Asianet Suvarna News Asianet Suvarna News

khelo india ಖೇಲೋ ಇಂಡಿಯಾಗೆ ಕರ್ನಾಟಕ ಭರ್ಜರಿ ತಯಾರಿ, ಅಗ್ರಸ್ಥಾನದ ಗುರಿ

  • ಪದಕ ಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ವಿಶ್ವಾಸ
  •  ಕ್ರೀಡಾಕೂಟಕ್ಕೆ ಹರ್ಯಾಣದ ಪಂಚಕುಲ ಆತಿಥ್ಯ 
  • ಜೂನ್ 4ರಿಂದ  13ರ ವರೆಗೆ ನಡೆಯಲಿರುವ ಕ್ರೀಡಾಕೂಟ
Karnatataka aims to top position in medal tally in Khelo India Youth Games haryana ckm
Author
Bengaluru, First Published May 30, 2022, 8:19 PM IST

ಬೆಂಗಳೂರು( ಮೇ. 30): 4ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ದಿನಗಣನೆ ಆರಂಭಗೊಂಡಿದ್ದು, ಜೂನ್ 4ರಿಂದ ಹರ್ಯಾಣದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕರ್ನಾಟಕ 194 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿದೆ. ತನ್ನ ಈಜುಪಟುಗಳು ಮತ್ತು ಕುಸ್ತಿಪಟುಗಳ ಮೇಲೆ ಹೆಚ್ಚಿನ ವಿಶ್ವಾಸವಿರಿಸಿರುವ ಕರ್ನಾಟಕ, ಈ ಬಾರಿ ಪದಕ ಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ. ಜೂನ್ 13ರ ವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಹರ್ಯಾಣದ ಪಂಚಕುಲ ಆತಿಥ್ಯ ವಹಿಸಲಿದೆ. ಅಂಬಾಲ, ಶಾಹ್‌ಬಾದ್, ದೆಹಲಿ ಹಾಗೂ ಚಂಡೀಗಢದಲ್ಲೂ ಕೆಲ ಸ್ಪರ್ಧೆಗಳು ನಡೆಯಲಿವೆ.

ಕರ್ನಾಟಕ ತಂಡದಲ್ಲಿ 84 ಬಾಲಕರು ಮತ್ತು 110 ಬಾಲಕಿಯರು ಇದ್ದು, ಇವರೊಂದಿಗೆ ೪೦ ಮಂದಿ ಸಹಾಯಕ ಸಿಬ್ಬಂದಿ ಕ್ರೀಡಾಕೂಟಕ್ಕೆ ತೆರಳಲಿದ್ದಾರೆ. ‘ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ನಾವು ಅಗ್ರ ನಾಲ್ಕು ತಂಡಗಳಲ್ಲಿ ಒಂದೆನಿಸಿಕೊಂಡಿದ್ದೇವೆ. ಈ ಬಾರಿ ನಾವು ಅತ್ಯಂತ ಬಲಿಷ್ಠ ತಂಡವನ್ನು ಹೊಂದಿದ್ದು, ಅಗ್ರ ಎರಡರಲ್ಲಿ ಸ್ಥಾನ ಪಡೆಯಲಿದ್ದೇವೆ’ ಎಂದು ತಂಡದ ಚೀಫ್ ಡಿ ಮಿಷನ್(ಸಿಡಿಎಂ) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಬಾಲಕಿಯರ ವಿಭಾಗದಲ್ಲಿ ನೀನಾ ವೆಂಕಟೇಶ್, ಬಾಲಕರ ವಿಭಾಗದಲ್ಲಿ ಕಲ್ಪ್ ಎಸ್ ಬೊರಾ ಮತ್ತು ಉತ್ಕರ್ಷ್ ಪಾಟೀಲ್ ಈಜು ಸ್ಪರ್ಧೆಯಲ್ಲಿ ನಮ್ಮ ಪದಕ ಭರವಸೆ’ ಎಂದು ಗಂಗಾಧರ್ ಹೇಳಿದ್ದಾರೆ.

