Khelo India University Games: ಕರ್ನಾಟಕದ ವಿವಿಗಳಿಗೆ ಮತ್ತಷ್ಟು ಪದಕ

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಮುಂದುವರೆದ ಕರ್ನಾಟಕದ ಆಟಗಾರರ ಪ್ರಾಬಲ್ಯ

* ಈಜು ಸ್ಪರ್ಧೆಯಲ್ಲಿ ಒಟ್ಟು 8 ನೂತನ ಕೂಟ ದಾಖಲೆಯಗಳು ಸೃಷ್ಟಿ

* ಮೂರನೇ ದಿನದ 10 ಚಿನ್ನದ ಪದಕಗಳಲ್ಲಿ ಮೂರನ್ನು ಆತಿಥೇಯ ಜೈನ್‌ ವಿವಿ ತನ್ನದಾಗಿಸಿಕೊಂಡಿದೆ

Khelo India University Games Karnataka University players win several medal on day 3 kvn

ಬೆಂಗಳೂರು(ಏ.27): 2ನೇ ಆವೃತ್ತಿ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ (Khelo India University Games 2022) 3ನೇ ದಿನವೂ ಕರ್ನಾಟಕದ ವಿವಿಗಳಿಗೆ ಹಲವು ಪದಕಗಳು ಲಭಿಸಿದ್ದು, ಈಜು ಸ್ಪರ್ಧೆಯಲ್ಲಿ ರಾಜ್ಯದ ಕ್ರೀಡಾಳುಗಳು ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದ್ದಾರೆ. ಮಂಗಳವಾರ ನಡೆದ ಈಜು ಸ್ಪರ್ಧೆಯಲ್ಲಿ ಒಟ್ಟು 8 ನೂತನ ಕೂಟ ದಾಖಲೆಯಗಳು ಸೃಷ್ಟಿಯಾದರೆ, ದಿನದ 10 ಚಿನ್ನದ ಪದಕಗಳಲ್ಲಿ ಮೂರನ್ನು ಆತಿಥೇಯ ಜೈನ್‌ ವಿವಿ ತನ್ನದಾಗಿಸಿಕೊಂಡಿತು.

ಮಹಿಳೆಯರ ವಿಭಾಗದ 200 ಮೀ. ಬ್ಯಾಕ್‌ ಸ್ಟ್ರೋಕ್‌ ಶೃಂಗಿ ಬಂಡೇಕರ್‌ 2 ನಿಮಿಷ 27:27 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದಲ್ಲದೇ, ನೂತನ ರಾಷ್ಟ್ರೀಯ ದಾಖಲೆ ಬರೆದರು. 2020ರಲ್ಲಿ ಕರ್ನಾಟಕದವರೇ ಆದ ದಾಮಿನಿ ಗೌಡ 2 ನಿ. 36.32 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ರಾಜೀವ್‌ ಗಾಂಧಿ ವಿವಿಯನ್ನು ಪ್ರತಿನಿಧಿಸುತ್ತಿರುವ ದಾಮಿನಿ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಬಳಿಕ ನಡೆದ 400 ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಬಂಡೇಕರ್‌ ಬೆಳ್ಳಿ ಪದಕ ಗೆದ್ದರೆ, ಬೆಂಗಳೂರು ವಿವಿಯ ಪ್ರೀತಾ ಕಂಚಿಗೆ ತೃಪ್ತಿಪಟ್ಟುಕೊಂಡರು.

ಇನ್ನು 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶಿವ ಶ್ರೀಧರ್‌ ಚಿನ್ನದ ಪದಕದೊಂದಿಗೆ ನೂತನ ಕೂಟ ದಾಖಲೆ ಬರೆದರು. 2 ನಿ. 06.29 ಸೆಕೆಂಡುಗಳಲ್ಲಿ ಗುರಿ ತಲುಪಿದ ಶಿವ ಈಜಿನಲ್ಲಿ ಮೂರನೇ ದಾಖಲೆ ಬರೆದರು. ಸೋಮವಾರ ಅವರು ಎರಡು ನೂತನ ದಾಖಲೆಗಳೊಂದಿಗೆ ಚಿನ್ನ ಗೆದ್ದಿದ್ದರು. ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಜೈನ್‌ ವಿವಿಯ ರಾಜ್‌ ರೆಲೇಕರ್‌ ಬೆಳ್ಳಿ ಪಡೆದರು. ಪುರುಷರ 1500 ಮೀ. ಫ್ರೀ ಸ್ಟೈಲ್‌ನಲ್ಲಿ ಪಿಇಎಸ್‌ ವಿವಿಯ ಮೋಹಿತ್‌ ವೆಂಕಟೇಶ್‌ ಕಂಚು ಗೆದ್ದರು.

