New Delhi Marathon: ಏಷ್ಯಡ್ ಮ್ಯಾರಥಾನ್‌ಗೆ ಕರ್ನಾಟಕದ ಬೆಳ್ಳಿಯಪ್ಪಗೆ ಅರ್ಹತೆ
ನವದೆಹಲಿ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ ಅವರೊಂದಿಗೆ ಎಬಿ ಬೆಳ್ಳಿಯಪ್ಪ ಅಲ್ಲದೆ, ಕಾರ್ತಿಕ್ ಕುಮಾರ್ ಹಾಗೂ ಮಾನ್ ಸಿಂಗ್ ಕೂಡ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಮ್ಯಾರಥಾನ್‌ಗೆ ಅರ್ಹತೆ ಸಂಪಾದಿಸಿದ್ದಾರೆ.
ನವದೆಹಲಿ (ಫೆ.26): ಕನ್ನಡಿಗ ಎ.ಬಿ.ಬೆಳ್ಳಿಯಪ್ಪ ಸೇರಿ ಭಾರತದ ಅಗ್ರ ಮೂರು ಓಟಗಾರರು ಅಪೋಲೋ ಟೈಯರ್ಸ್ ನವದೆಹಲಿ ಮ್ಯಾರಥಾನ್‌ನಲ್ಲಿ ಪದಕ ಸಾಧನೆ ಮಾಡಿದ್ದಲ್ಲದೆ, 2023ರ ಸೆಪ್ಟೆಂಬರ್‌ನಲ್ಲಿ ಚೀನಾದ ಹುವಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಅರ್ಹತೆ ಪಡೆದಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ, ಮಾನ್ ಸಿಂಗ್ ಹಾಗೂ ಕಾರ್ತಿಕ್ ಕುಮಾರ್ ಮೂವರೂ ಏಷ್ಯಾಡ್ ಅರ್ಹತಾ ಗುರಿಯಾದ 2 ಗಂಟೆ 15 ನಿಮಿಷಗಳೊಳಗೆ ಓಟ ಪೂರೈಸಿದರು. ಕಳೆದ ತಿಂಗಳಷ್ಟೇ ತಮ್ಮ ವೈಯಕ್ತಿಕ ಶ್ರೇಷ್ಠ 2 ಗಂಟೆ 16.58 ನಿಮಿಷಗಳ ಸಾಧನೆ ಮಾಡಿದ್ದ ಮಾನ್ ಸಿಂಗ್, ಭಾನುವಾರ 2 ಗಂಟೆ 14.13 ನಿಮಿಷಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ಗೆಲ್ಲುವುದರ ಜೊತೆ 1.5 ಲಕ್ಷ ರುಪಾಯಿ ಬಹುಮಾನ ಮೊತ್ತವನ್ನೂ ಬಾಚಿಕೊಂಡರು. ಬೆಳ್ಳಿಯಪ್ಪ 2 ಗಂಟೆ 14.15 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸಿ ಕೇವಲ 2 ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನದಿಂದ ವಂಚಿತರಾದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರಮುಖ ಓಟಗಾರನಿಗೆ ಬೆಳ್ಳಿ ಪದಕ ಒಲಿಯಿತು. ಕಾರ್ತಿಕ್ ಕುಮಾರ್ 2 ಗಂಟೆ 14.19 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಮೊದಲ ಸ್ಥಾನಕ್ಕೂ ಮೂರನೇ ಸ್ಥಾನಕ್ಕೂ ಕೇವಲ 6 ಸೆಕೆಂಡ್‌ಗಳ ಅಂತರವಿತ್ತು.
ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಗಾವಟೆ ಚಿನ್ನದ ಪದಕ ಗೆದ್ದರು. ಆದರೆ, ಏಷ್ಯನ್ ಗೇಮ್ಸ್‌ಗೆ ಟಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. 2 ಗಂಟೆ 53.04 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದರು. ಏಷ್ಯಾಡ್‌ಗೆ ಅರ್ಹತೆ ಪಡೆಯಲು 2 ಗಂಟೆ 47 ನಿಮಿಷಗಳ ಗುರಿ ನಿಗದಿ ಮಾಡಲಾಗಿದೆ. ಇನ್ನು ಅಶ್ವಿನಿ ಜಾಧವ್ (2 ಗಂಟೆ 53.06 ನಿಮಿಷ) ಹಾಗೂ ಜಿಗ್ಮೆತ್ ಡೊಲ್ಮಾ(2 ಗಂಟೆ 56.41 ನಿಮಿಷ) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
'ದೇವ್ರೆ ಕಾಪಾಡು...' ಪತ್ನಿ ಆಥಿಯಾ ಜೊತೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಕೆಎಲ್ ರಾಹುಲ್ ಭೇಟಿ!
‘ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯೂ ನಮ್ಮ ಅಥ್ಲೀಟ್‌ಗಳಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಬೇಕಿದ್ದ ವೇದಿಕೆ ಹಾಗೂ ಉತ್ತಮ ವಾತಾವರಣವನ್ನು ನೀಡಿದ್ದೇವೆ. ನಮ್ಮ ಮೂವರು ಎಲೈಟ್ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿರುವುದು ಬಹಳ ಖುಷಿಯ ವಿಚಾರ’ ಎಂದು ರೇಸ್ ನಿರ್ದೇಶಕರಾಗಿರುವ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯ ನಾಗರಾಜ್ ಅಡಿಗ ಹೇಳಿದರು.
ನಾಳೆ 'ಲಾರ್ಡ್' ಶಾರ್ದೂಲ್‌ಗೆ ಮದುವೆ, ಉದ್ಯಮಿ ಮಹಿಳೆಯ ಕೈಹಿಡಿಯಲಿದ್ದಾರೆ ಟೀಂ ಇಂಡಿಯ ವೇಗಿ!
‘ಓಟಗಾರರ ಉತ್ಸಾಹ ನೋಡಿ ನಾನು ಬೆರಗಾಗಿದ್ದೇನೆ. ಭಾರತದ ಅಥ್ಲೀಟ್‌ಗಳು ನೆಹರು ಕ್ರೀಡಾಂಗಣಕ್ಕೆ ವಾಪಸಾಗುತ್ತಿರುವುದು ಏಷ್ಯಾಡ್ ಅರ್ಹತಾ ಗುರಿ ತಲುಪಲಿದ್ದಾರೆ ಎನ್ನುವ ವಿಷಯ ತಿಳಿದು ನಾನು ಉತ್ಸುಕಗೊಂಡೆ. ಅವರನ್ನು ಹುರಿದುಂಬಿಸುವುದನ್ನು ಬಿಟ್ಟು ಬೇರೇನೂ ಮಾಡಲು ನನಗೆ ಸಾಧ್ಯವಾಗಲಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಅವರು ಹೇಳಿದರು.
16000ಕ್ಕೂ ಅಧಿಕ ಓಟಗಾರರು ನಾಲ್ಕು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಇದರೊಂದಿಗೆ ನವದೆಹಲಿ ಮ್ಯಾರಥಾನ್ ದೇಶದಲ್ಲಿ ಅತಿಹೆಚ್ಚು ಓಟಗಾರರನ್ನು ಆಕರ್ಷಿಸಿದ ಮ್ಯಾರಥಾನ್‌ಗಳಲ್ಲಿ ಒಂದೆನಿಸಿತು. ಎಲೈಟ್ ಓಟಗಾರರು ಬೆಳಗ್ಗೆ 5 ಗಂಟೆಗೆ ಸ್ಪರ್ಧೆ ಆರಂಭಿಸಿದರು. ಡೇವಿಡ್ ರುಧಿಶಾ ಹಾಗೂ ಇತರ ಗಣ್ಯರು ಓಟಕ್ಕೆ ಚಾಲನೆ ನೀಡಿದರು.