Asianet Suvarna News Asianet Suvarna News

Khelo India University Games: ಸ್ವರ್ಣಕ್ಕೆ ಮುತ್ತಿಟ್ಟ ಶ್ರೀಹರಿ, ಶಿವ ಶ್ರೀಧರ್

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಶ್ರೀಹರಿ

* ನಿರೀಕ್ಷೆಯಂತೆಯೇ ಚಿನ್ನದ ಪದಕ ಬಾಚಿಕೊಂಡ ಒಲಿಂಪಿಯನ್ ಶ್ರೀಹರಿ ನಟರಾಜನ್

* ಎರಡನೇ ದಿನ ಆತಿಥೇಯ ಜೈನ್‌ ಯುನಿವರ್ಸಿಟಿಗೆ ಒಲಿದ 5 ಪದಕಗಳು

Khelo India University Games Sri Hari and Shiva Sridhar clinch gold medal in swimming events kvn
Author
Bengaluru, First Published Apr 26, 2022, 7:48 AM IST

ಬೆಂಗಳೂರು(ಏ.26): 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನ (Khelo India University Games) 2ನೇ ದಿನವಾದ ಸೋಮವಾರ ಆತಿಥೇಯ ಜೈನ್‌ ಯುನಿವರ್ಸಿಟಿಯ (Jain University) ಕ್ರೀಡಾಪಟುಗಳು ಹಲವು ಪದಕಗಳನ್ನು ಬಾಚಿಕೊಂಡಿದ್ದಾರೆ. ವಿವಿ ನಾಲ್ಕು ನೂತನ ಕೂಟ ದಾಖಲೆಗಳೊಂದಿಗೆ ಒಟ್ಟು 5 ಪದಕಗಳನ್ನು ಗೆದ್ದಿದ್ದು, ಎಲ್ಲಾ ಪದಕಗಳು ಈಜು ಸ್ಪರ್ಧೆಯಲ್ಲಿ ಬಂದಿದ್ದು ವಿಶೇಷ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ದೇಶವನ್ನು ಪ್ರತಿನಿಧಿಸಿದ್ದ ಶ್ರೀಹರಿ ನಟರಾಜ್‌ (Srihari Natarajan) ನಿರೀಕ್ಷೆಯಂತೆಯೇ ಚಿನ್ನಕ್ಕೆ ಮುತ್ತಿಟ್ಟರೆ, ಶಿವ ಶ್ರೀಧರ್‌ 2 ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು. ಶೃಂಘಿ ಬಂಡೇಕರ್‌ ಕೂಡಾ ಚಿನ್ನ ಗೆದ್ದಿದ್ದಾರೆ. ಶ್ರೀಹರಿ ಅವರು ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ 23.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದಲ್ಲದೇ ಗೇಮ್ಸ್‌ನಲ್ಲಿ ನೂತನ ದಾಖಲೆಯನ್ನು ಬರೆದರು. ಕಳೆದ ಆವೃತ್ತಿಯಲ್ಲಿ ಮಿಹಿರಿ ಆಂಬ್ರೆ 23.78 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ವಿವಿಗೆ ಮೊದಲ ಚಿನ್ನ ತಂದುಕೊಟ್ಟ ಶಿವ

ಇದಕ್ಕೂ ಮೊದಲು ನಡೆದ 200 ಮೀ. ವೈಯಕ್ತಿಕ ಮಿಡ್ಲೆ ಸ್ಪರ್ಧೆಯಲ್ಲಿ ಶಿವ ಶ್ರೀಧರ್‌ ವಿವಿ ಪರ ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಅವರು 2 ನಿಮಿಷ 0.5:43 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕಳೆದ ಬಾರಿ ತಿರುಮಾರನ್‌( 2 ನಿ. 13.66 ಸೆ.) ಬರೆದಿದ್ದ ದಾಖಲೆಯನ್ನು ಮುರಿದರು. ನಂತರ ನಡೆದ 100 ಮೀ. ಫ್ರೀಸ್ಟೈಲ್‌ನಲ್ಲಿ ಅವರು 57.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನವನ್ನು ಬಾಚಿಕೊಂಡಿರು. ಇದರೊಂದಿಗೆ ಕಳೆದ ಆವೃತ್ತಿಯ ಸಿದ್ದಾಂತ್‌ ಸೆಜ್ವಾಲ್‌ ಅವರ(58.69 ಸೆ.) ದಾಖಲೆಯನ್ನು ಮುರಿದರು. ‘ಈ ಸಾಧನೆ ಮುಂದಿನ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯಲು ಆತ್ಮವಿಶ್ವಾಸ ಹೆಚ್ಚಿಸಲಿದೆ. ಏಷ್ಯನ್‌ ಗೇಮ್ಸ್‌ನ (Asian Games) 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಗೆ ಅರ್ಹತೆ ಪಡೆಯುವ ಗುರಿ ಇದೆ. ಈ ಸ್ಪರ್ಧೆಯಲ್ಲಿ ಈಗಾಗಲೇ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಶ್ರೀಹರಿ ಜೊತೆ ದೇಶವನ್ನು ಪ್ರತಿನಿಧಿಸಬೇಕೆಂಬ ಹಂಬಲವಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

