Khelo India University Games: 2 ರಾಷ್ಟ್ರೀಯ ದಾಖಲೆ, 76 ಕೂಟ ದಾಖಲೆಯೊಂದಿಗೆ ಯಶಸ್ವಿ ಮುಕ್ತಾಯ
* ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ವಿದ್ಯುಕ್ತ ತೆರೆ
* 32 ಪದಕ ಗೆದ್ದ ಆತಿಥೇಯ ಜೈನ್ ವಿವಿ ಸಮಗ್ರ ಚಾಂಪಿಯನ್
* ಮಾರ್ಚ್ 23ರಂದು ಆರಂಭಗೊಂಡ ಖೇಲೋ ಇಂಡಿಯಾ ವಿವಿ ಗೇಮ್ಸ್ ಸ್ಪರ್ಧೆಗಳು
ಬೆಂಗಳೂರು(ಮೇ.04): 2ನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟ-2021 (Khelo India University Games) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾ.23ರಂದು ಆರಂಭಗೊಂಡ ಸ್ಪರ್ಧೆಗಳು ಮಂಗಳವಾರ ಕಬಡ್ಡಿ ಹಾಗೂ ಫುಟ್ಬಾಲ್ ಪಂದ್ಯಗಳು ನಡೆಯುವುದರೊಂದಿಗೆ ಕೊನೆಗೊಂಡಿತು. 20 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ 32 ಪದಕ ಗೆದ್ದ ಆತಿಥೇಯ ಜೈನ್ ವಿವಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂಜಾಬ್‌ನ ಲವ್ಲಿ ವೃತ್ತಿಪರ ವಿವಿ ದ್ವಿತೀಯ, ಪಂಜಾಬ್ ವಿವಿ ತೃತೀಯ ಸ್ಥಾನ ಪಡೆದುಕೊಂಡಿತು.
ಮಂಗಳವಾರ ನಡೆದ ಪುರುಷರ ಕಬಡ್ಡಿ ಫೈನಲ್‌ನಲ್ಲಿ ಭಿವಾನಿಯ ಚೌಧರಿ ಬನ್ಸಿಲಾಲ್ ವಿವಿಯನ್ನು 52-37 ಅಂಕಗಳ ಅಂತರದಲ್ಲಿ ಮಣಿಸಿದ ಕೋಟಾ ವಿವಿ ಚಿನ್ನ ಗೆದ್ದುಕೊಂಡಿತು. ವನಿತೆಯರ ಫೈನಲ್‌ನಲ್ಲಿ ಕುರುಕ್ಷೇತ್ರ ವಿವಿ 46-19 ಅಂತರದಲ್ಲಿ ಮಹರ್ಷಿ ದಯಾನಂದ ವಿವಿಯನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ಫುಟ್ಬಾಲ್‌ನಲ್ಲಿ ಎಂಜಿ ವಿವಿ ಕೊಟ್ಟಾಯಂ ತಂಡ ಕೇರಳ ವಿವಿಯನ್ನು 2-0 ಗೋಲುಗಳಿಂದ ಮಣಿಸಿ ಚಿನ್ನ ಗೆದ್ದುಕೊಂಡಿತು.
76 ಕೂಟ, 2 ರಾಷ್ಟ್ರೀಯ ದಾಖಲೆಗಳು ಬ್ರೇಕ್!
ಖೇಲೋ ಇಂಡಿಯಾ ಗೇಮ್ಸ್‌ನ 2ನೇ ಆವೃತ್ತಿಯಲ್ಲಿ ಎರಡು ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾಯಿತು. ಈ ಎರಡೂ ದಾಖಲೆಗಳನ್ನು ಕರ್ನಾಟಕದ ವಿವಿಗಳು ನಿರ್ಮಿಸಿದ್ದು ಗಮನಾರ್ಹ. ವೇಟ್‌ಲಿಫ್ಟಿಂಗ್‌ನಲ್ಲಿ ಮಂಗಳೂರು ವಿವಿಯ ಆ್ಯನ್ ಮರಿಯಾ 87+ಕೆಜಿ ವಿಭಾಗದ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 129 ಕೆ.ಜಿ. ಭಾರ ಎತ್ತಿ ರಾಷ್ಟ್ರೀಯ ದಾಖಲೆ ಬರೆದರೆ, ಈಜಿನಲ್ಲಿ ಜೈನ್ ವಿವಿಯ ಶಿವ ಶ್ರೀಧರ್ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ದಾಖಲೆ(2 ನಿಮಿಷ 05.43 ಸೆ,) ಬರೆದರು. 76 ಕೂಟ ದಾಖಲೆಗಳೂ ಗೇಮ್ಸ್‌ನಲ್ಲಿ ನಿರ್ಮಾಣವಾಯಿತು.
