* ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮೀಸ್ ಪ್ರವೇಶಿಸಿದ ಕಿದಂಬಿ ಶ್ರೀಕಾಂತ್* ಸೆಮೀಸ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡ ಶ್ರೀಕಾಂತ್* ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಪಿ.ವಿ. ಸಿಂಧು

ಹುಯೆಲ್ವಾ(ಡಿ.17‌): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನ (Badminton World Championships) ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ (Kidambi Srikanth) ಹಾಗೂ ಲಕ್ಷ್ಯ ಸೆನ್‌ ಸೆಮಿಫೈನಲ್ ಪ್ರವೇಶಿಸುವ ಮೂಲಕ ಟೂರ್ನಿಯಲ್ಲಿ ಚೊಚ್ಚಲ ಪದಕ ಖಚಿತಪಡಿಸಿಕೊಂಡಿದ್ದಾರೆ. ಇನ್ನು ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು (PV Sindhu) ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. 

ಟೂರ್ನಿಯಲ್ಲಿ 12ನೇ ಶ್ರೇಯಾಂಕಿತ ಕಿದಂಬಿ ಶ್ರೀಕಾಂತ್, ನೆದರ್‌ಲೆಂಡ್‌ನ ಮಾರ್ಕ್‌ ಕಾಲ್ಜೌ ವಿರುದ್ದ 21-9, 21-7 ನೇರ ಗೇಮ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕೇವಲ 26 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಭಾರತದ ಶಟ್ಲರ್ ಶ್ರೀಕಾಂತ್ ಅನಾಯಾಸವಾಗಿ ಗೆಲುವು ದಾಖಲಿಸುವ ಮೂಲಕ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟೂರ್ನಿಯ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ಮೊದಲ ಗೇಮ್‌ನಿಂದಲೇ ಮಾಜಿ ವಿಶ್ವದ ನಂ.1 ಶಟ್ಲರ್ ಕಿದಂಬಿ ಶ್ರೀಕಾಂತ್ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಹೀಗಾಗಿ ಮೊದಲ ಗೇಮ್‌ನ ಆರಂಭದಲ್ಲೇ ಶ್ರೀಕಾಂತ್ 11-5ರ ಮುನ್ನಡೆ ಸಾಧಿಸಿದರು. ಇನ್ನು ಎರಡನೇ ಗೇಮ್‌ನಲ್ಲೂ ಶ್ರೀಕಾಂತ್ ಮಿಂಚಿನ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಇನ್ನು ಕ್ರೀಡಾಕೂಟದಲ್ಲಿ ಭಾಗವಹಿಸಿದ ಅತಿ ಕಿರಿಯ ಶಟ್ಲರ್ ಎನಿಸಿಕೊಂಡಿದ್ದ ಲಕ್ಷ್ಯ ಸೆನ್‌ (Lakshya Sen) ಕೂಡಾ ಸೆಮೀಸ್‌ಗೇರಿ ಇತಿಹಾಸ ನಿರ್ಮಿಸಿದ್ದಾರೆ

Scroll to load tweet…

Badminton World Championship: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು, ಶ್ರೀಕಾಂತ್‌

ಇನ್ನು ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೇವಲ 20 ವರ್ಷದ ಲಕ್ಷ್ಯ ಸೆನ್, ಚೀನಾದ ಜೋ ಜುನ್ ಪೆಂಗ್ ಎದುರು 21-15, 15-21 ಹಾಗೂ 22-20 ಗೇಮ್‌ಗಳಿಂದ ಮಣಿಸಿ ಸೆಮಿಫೈನಲ್‌ಗೇರಿದ್ದಾರೆ. ಈ ಮೂಲಕ ಲಕ್ಷ್ಯ ಸೆನ್ ಕೂಡಾ ಪದಕ ಖಚಿತಪಡಿಸಿಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೆನ್‌ ಭಾರತದವರೇ ಆದ ಕಿದಂಬಿ ಶ್ರೀಕಾಂತ್ ಅವರನ್ನು ಎದುರಿಸಲಿದ್ದಾರೆ. ಈ ಇಬ್ಬರ ಪೈಕಿ ಗೆಲುವು ಸಾಧಿಸಿದರು, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತ ಪರ ಕನಿಷ್ಠ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯನೆನಿಸಿಕೊಳ್ಳಲಿದ್ದಾರೆ. ಈ ಮೊದಲು 1983ರಲ್ಲಿ ಪ್ರಕಾಶ್ ಪಡುಕೋಣೆ (Prakash Padukone) ಹಾಗೂ 2019ರಲ್ಲಿ ಬಿ ಸಾಯಿ ಪ್ರಣೀತ್ (B Sai Praneeth) ಕಂಚಿನ ಪದಕ ಜಯಿಸಿದ್ದರು.

Scroll to load tweet…

ಹಾಲಿ ಚಾಂಪಿಯನ್ ಪಿ ವಿ ಸಿಂಧುವಿಗೆ ನಿರಾಸೆ:

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಹೋರಾಟ ಕ್ವಾರ್ಟರ್‌ ಫೈನಲ್‌ನಲ್ಲೇ ಅಂತ್ಯವಾಗಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಬದ್ದ ಎದುರಾಳಿದ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ (Tai Tzu Ying) ವಿರುದ್ದ ಆಘಾತಕಾರಿ ಸೋಲು ಕಾಣುವ ಮೂಲಕ ತಮ್ಮ ಹೋರಾಟವನ್ನು ಮುಗಿಸಿದ್ದಾರೆ. 

ಅಗ್ರ ಶ್ರೇಯಾಂಕಿತೆ ತೈ ತ್ಸು ಯಿಂಗ್ 21-17, 21-13 ನೇರ ಗೇಮ್‌ಗಳಲ್ಲಿ ಸಿಂಧು ವಿರುದ್ದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬರೋಬ್ಬರಿ 42 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಸಿಂಧುವನ್ನು ಮಣಿಸುವಲ್ಲಿ ಚೈನೀಸ್ ತೈಪೆಯ ಆಟಗಾರ್ತಿ ಯಶಸ್ವಿಯಾದರು.

ಈ ಮೊದಲು ಕೆಲವು ತಿಂಗಳ ಹಿಂದಷ್ಟೇ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಈ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಆ ಸೆಣಸಾಟದಲ್ಲೂ ಚೈನೀಸ್ ತೈಪೆಯ ಆಟಗಾರ್ತಿ ಗೆಲುವಿನ ನಗೆ ಬೀರಿದ್ದರು.