ರಿಲೇಯಲ್ಲಿ ಜೈನ್‌ಗೆ ಚಿನ್ನ:

ಪುರುಷರ 4*100 ಮೀ ಫ್ರೀಸ್ಟೈಲ್‌ ರಿಲೇಯಲ್ಲಿ ಜೈನ್‌ ವಿವಿ ತಂಡ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದೆ. ಶ್ರೀಹರಿ ನಟರಾಜ್‌ (Srihari Nataraj), ಸಂಜಯ್‌ ಜಯಕೃಷ್ಣನ್‌, ಶಿವ ಶ್ರೀಧರ್‌, ರಾಜಾ ರೆಲೇಕರ್‌ ಅವರನ್ನೊಳಗೊಂಡ ತಂಡ 3 ನಿ. 34.86 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾಯಿತು. ಕಳೆದ ಬಾರಿ ಪಂಜಾಬ್‌ ವಿವಿ ತಂಡ 3 ನಿ. 46.16 ಸೆಕೆಂಡ್‌ಗಳಲ್ಲಿ ಕ್ರಮಿಸಿತ್ತು.

ಕ್ರೀಡಾ ಪ್ರಿಯರಿಗೆ ಸಿಹಿ ಸುದ್ದಿ, ರಾಜ್ಯದಲ್ಲಿ ನಿರ್ಮಾಣವಾಗಲಿದೆ ಸ್ಪೋರ್ಟ್ಸ್‌ ಯೂನಿವರ್ಸಿಟಿ..!

ಬ್ಯಾಡ್ಮಿಂಟನ್‌ನಲ್ಲಿ ಜೈನ್‌ಗೆ ಜಯ: ಪುರುಷರ ಮತ್ತು ವನಿತೆಯರ ಬ್ಯಾಡ್ಮಿಂಟನ್‌ ತಂಡ ವಿಭಾಗದಲ್ಲಿ ಜೈನ್‌ ವಿವಿ (Jain University) ತಂಡಗಳು ಜಯಗಳಿಸಿವೆ. ಪುರುಷರ ತಂಡ ಸಾವಿತ್ರಿ ಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ತಂಡದ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿದರೆ, ಮಹಿಳಾ ತಂಡ ಎಸ್‌ಆರ್‌ಎಂ ತಾಂತ್ರಿಕ ವಿವಿ ವಿರುದ್ಧ 2-0 ಅಂತರದಲ್ಲಿ ಗೆದ್ದಿತು.

ಹಾಕಿ: ಬೆಂಗಳೂರು, ಮೈಸೂರು ವಿವಿಗೆ ಜಯ

ಫೀಲ್ಡ್‌ ಮಾರ್ಷಲ್ ಕಾರಿಯಪ್ಪ ಅಂಗಣದಲ್ಲಿ ನಡೆದ ಪುರುಷರ ಹಾಕಿಯಲ್ಲಿ ಬೆಂಗಳೂರು ವಿವಿ 3-2 ಗೋಲುಗಳ ಅಂತರದಲ್ಲಿ ಅಮೃತ್‌ಸರ ವಿವಿ ವಿರುದ್ಧ ಜಯಗಳಿಸಿದರೆ, ಮೈಸೂರು ವಿವಿ ತಂಡವು 2-1 ಗೋಲಿನಿಂದ ರಾಂಚಿ ವಿಶ್ವವಿದ್ಯಾನಿಲಯ ತಂಡವನ್ನು ಮಣಿಸಿತು.

ಮಲ್ಲಕಂಬದಲ್ಲಿ ಮುಂಬೈಗೆ ಚಿನ್ನ: ಖೇಲೋ ಇಂಡಿಯಾದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಮಲ್ಲಕಂಬ ಸ್ಪರ್ಧೆಯಲ್ಲಿ ಮುಂಬೈ ಚಿನ್ನದ ಪದಕ ಗೆದ್ದಿದೆ. ವನಿತೆಯರ ವಿಭಾಗದಲ್ಲಿ ಮುಂಬೈ ವಿವಿ ಮೊದಲ ಸ್ಥಾನದೊಂದಿಗೆ ಚಿನ್ನ ಗಳಿಸಿದರೆ, ಸಾವಿತ್ರಿ ಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯ ಬೆಳ್ಳಿ ಮತ್ತು ಅಮರಾವತಿ ವಿಶ್ವವಿದ್ಯಾನಿಲಯ ಕಂಚಿನ ಸ್ಥಾನ ಗಳಿಸಿದವು.

Latest Videos
Follow Us:
Download App:
  • android
  • ios