯರ ಪೈಕಿ ಶಿಪ್ರಾ ಸರ್ಕರ್(40 ನಿಮಿಷ 32 ಸೆಕೆಂಡ್) , ಕ್ಲೇರಿ ಜೋನ್ಸ್ (42 ನಿಮಿಷ 48 ಸೆಕೆಂಡ್) ಹಾಗೂ ಸ್ನೇಹಾ ನಿಯೊಗಿ(47 ನಿಮಿಷ 09 ಸೆಕೆಂಡ್) ವಿಜೇತರಾಗಿ ಹೊರಹೊಮ್ಮಿದರು.