* ತಿರುಪತಿಯಲ್ಲಿ ಬ್ಯಾಡ್ಮಿಂಟನ್ ಅಕಾಡಮಿ ಸ್ಥಾಪಿಸಲು ಮುಂದಾದ ಕಿದಂಬಿ ಶ್ರೀಕಾಂತ್* ಅಕಾಡಮಿ ಸ್ಥಾಪಿಸಲು 5 ಎಕರೆ ಭೂಮಿ ಮಂಜೂರು ಮಾಡುವುದಾಗಿ ಘೋಷಿಸಿದ ಆಂಧ್ರ ಸಿಎಂ* ಇತ್ತೀಚೆಗಷ್ಟೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಶ್ರೀಕಾಂತ್ 

ತಿರುಪತಿ(ಜ.01): ಭಾರತದ ತಾರಾ ಶಟ್ಲರ್, ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್(Kidambi Srikanth), ಆಂಧ್ರಪ್ರದೇಶದ ತಿರುಪತಿಯಲ್ಲಿ (Tirupati) ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸುವುದಾಗಿ ಘೋಷಿಸಿದ್ದಾರೆ. ಶುಕ್ರವಾರ(ಡಿಸೆಂಬರ್ 31) ತಮ್ಮ ಕುಟುಂಬದ ಸಮೇತ ತಿರುಪತಿಗೆ ಭೇಟಿ ನೀಡಿದ್ದ ಅವರು, ಸ್ಥಳೀಯ ಸಂಸದರೊಂದಿಗೆ ಚರ್ಚೆ ನಡೆಸಿದರು. ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಲು ಶ್ರೀಕಾಂತ್‌ಗೆ 5 ಎಕರೆ ಸರ್ಕಾರಿ ಜಾಗ ನೀಡುವುದಾಗಿ ಇತ್ತೀಚೆಗಷ್ಟೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ (Jagan Mohan Reddy) ಘೋಷಿಸಿದ್ದರು.

ಇದರ ಬೆನ್ನಲ್ಲೇ ಕಿದಂಬಿ ಶ್ರೀಕಾಂತ್, ಅಕಾಡೆಮಿ ಆರಂಭಿಸಲು ಜಾಗದ ಹುಡುಕಾಟ ಆರಂಭಿಸಿದ್ದಾರೆ. ಇನ್ನೊಂದು ವರ್ಷದೊಳಗಾಗಿ ಅಕಾಡೆಮಿ ಆರಂಭಿಸುವುದಾಗಿ ಕಿದಂಬಿ ಶ್ರೀಕಾಂತ್ ತಿಳಿಸಿದ್ದಾರೆ. ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯು ದೇಶದ ಮಾದರಿ ಬ್ಯಾಡ್ಮಿಂಟನ್ ಅಕಾಡಮಿ ಎನಿಸಿದೆ. ನಾನು ಕೂಡಾ ಅಂತಹದ್ದೇ ರೀತಿಯ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದುಕೊಂಡಿದ್ದೇನೆ. ಇದು ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗದ ಬ್ಯಾಡ್ಮಿಂಟನ್‌ ಆಸಕ್ತರಿಗೆ ನೆರವಾಗಲಿದೆ. ನನ್ನ ಪರಮೋಚ್ಚ ಗುರಿಯೇನಿದ್ದರೂ, ಈ ಅಕಾಡೆಮಿಯ ಮೂಲಕ ವಿಶ್ವದರ್ಜಯೆ ಶಟ್ಲರ್‌ಗಳು ಹೊರಹೊಮ್ಮಬೇಕು ಎನ್ನುವುದಾಗಿದೆ. ಈ ಅಕಾಡೆಮಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ನಮ್ಮ ದೇಶವನ್ನು ಪ್ರತಿನಿಧಿಸುವಂತಾಗಬೇಕು ಎನ್ನುವ ಬಯಕೆಯಿದೆ ಎಂದು ಕಿದಂಬಿ ಶ್ರೀಕಾಂತ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕಿದಂಬಿ ಶ್ರೀಕಾಂತ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಶಟ್ಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದರು. 2021ನೇ ಸಾಲಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿಯೇ ಭಾರತದ ಮತ್ತೋರ್ವ ಯುವ ಶಟ್ಲರ್‌ ಲಕ್ಷ್ಯ ಸೆನ್‌ (Lakshya Sen) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಒಂದೇ ಆವೃತ್ತಿಯ ಭಾರತದ ಇಬ್ಬರು ಪುರುಷ ಶಟ್ಲರ್‌ಗಳು ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

