* ಖೇಲೋ ಇಂಡಿಯಾ ವಿವಿಯಲ್ಲಿ ಮುಂದುವರೆದ ಜೈನ್ ವಿವಿ ಪ್ರಾಬಲ್ಯ* 7 ಚಿನ್ನದ ಪದಕ ಗೆದ್ದ ಸ್ವಿಮ್ಮರ್ ಶಿವ ಶ್ರೀಧರ್* ಈಜಿನ ಸ್ಪರ್ಧೆಯಲ್ಲಿ ಜೈನ್‌ ವಿಶ್ವವಿದ್ಯಾಲಯ ಒಟ್ಟು 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ

ಬೆಂಗಳೂರು(ಏ.29): ಈಜುಕೊಳದಲ್ಲಿ (Swimming) ಪ್ರಭುತ್ವ ಸಾಧಿಸಿದ ಜೈನ್‌ ವಿಶ್ವವಿದ್ಯಾಲಯ (Jain University) ಒಟ್ಟು 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಒಟ್ಟು 40 ವಿಶ್ವವಿದ್ಯಾಲಯಗಳು ಚಿನ್ನದ ಸಾಧನೆ ಮಾಡಿದರೆ, 89 ವಿಶ್ವವಿದ್ಯಾಲಯಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 7 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿರುವ ಜೈನ್‌ ಕಾಲೇಜಿನ ಶಿವ ಶ್ರೀಧರ್‌ (Shiva Sridhar) ಭಾರತದ ಹೊಸ ಈಜುತಾರೆಯಾಗಿ ಹೊರಹೊಮ್ಮಿದ್ದಾರೆ. ಹಿಂದಿನ ಕ್ರೀಡಾಕೂಟದಲ್ಲಿ ಸಿದ್ಧಾಂತ್‌ ಸೆಜ್ವಾಲ್ ಮತ್ತು ಸಾಧ್ವಿ ಧುರಿ ತಲಾ 5 ಚಿನ್ನದ ಪದಕಗಳನ್ನು ಗೆದ್ದು ಬರೆದಿದ್ದ ದಾಖಲೆಯನ್ನು ಶಿವ ಮುರಿದಿದ್ದಾರೆ.

ಪುರುಷರ 4*200 ಮೀ ಫ್ರೀ ಸ್ಟೈಲ್‌ ವಿಭಾಗದಲ್ಲಿ ಜೈನ್‌ ವಿವಿಯು ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿತು. ಶ್ರೀಹರಿ ನಟರಾಜ್‌, ಶಿವ ಶ್ರೀಧರ್‌, ಸಂಜಯ್ ಜಯಕೃಷ್ಣನ್‌ ಹಾಗೂ ರಾಜ್‌ ರೆಲೇಕರ್‌ ಇದ್ದ ತಂಡ 8 ನಿಮಿಷ 06.87 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ದಾಖಲೆ ಬರೆಯಿತು.

ಶ್ರೀಹರಿ ಹೊಸ ದಾಖಲೆ: ಪುರುಷರ 50 ಮೀ ಬ್ಯಾಕ್‌ ಸ್ಟೊ್ರೕಕ್‌ನಲ್ಲಿ ಜೈನ್‌ ಕಾಲೇಜಿನ ಶ್ರೀಹರಿ ನಟರಾಜ್‌ (Srihari Nataraj), 26:10 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ಬರೆದರು. 27:10 ಸೆಕೆಂಡುಗಳಲ್ಲಿ ಗುರಿ ತಲುಪಿದ ಶಿವ, ತಮ್ಮದೇ ದಾಖಲೆಯನ್ನು ಮುರಿದು ಬೆಳ್ಳಿ ಗೆದ್ದರು. 27:69 ಸೆಕೆಂಡುಗಳಲ್ಲಿ ಗುರಿ ತಲುಪಿದ ಪಂಜಾಬ್‌ ವಿವಿಯ ಸಂದೀಪ್‌ ಸೆಜ್ವಾಲ್ ಕಂಚು ಜಯಿಸಿದರು. 100 ಮೀ. ಫ್ರೀ ಸ್ಟೈಲ್‌ನಲ್ಲಿ ಶ್ರೀಹರಿ, 50:98 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕದೊಂದಿಗೆ ಕೂಟ ದಾಖಲೆ ಬರೆದರು.

Khelo India University Games: ಕರ್ನಾಟಕದ ವಿವಿಗಳಿಗೆ ಮತ್ತಷ್ಟು ಪದಕ

ಶೃಂಗಿ ದಾಖಲೆ: ವನಿತೆಯರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಜೈನ್‌ ವಿವಿಯ ಶೃಂಗಿ ಬಾಂಡೇಕರ್‌ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. 2 ನಿಮಿಷ 32.98 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, 2020ರಲ್ಲಿ ಸಾಧ್ವಿ ಧುರಿ (2 ನಿಮಿಷ 34.50 ಸೆಕೆಂಡ್‌) ಬರೆದಿದ್ದ ದಾಖಲೆಯನ್ನು ಮುರಿದರು. 50 ಮೀ. ಬ್ಯಾಕ್‌ಸ್ಟೊ್ರೕಕ್‌ ವಿಭಾಗದಲ್ಲೂ ಶೃಂಗಿ ಚಿನ್ನಕ್ಕೆ ಮುತ್ತಿಟ್ಟರು. ಇದೇ ವಿಭಾಗದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ದಾಮಿನಿ ಗೌಡ ಕಂಚು ಗೆದ್ದರು.

ಹಾಕಿ: ಬೆಂಗಳೂರು, ಮೈಸೂರಿಗೆ ಜಯ

ಪುರುಷರ ಹಾಕಿ ಸ್ಪರ್ಧೆಯಲ್ಲಿ ಬೆಂಗಳೂರು ವಿವಿಯು ಸಾವಿತ್ರಿ ಬಾಯಿ ಪುಲೆ ವಿವಿ ವಿರುದ್ಧ 1-0 ಗೋಲಿನಿಂದ ಗೆದ್ದರೆ, ಬೆಂಗಳೂರು ಸಿಟಿ ವಿವಿ ತಂಡವು ವಿಬಿಎಸ್‌ ಪೂರ್ವಾಂಚಲ್‌ ವಿರುದ್ಧ 3-1ರಲ್ಲಿ ಜಯಿಸಿತು. ಮಹಿಳೆಯರ ವಿಭಾಗದಲ್ಲಿ ಮೈಸೂರು ವಿವಿ ತಂಡವು ಸಾವಿತ್ರಿ ಬಾಯಿ ಪುಲೆ ವಿವಿ ವಿರುದ್ಧ 2-0 ಗೋಲುಗಳಲ್ಲಿ ಜಯಿಸಿತು. ಇನ್ನು ಬಾಕ್ಸಿಂಗ್‌ ಸ್ಪರ್ಧೆಗಳಲ್ಲಿ ಪಂಜಾಬ್‌, ಹರಾರ‍ಯಣ ವಿವಿಗಳ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು.