ಖೇಲೋ ಇಂಡಿಯಾ: ಕೂಟ ದಾಖಲೆ ಬರೆದ ಕನ್ನಡಿಗರು
ಖೇಲೋ ಇಂಡಿಯಾದ 5ನೇ ದಿನವೂ ಮಹರಾಷ್ಟ್ರ ಪ್ರಾಬಲ್ಯ ಮೆರೆದಿದೆ. ಇನ್ನು ಕರ್ನಾಟಕ 2 ರಾಷ್ಟ್ರೀಯ ಕೂಟ ದಾಖಲೆ ಸಹಿತ 8 ಪದಕಗಳನ್ನು ಜಯಿಸುವ ಮೂಲಕ 12ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಗುವಾಹಟಿ(ಜ.15): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 5ನೇ ದಿನವಾದ ಮಂಗಳವಾರ ಕರ್ನಾಟಕ 2 ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ 8 ಪದಕ ಗೆದ್ದಿದೆ.
ಇದರಲ್ಲಿ ಅಥ್ಲೆಟಿಕ್ಸ್‌ನಲ್ಲಿ 2 ಚಿನ್ನ, ಜುಡೋದಲ್ಲಿ 1 ಚಿನ್ನ, ಸೈಕ್ಲಿಂಗ್‌ನಲ್ಲಿ 4 ಹಾಗೂ ಶಾಟ್‌ಪುಟ್‌ನಲ್ಲಿ 1 ಬೆಳ್ಳಿ ಜಯಿಸಿದೆ. ಒಟ್ಟಾರೆ 5 ಚಿನ್ನ, 8 ಬೆಳ್ಳಿ, 5 ಕಂಚಿನೊಂದಿಗೆ 18 ಪದಕ ಗೆದ್ದಿದ್ದು ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.
ಖೇಲೋ ಇಂಡಿಯಾ: ಕರ್ನಾಟಕಕ್ಕೆ 2 ಚಿನ್ನ
ಅಂಡರ್ 21 ಬಾಲಕರ 200 ಮೀ. ಓಟದಲ್ಲಿ ಕರ್ನಾಟಕದ ಅಭಿನ್ ಭಾಸ್ಕರ್ ದೇವಾಡಿಗ 21.33 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಅಂಡರ್ 17 ಬಾಲಕರ ಟ್ರಿಪಲ್ ಜಂಪ್‌ನಲ್ಲಿ ರಾಜ್ಯದ ಅಖಿಲೇಶ್ 14.97 ಮೀ. ದೂರ ಜಿಗಿಯುವ ಮೂಲಕ ಚಿನ್ನ ಗೆದ್ದರು.
ಅಂಡರ್ 21 ಬಾಲಕಿಯರ ಜುಡೋ 63 ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ಮಣಿಪುರದ ಟಕಲೇಂಬಮ್ ವಿರುದ್ಧ ಗೆಲುವು ಪಡೆದ ಕರ್ನಾಟಕದ ವಸುಂಧರ ಚಿನ್ನಕ್ಕೆ ಮುತ್ತಿಟ್ಟರು. ಅಂಡರ್ 21 ಬಾಲಕಿಯರ ಶಾಟ್ ಪುಟ್‌ನಲ್ಲಿ ರಾಜ್ಯದ ಅಂಬಿಕಾ ವಿ., 14.21 ಮೀ. ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದರು. ಇದು ರಾಷ್ಟ್ರೀಯ ಕೂಟ ದಾಖಲೆ.
ಸೈಕ್ಲಿಂಗ್‌ನಲ್ಲಿ 4 ಬೆಳ್ಳಿ: ರಾಜ್ಯ ಸೈಕ್ಲಿಸ್ಟ್‌ಗಳು ಒಂದೇ ದಿನ 4 ಬೆಳ್ಳಿ ಪದಕ ಗೆದ್ದರು. ಅಂಡರ್ 21 ಬಾಲಕರ 1000 ಮೀ. ವೈಯಕ್ತಿಕ ಟೈಂ ಟ್ರಯಲ್ ಹಾಗೂ 10 ಕಿ.ಮೀ. ಸ್ಕ್ರ್ಯಾಚ್ ರೇಸ್‌ನಲಿ ವೆಂಕಪ್ಪ ಕುಂಗಲಗುತ್ತಿ ಬೆಳ್ಳಿ ಜಯಿಸಿದರು. ಅಂಡರ್ 21 ಬಾಲಕಿಯರ 7.5 ಕಿ.ಮೀ. ಸ್ಕ್ರ್ಯಾಚ್ ರೇಸ್‌ನಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ, ಅಂಡರ್ 17 ಬಾಲಕಿಯರ 500 ಮೀ. ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ಅಂಕಿತಾ ರಾಥೋಡ ರಜತ ಪದಕ ಗಳಿಸಿದರು.