Scroll to load tweet…

BWF Rankings: ಎರಡು ವರ್ಷಗಳ ಬಳಿಕ ಮತ್ತೆ ಟಾಪ್ 10ನೊಳಗೆ ಎಂಟ್ರಿ ಕೊಟ್ಟ ಶ್ರೀಕಾಂತ್

ಜನವರಿ 11ರಿಂದ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌

ನವದೆಹಲಿ: ಜನವರಿ 11ರಿಂದ ದೆಹಲಿಯಲ್ಲಿ 2022ರ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ (Indian Open Badminton) ಟೂರ್ನಿ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಹಾಗೂ ಲಕ್ಷ್ಯ ಸೆನ್‌ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಟೂರ್ನಿ ಈ ಬಾರಿ ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೇ ನಡೆಯಲಿದ್ದು, ಟೂರ್ನಿಯ ಒಟ್ಟು ಬಹುಮಾನ ಮೊತ್ತ ಸುಮಾರು 3 ಕೋಟಿ ರುಪಾಯಿ ಆಗಿದೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಟೂರ್ನಿ ನಡೆದಿರಲಿಲ್ಲ.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಘಕ್ಕೆ ಅಧ್ಯಕ್ಷರಾಗಿ ಮನೋಜ್‌ ಆಯ್ಕೆ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಮನೋಜ್‌ ಕುಮಾರ್‌ ಜಿ.ಹೊಸಪೇಟಿ ಮಠ್‌, ಪ್ರಧಾನ ಕಾರ್ಯದರ್ಶಿಯಾಗಿ ಪಿ.ರಾಜೇಶ್‌ ಆಯ್ಕೆಯಾಗಿದ್ದಾರೆ. ಡಿಸೆಂಬರ್ 19ರಂದು ನಡೆದ ಚುನಾಯಿತ ಮಂಡಳಿ ಸಭೆಯಲ್ಲಿ 2021-2025ರ ಅವಧಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ.

ವಿಶ್ವ ಬ್ಲಿಟ್ಜ್‌ ಚೆಸ್‌: ಕೊನೆರುಗೆ 5ನೇ ಸ್ಥಾನ

ವಾರ್ಸಾ: ಭಾರತದ ಅಗ್ರ ಆಟಗಾರ್ತಿ ಕೊನೆರು ಹಂಪಿ ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನಲ್ಲಿ ರಷ್ಯಾದ ಪೊಲಿನಾ ಶುವಲೊವಾ ವಿರುದ್ಧ ಸೋತಿದ್ದರಿಂದ ಹಂಪಿ ಅಗ್ರ 3ರಲ್ಲಿ ಸ್ಥಾನ ಪಡೆಯುವ ಅವಕಾಶದಿಂದ ವಂಚಿತರಾದರು. 

ಇದೇ ವೇಳೆ ಮೊದಲ 9 ಸುತ್ತುಗಳ ಮುಕ್ತಾಯಕ್ಕೆ 2ನೇ ಸ್ಥಾನದಲ್ಲಿದ್ದ ಆರ್‌.ವೈಶಾಲಿ, 14ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುರುಷರ ವಿಭಾಗದಲ್ಲಿ ವಿದಿತ್‌ ಗುಜರಾತಿ 18ನೇ ಸ್ಥಾನ ಪಡೆದರೆ ನಿಹಾಲ್‌ ಸರಿನ್‌ 19ನೇ ಸ್ಥಾನ ಗಳಿಸಿದರು.