Khelo India University Games: ಜೈನ್ ಯೂನಿವರ್ಸಿಟಿ ಸಮಗ್ರ ಚಾಂಪಿಯನ್
ಶಿವ, ಶೃಂಗಿ ಶ್ರೇಷ್ಠ ಕ್ರೀಡಾಳುಗಳು
ಜೈನ್ ವಿವಿಯನ್ನು ಪ್ರತಿನಿಧಿಸಿದ್ದ ಶಿವ ಶ್ರೀಧರ್ ಹಾಗೂ ಶೃಂಗಿ ಬಾಂಡೇಕರ್ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಅತೀ ಹೆಚ್ಚು ಪದಕ ಗೆದ್ದ ಕ್ರೀಡಾಪಟುಗಳು ಎನಿಸಿಕೊಂಡರು. ಶಿವ 7 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದರೆ, ಶೃಂಗಿ 4 ಚಿನ್ನ , 1 ಬೆಳ್ಳಿ ಗೆದ್ದಿದ್ದಾರೆ. ಕರ್ನಾಟಕದ ಪ್ರಿಯಾ ಮೋಹನ್, ಒಲಿಂಪಿಯನ್ ದ್ಯುತಿ ಚಂದ್‌ರನ್ನು ಸೋಲಿಸಿದ್ದು ಕೂಟದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿತು.
ಶಿವ, ಪ್ರಿಯಾ ಬಗ್ಗೆ ಠಾಕೂರ್ ಮೆಚ್ಚುಗೆ
ಕರ್ನಾಟಕದ ಈಜುಪಟು ಶಿವಾ ಶ್ರೀಧರ್ ಹಾಗೂ ಅಥ್ಲೀಟ್ ಪ್ರಿಯಾ ಮೋಹನ್‌ರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೊಂಡಾಡಿದರು. ‘200 ಮೀ. ಓಟದಲ್ಲಿ ಒಲಿಂಪಿಯನ್ ದ್ಯುತಿಯನ್ನು ಸೋಲಿಸಿದ ಪ್ರಿಯಾ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ. ಈ ಕ್ರೀಡಾಕೂಟವು ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ವಿಶ್ವ ವಿವಿ ಗೇಮ್ಸ್ ರೀತಿಯಲ್ಲಿ ಖೇಲೋ ಇಂಡಿಯಾ ವಿವಿ ಗೇಮ್ಸ್ ನಡೆದಿದೆ’ ಎಂದು ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನ ಸೆಳೆದ ಮೈಸೂರಿನ ಯೋಗ ಪಟು ಖುಷಿ
ಸಮಾರೋಪ ಸಮಾರಂಭದಲ್ಲಿ ಅನೇಕ ಸಾಂಸ್ಕೃತಿಕ ಕಾರ‍್ಯಕ್ರಮಗಳಿದ್ದವು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ, 4ನೇ ಸ್ಥಾನ ಪಡೆದ ಮಹಿಳಾ ಹಾಕಿ ತಂಡವನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮೈಸೂರಿನ ಯೋಗಪಟು, ಮೊದಲ ವರ್ಷ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿನಿ ಎಚ್. ಖುಷಿ ಕಾರ‍್ಯಕ್ರಮದ ಮುಖ್ಯ ಆಕರ್ಷಣೆ ಎನಿಸಿದರು. ಅವರ ಪ್ರದರ್ಶನ ಕೇಂದ್ರ ಸಚಿವ ಅಮಿತ್ ಶಾ ಸೇರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಒಲಿಂಪಿಕ್ಸ್‌ನಲ್ಲಿ ಟಾಪ್ 5 ಗುರಿ
2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ಒಲಿಂಪಿಕ್ಸ್‌ನಲ್ಲಿ ಭಾರತ ಅಗ್ರ 5ರಲ್ಲಿ ಸ್ಥಾನ ಪಡೆಯುವ ಭರವಸೆ ಇದೆ. ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಹೆಚ್ಚಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಈಗಲೇ ಸಿದ್ಧತೆ ಆರಂಭವಾಗಿದೆ. ಮುಂದಿನ 25 ವರ್ಷಕ್ಕೆ ಬೇಕಿರುವ ನೀಲನಕ್ಷೆ ಸಿದ್ಧವಿದೆ. -ಅಮಿತ್ ಶಾ, ಕೇಂದ್ರ ಗೃಹ ಸಚಿವ