 2 ರಾಷ್ಟ್ರೀಯ ದಾಖಲೆ, 76 ಕೂಟ ದಾಖಲೆಯೊಂದಿಗೆ ಯಶಸ್ವಿ ಮುಕ್ತಾಯ

ಕುಸ್ತಿಪಟುಗಳು, ಶಟ್ಲರ್‌ಗಳು ಮತ್ತು ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳ ಬಗ್ಗೆಯೂ ಸಿಡಿಎಂ ಭರವಸೆ ವ್ಯಕ್ತಪಡಿಸಿದ್ದು ವೈಯಕ್ತಿಕ ವಿಭಾಗಗಳಲ್ಲಿ ಪದಕ ಗೆಲ್ಲುವ ಸಾಮರ್ಥ್ಯವಿದೆ ಎಂದಿದ್ದಾರೆ. ಇನ್ನು ತಂಡಗಳ ವಿಭಾಗದಲ್ಲಿ ಬಾಲಕರ ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್(ಬಾಲಕರು ಮತ್ತು ಬಾಲಕಿಯರು) ತಂಡಗಳು ಪದಕ ಗೆಲ್ಲಬಹುದು ಎನ್ನುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ಕಳೆದ ಮೂರು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಸ್ಪರ್ಧಿಸಲಿರುವ ತಂಡ ಹೆಚ್ಚು ಸಿದ್ಧತೆ ನಡೆಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಮತ್ತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ದೇಶದಲ್ಲಿರುವ ಯುವ ಪ್ರತಿಭೆಗಳನ್ನು ಮುಖ್ಯಭೂಮಿಕೆಗೆ ತರಲು ಇಂತಹ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನಾರ್ಹ’ ಎಂದು ಗಂಗಾಧರ್ ಅವರು ಹೇಳಿದ್ದಾರೆ.

ಬೆಂಗಳೂರು ಸಮೀಪದ ದೇವನಹಳ್ಳಿಯ ವಿದ್ಯಾಶಿಲ್ಪಾ ಅಕಾಡೆಮಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾ ಮೋಹನ್ ಈಜು ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದ ಅವರು, ಈ ಬಾರಿ ಐದು ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದು ನಾಲ್ಕರಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾರಾ ಈಜುಪಟು ನೀನಾ ವೆಂಕಟೇಶ್ ಮಾತನಾಡಿ, ‘ಬೆಳಗಾವಿಯಲ್ಲಿ ಕಳೆದ ವಾರ ನಡೆದ ರಾಜ್ಯ ಸಬ್-ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದೇನೆ. ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ’ ಎಂದಿದ್ದಾರೆ.

2047ರ ವೇಳೆಗೆ ಒಲಿಂಪಿಕ್ಸ್ ನಲ್ಲಿ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಲ್ಲಿ ಭಾರತ ಒಂದಾಗಬೇಕು ಎಂದ ಅಮಿತ್ ಶಾ!

ಇನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಿಂಚುತ್ತಿರುವ ಅಥ್ಲೀಟ್ ಪ್ರಿಯಾ ಆರ್ ಮೋಹರ್ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟು ಎನಿಸಿದ್ದಾರೆ. ‘ಈ ಪಯಣ ಕಷ್ಟಕರವಾದದ್ದು. ಆದರೆ ನನ್ನ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ. ಪ್ರಿಯಾ 200 ಮೀಟರ್ ಮತ್ತು 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಈಜು ಸ್ಪರ್ಧೆಯಲ್ಲಿ ಶೊನ್ ಗಂಗೂಲಿ, ಅನೀಶ್ ಗೌಡ, ರಿಧಿಮಾ ಕುಮಾರ್, ಟೇಬಲ್ ಟೆನಿಸ್‌ನಲ್ಲಿ ಯಶಸ್ವಿನಿ ಗೋರ್ಪಡೆ ಕರ್ನಾಟಕದ ಪರ ಪದಕ ಭರವಸೆ ಎನಿಸಿರುವ ಕ್ರೀಡಾಪಟುಗಳು.

ಕಳೆದ ವರ್ಷ ಅಸ್ಸಾಂನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ ೪ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಕೂಟದಲ್ಲಿ ಸುಮಾರು 8000 ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
 

Follow Us:
Download App:
  • android
  • ios