Khelo India University Games ಕಷ್ಟಗಳ ಈಜಿ ಚಿನ್ನ ಗೆಲ್ಲುವ ಕನ್ನಡಿಗ ಶಿವ!

ಮಹಿಳೆಯರ ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಂಡೇಕರ್‌ 1 ನಿಮಿಷ 0.7:50 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನೂತನ ದಾಖಲೆ ಬರೆಯುವುದರ ಜೊತೆ ಸ್ವರ್ಣ ಪದಕವನ್ನೂ ತಮ್ಮದಾಗಿಸಿಕೊಂಡರು. ಇನ್ನು 4*200 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಜೈನ್‌ ವಿವಿ ತಂಡ ಕಂಚಿನ ಪದಕ ಗೆದ್ದುಕೊಂಡಿತು.

ಉಳಿದಂತೆ ಪುರುಷರ 400 ಮೀ. ಈಜು ಸ್ಪರ್ಧೆಯಲ್ಲಿ ಎಂ.ಎಸ್‌.ರಾಮಯ್ಯ ವಿವಿಯ ಮ್ಯಾಥ್ಯೂಸ್‌ ಕೋಶಿ ಕಂಚು ಗೆದ್ದರೆ, ಮಹಿಳೆಯರ 400 ಮೀ. ಈಜಿನಲ್ಲಿ ಬೆಂಗಳೂರು ವಿವಿಯ ವಿ.ಪ್ರೀತಾ ಬೆಳ್ಳಿ ಜಯಿಸಿದರು. ಪುರುಷರ ಹಾಕಿ ‘ಎ’ ಗುಂಪಿನ ಪಂದ್ಯದಲ್ಲಿ ಲವ್ಲಿ ವೃತ್ತಿಪರ ವಿವಿ ವಿರುದ್ಧ 6-1 ಗೋಲುಗಳಲ್ಲಿ ಗೆದ್ದು ಬೆಂಗಳೂರು ವಿವಿ ತಂಡ ಶುಭಾರಂಭ ಮಾಡಿತು.

ಆಮೃತ ಕ್ರೀಡಾ ದತ್ತು ಯೋಜನೆಗೆ ಶ್ರೀಹರಿ ಆಯ್ಕೆ

ಬೆಂಗಳೂರು: ತಾರಾ ಈಜುಪಟು ಶ್ರೀಹರಿ ನಟರಾಜ್‌ ಅವರು ಕರ್ನಾಟಕ ಸರ್ಕಾರದ ಅಮೃತ ಕ್ರೀಡಾ ದತ್ತು ಯೋಜನೆಗೆ ಆಯ್ಕೆಯಾಗಿದ್ದಾರೆ. ಸೋಮವಾರ ಜೈನ್‌ ವಿವಿಗೆ ಆಗಮಿಸಿದ್ದ ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಅವರು ಶ್ರೀಹರಿ ಅವರನ್ನು ಅಭಿನಂದಿಸಿ, ಯೋಜನೆಗೆ ತಮ್ಮನ್ನು ಆಯ್ಕೆ ಮಾಡಿದ್ದಾಗಿ ತಿಳಿಸಿದರು. ಜೊತೆಗೆ ಈ ವಿಚಾರವನ್ನು ಟ್ವೀಟ್‌ ಮೂಲಕವೂ ಹಂಚಿಕೊಂಡಿದ್ದಾರೆ. ಈ ಯೋಜನೆಯನ್ನು ರಾಜ್ಯ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಾರಿಗೊಳಿಸಿದ್ದು, ರಾಜ್ಯದ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತರಬೇತಿ ನೀಡಲಾಗುತ್ತದೆ. ಕ್ರೀಡಾಪಟುಗಳಿಗೆ ಅಗತ್ಯ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ.

Follow Us:
Download App:
  • android
  • ios