ಗುವಾಹಟಿ(ಜ.10): 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟ, ಇಲ್ಲಿನ ಸರುಸರಾಯ್‌ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಜ.10 ರಿಂದ 22ರ ವರೆಗೆ ಕ್ರೀಡಾ ಕೂಟ ನಡೆಯಲಿದೆ. ಹಾಲಿ ಚಾಂಪಿಯನ್‌ ಮಹಾರಾಷ್ಟ್ರ ಮತ್ತು ರನ್ನರ್‌ ಅಪ್‌ ಹರಾರ‍ಯಣ ತಂಡಗಳ ನಡುವಿನ ಹೋರಾಟಕ್ಕೆ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಕಳೆದ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿರುವ ಕರ್ನಾಟಕ ಕೂಡ ಈ ಬಾರಿ ಪದಕ ಪಟ್ಟಿಯಲ್ಲಿ ಮೊದಲ 3 ಸ್ಥಾನಕ್ಕೇರುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

ಮಲೇಷ್ಯಾ ಮಾಸ್ಟರ್ಸ್‌: ಸಿಂಧು, ಸೈನಾ ಕ್ವಾರ್ಟರ್‌ಗೆ ಲಗ್ಗೆ

ಕಳೆದ ಆವೃತ್ತಿಯಲ್ಲಿ 228 ಪದಕ ಬಾಚಿಕೊಂಡಿದ್ದ ಮಹಾರಾಷ್ಟ್ರ ಈ ಬಾರಿ 579 ಕ್ರೀಡಾಪಟುಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹರಾರ‍ಯಣ ಈ ಬಾರಿ ಅತಿ ಹೆಚ್ಚು(682) ಕ್ರೀಡಾಪಟುಗಳನ್ನು ಅಖಾಡಕ್ಕಿಳಿಸುತ್ತಿದೆ. ದೆಹಲಿ (450), ಉತ್ತರಪ್ರದೇಶ (430), ತಮಿಳುನಾಡು (356), ಕರ್ನಾಟಕ (288)ದ ಸ್ಪರ್ಧಿಗಳು ಕಣದಲ್ಲಿದ್ದಾರೆ. ದಾದ್ರಾ ಮತ್ತು ನಗರ್‌ ಹವೇಲಿಯಿಂದ ಕೇವಲ 3 ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ.

ಕಳೆದ ಬಾರಿ 5,925 ಕ್ರೀಡಾಪಟುಗಳು ಕೂಟದಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 6,500ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 13 ದಿನಗಳ ಕಾಲ ನಡೆಯಲಿರುವ ಕೂಟದಲ್ಲಿ 20 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಹೊಸದಾಗಿ ಸೈಕ್ಲಿಂಗ್‌ ಮತ್ತು ಲಾನ್‌ ಬೌಲ್ಸ್‌ ಕ್ರೀಡೆಯನ್ನು ಸೇರಿಸಲಾಗಿದೆ. ಅಂಡರ್‌ 17 ಹಾಗೂ 21ರ ವಯೋಮಿತಿಯ ಪ್ರತಿಭಾನ್ವಿತ ಕ್ರೀಡಾಪಟುಗಳು ಪದಕಕ್ಕಾಗಿ ಪೈಪೋಟಿ ನಡೆಲಿದ್ದಾರೆ. ಶುಕ್ರವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಏಷ್ಯನ್‌ ಗೇಮ್ಸ್‌ 400 ಮೀ. ಬೆಳ್ಳಿ ವಿಜೇತೆ ಹಿಮಾ ದಾಸ್‌, ಕ್ರೀಡಾ ಜ್ಯೋತಿ ಹಿಡಿಯಲಿದ್ದಾರೆ.

ಕರ್ನಾಟಕದ ಭರವಸೆ ಶ್ರೀಹರಿ: ಚಿನ್ನದ ಮೀನು ಎಂದೇ ಕರೆಸಿಕೊಳ್ಳುವ ಈಜುಪಟು ಶ್ರೀಹರಿ ನಟರಾಜ್‌, ಈ ಬಾರಿ ಕೂಟದ ಆಕರ್ಷಣೆಯಾಗಿದ್ದಾರೆ. ಶ್ರೀಹರಿ ಅತಿಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಈಜು ಕ್ರೀಡೆಯಲ್ಲೇ ರಾಜ್ಯದ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿರುವುದು ವಿಶೇಷ.