ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!
ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಈಜಿನಲ್ಲಿ ರಾಜ್ಯದ 5 ಚಿನ್ನದ ಪದಕ ಗೆದ್ದುಕೊಂಡಿದೆ. ಕರ್ನಾಟಕದ ಒಟ್ಟು ಚಿನ್ನದ ಪದಕ ಸೇರಿದಂತೆ ಹಚ್ಚಿನ ವಿವರ.
ಗುವಾಹಟಿ(ಜ.18): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ದಿನದಿಂದ ದಿನಕ್ಕೆ ಪದಕ ಪಟ್ಟಿಯಲ್ಲಿ ಏರಿಕೆ ಕಾಣುತ್ತಿದೆ. ಶುಕ್ರವಾರ ರಾಜ್ಯಕ್ಕೆ 5 ಚಿನ್ನ, 2 ಬೆಳ್ಳಿ ಸೇರಿದಂತೆ 7 ಪದಕ ದೊರೆಯಿತು. ಈ ಎಲ್ಲಾ ಪದಕಗಳು ಈಜು ಸ್ಪರ್ಧೆಯಲ್ಲಿ ಬಂದಿರೋದು ವಿಶೇಷ ಎನಿಸಿದೆ.
ಇದನ್ನೂ ಓದಿ: ಖೇಲೋ ಇಂಡಿಯಾ : ಸೈಕ್ಲಿಂಗ್‌ನಲ್ಲಿ 1 ಚಿನ್ನ ಗೆದ್ದ ಕರ್ನಾಟಕ
ಅಂಡರ್ 17 ಬಾಲಕರ 200 ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯದ ಸಂಭವ್ ಆರ್. 1 ನಿಮಿಷ 56.66 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ಅನೀಶ್ ಗೌಡ 1 ನಿಮಿಷ 57.46 ಸೆ.ಗಳಲ್ಲಿ ಗುರಿ ಮುಟ್ಟಿಬೆಳ್ಳಿ ಗೆದ್ದರು. ಬಾಲಕಿಯರ 200 ಮೀ. ಫ್ರೀಸ್ಟೈಲ್‌ನಲ್ಲಿ ಖುಷಿ ದಿನೇಶ್ 2 ನಿಮಿಷ 10.29 ಸೆ.ಗಳಲ್ಲಿ ಕ್ರಮಿಸಿ ಚಿನ್ನಕ್ಕೆ ಮುತ್ತಿಟ್ಟರು. ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್ 28.58 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಗೆದ್ದರು.
ಇದನ್ನೂ ಓದಿ: ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು
800 ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯದ ತಾರಾ ಈಜುಪಟು ಖುಷಿ ದಿನೇಶ್ 9 ನಿಮಿಷ 26.19 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಅಂಡರ್ 21 ಬಾಲಕರ 200 ಮೀ. ಫ್ರೀಸ್ಟೈಲ್‌ನಲ್ಲಿ ಸಂಜಯ್ 1 ನಿಮಿಷ 56.95 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಬಾಲಕಿಯರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸುನೈನಾ ಮಂಜುನಾಥ್ 30.78 ಸೆ.ಗಳಲ್ಲಿ ನಿಗದಿತ ದೂರ ಕ್ರಮಿಸುವ ಮೂಲಕ ಚಿನ್ನ ಗೆದ್ದರು.
ಕರ್ನಾಟಕ 8ನೇ ದಿನದ ಮುಕ್ತಾಯಕ್ಕೆ 11 ಚಿನ್ನ, 10 ಬೆಳ್ಳಿ ಹಾಗೂ 10 ಕಂಚಿನೊಂದಿಗೆ 31 ಪದಕ ಗೆದ್ದಿದ್ದು ಪದಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ. ಉಳಿದಂತೆ ಮಹಾರಾಷ್ಟ್ರ (150), ಹರಾರಯಣ (111) ಪದಕ ಪಟ್ಟಿಯಲ್ಲಿ ಮೊದಲ 2 ಸ್ಥಾನ ಕಾಯ್ದುಕೊಂಡಿವೆ.