Asianet Suvarna News Asianet Suvarna News

Khelo India University Games ಒಲಿಂಪಿಯನ್‌ ತೋಮರ್ ಕೈತಪ್ಪಿದ ಚಿನ್ನ..!

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಒಲಿಂಪಿಯನ್‌ ತೋಮರ್

* ಒಲಿಂಪಿಯನ್‌ ಶೂಟರ್‌ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ ಚಿನ್ನ ಗೆಲ್ಲಲು ವಿಫಲ

* ಇಂದಿನಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಸ್ಪರ್ಧೆಗಳು ಆರಂಭ

Khelo India University Games 2022 Olympian Aishwary Pratap Singh Tomar settles for silver kvn
Author
Bengaluru, First Published Apr 30, 2022, 8:38 AM IST

ಬೆಂಗಳೂರು(ಏ.30): 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನ (Khelo India University Games 2022) 6ನೇ ದಿನವಾದ ಶುಕ್ರವಾರ ಆತಿಥೇಯ ಜೈನ್‌ ವಿವಿ (Jain University) ಸೇರಿದಂತೆ ಕರ್ನಾಟಕ ವಿವಿಗಳ ಕ್ರೀಡಾಪಟುಗಳು ಪದಕ ಗೆಲ್ಲಲು ವಿಫಲರಾಗಿದ್ದಾರೆ. ಮತ್ತೊಂದೆಡೆ ಒಲಿಂಪಿಯನ್‌ ಶೂಟರ್‌ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ (Aishwary Pratap Singh Tomar) ಚಿನ್ನ ಗೆಲ್ಲಲು ವಿಫಲರಾಗಿ ಅಚ್ಚರಿ ಮೂಡಿಸಿದ್ದಾರೆ. 6ನೇ ದಿನವೂ ಜೈನ್‌ ವಿವಿ 16 ಚಿನ್ನದ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಒಟ್ಟು 42 ವಿಶ್ವವಿದ್ಯಾನಿಲಯಗಳು ಚಿನ್ನ ಗಳಿಸಿದ್ದು, 95 ವಿಶ್ವ ವಿದ್ಯಾನಿಲಯಗಳು ಪದಕದ ಖಾತೆ ತೆರೆದಿವೆ.

ತೋಮರ್‌ಗೆ ಆಘಾತ: ಭಾರತೀಯ ಕ್ರೀಡಾ ಪ್ರಾಧಿಕಾರದ ಶೂಟಿಂಗ್‌ ರೇಂಜ್‌ನಲ್ಲಿ ನಡೆದ 50 ಮೀ. ಏರ್‌ ಪಿಸ್ತೂಲ್‌ 3 ಪೊಸಿಷನ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಅಮೃತ್‌ಸರದ ಗುರು ನಾನಕ್‌ ದೇವ್‌ ವಿವಿಯನ್ನು ಪ್ರತಿನಿಧಿಸುತ್ತಿರುವ ಅವರು 6 ಅಂಕ ಗಳಿಸಿ ಬೆಳ್ಳಿ ಪಡೆದರೆ, ಪಂಜಾಬ್‌ನ ಲವ್ಲೀ ವೃತ್ತಿಪರ ವಿವಿಯ ಸರ್ತಾಜ್‌ ಸಿಂಗ್‌ ತಿವಾನ 16 ಅಂಕ ಪಡೆದು ಚಿನ್ನಕ್ಕೆ ಮುತ್ತಿಕ್ಕಿದರು.

ಇಂದಿನಿಂದ ಅಥ್ಲೆಟಿಕ್ಸ್‌: ದ್ಯುತಿ, ಪ್ರಿಯಾ ಆಕರ್ಷಣೆ

ಕ್ರೀಡಾಕೂಟದಲ್ಲಿ ಕಬಡ್ಡಿ, ಜುಡೋ ಸೇರಿದಂತೆ ಪ್ರಮುಖ ಕ್ರೀಡೆಗಳು ಈಗಾಗಲೇ ಆರಂಭಗೊಂಡಿದ್ದು, ಮಹತ್ವದ ಅಥ್ಲೆಟಿಕ್ಸ್‌ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಳ್ಳಲಿದೆ. ಒಲಿಂಪಿಯನ್‌, ಏಷ್ಯನ್‌ ಗೇಮ್ಸ್‌ ಪದಕ ವಿಜೇತ ದ್ಯುತಿ ಚಂದ್‌ ಹಾಗೂ ರಾಷ್ಟ್ರೀಯ ಚಾಂಪಿಯನ್‌, ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ನ ಪದಕ ವಿಜೇತ ಕರ್ನಾಟಕದ ಪ್ರಿಯಾ ಮೋಹನ್‌ ಪ್ರಮುಖ ಆಕರ್ಷಣೆಯಾಗಿದ್ದಾರೆ. 

Khelo India University Games: 7ನೇ ಚಿನ್ನ ಕೊಳ್ಳೆಹೊಡೆದ ಈಜುಪಟು ಶಿವ ಶ್ರೀಧರ್

400 ಮತ್ತು 200 ಮೀ. ಓಟದಲ್ಲಿ ಆತಿಥೇಯ ಜೈನ್‌ ವಿವಿಯನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಪ್ರಿಯಾ ರಾಷ್ಟ್ರೀಯ ಕೂಟಗಳಲ್ಲಿ ಮಿಂಚುತ್ತಿದ್ದು, ಪದಕ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ. ಕಿರಿಯರ 400 ಮೀ. ಓಟದಲ್ಲಿ ಪ್ರಿಯಾ ವಿಶ್ವದಲ್ಲೇ 3ನೇ ರಾಂಕ್‌ ಹೊಂದಿದ್ದಾರೆ. ಇನ್ನು, ಕಳೆದ ಬಾರಿ ಅಥ್ಲೆಟಿಕ್ಸ್‌ನಲ್ಲಿ ಒಟ್ಟು 18 ಪದಕಗಳನ್ನು ಗೆದ್ದು ಚಾಂಪಿಯನ್‌ ಪಟ್ಟಅಲಂಕರಿಸಿದ್ದ ಮಂಗಳೂರು ವಿವಿ ಮತ್ತೊಮ್ಮೆ ಪ್ರಭುತ್ವ ಸಾಧಿಸುವ ನಿರೀಕ್ಷೆಯಲ್ಲಿದೆ.

ಗೇಮ್ಸ್‌ ವೀಕ್ಷಿಸಿದ ರಾಜ್ಯಪಾಲ ಗೆಹಲೋತ್‌

ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಅವರೊಂದಿಗೆ ರಾಜ್ಯ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಶುಕ್ರವಾರ ಜೈನ್‌ ವಿವಿಗೆ ಭೇಟಿ ನೀಡಿ ಸ್ಪರ್ಧೆಗಳನ್ನು ವೀಕ್ಷಿಸಿದರು. ಕಬ್ಬಡಿ, ಯೋಗ, ಫೆನ್ಸಿಂಗ್‌, ಸ್ಕೇಟಿಂಗ್‌ ಸ್ಪರ್ಧೆಗಳನ್ನು ಕಣ್ತುಂಬಿಕೊಂಡರು. ಇದೇ ವೇಳೆ ಫೆನ್ಸಿಂಗ್‌ನಲ್ಲಿ ವಿಜೇತರಾದ ಮಹಿಳಾ ಕ್ರೀಡಾಪಟುಗಳಿಗೆ ಪದಕ ಪ್ರದಾನ ಮಾಡಿದರು.

Follow Us:
Download App:
  • android
  • ios