'ದೇವ್ರೆ ಕಾಪಾಡು...' ಪತ್ನಿ ಆಥಿಯಾ ಜೊತೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಕೆಎಲ್ ರಾಹುಲ್ ಭೇಟಿ!
ಸತತ ವೈಫಲ್ಯದಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭಾನುವಾರ ಪತ್ನಿ ಆಥಿಯಾ ಶೆಟ್ಟಿ ಜೊತೆಗೂಡಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇಂದೋರ್ (ಫೆ.26): ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಪಾಲಿಗೆ ಇತ್ತೀಚಿನ ಕೆಲ ತಿಂಗಳು ಉತ್ತಮವಾಗಿಲ್ಲ. ಫಾರ್ಮ್ ಕಂಡುಕೊಳ್ಳಲು ಒದ್ದಾಟ ನಡೆಸುತ್ತಿರುವ ಕೆಎಲ್ ರಾಹುಲ್ ಜೀವನದಲ್ಲಿ ಆದ ಖುಷಿಯಾದ ವಿಚಾರವೆಂದರೆ ದೀರ್ಘಕಾಲದ ಗೆಳತಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ಕೈಹಿಡಿದಿರುವುದು. ಆದರೆ, ಮದುವೆಯಾದ ಬಳಿಕವೂ ಅವರ ಅದೃಷ್ಟ ಬದಲಾದಂತಿಲ್ಲ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ದಯನೀಯ ವೈಫಲ್ಯ ಕಂಡಿದ್ದಾರೆ. ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೂ ಮುನ್ನ ಕೆಎಲ್ ರಾಹುಲ್ ತನ್ನ ಪತ್ನಿ ಆಥಿಯಾ ಶೆಟ್ಟಿಯನ್ನು ಕರೆದುಕೊಂಡು ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಭೇಟಿ ನೀಡಿದ್ದಲ್ಲದೆ, ಅಲ್ಲಿನ ಜ್ಯೋತಿರ್ಲಿಂಗಕ್ಕೆ ದೊಡ್ಡ ಪೂಜೆಯನ್ನು ನೀಡಿದ್ದಾರೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಾಹುಲ್ ಕಳಪೆ ಫಾರ್ಮ್‌ನಲ್ಲಿರುವ ಕಾರಣ ಆರಂಭಿಕ ಜೋಡಿಯಾಗಿ ನಾಯಕ ರೋಹಿತ್ ಶರ್ಮಗೆ ಶುಭ್‌ಮನ್ ಗಿಲ್ ಅವರನ್ನು ಜೊತೆ ಮಾಡುವಂತೆ ಮಾಜಿ ಆಟಗಾರರು ಆಗ್ರಹಪಡಿಸಿದ್ದಾರೆ. ಹಾಲಿ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಆಡಿರುವ ಮೂರು ಇನ್ನಿಂಗ್ಸ್‌ಗಳ ಪೈಕಿ ಯಾವುದರಲ್ಲಿಯೂ ಕನಿಷ್ಠ 25 ರನ್‌ಗಳ ಗಡಿ ದಾಟಿಲ್ಲ. ಫಾರ್ಮ್ ಕೈಕೊಟ್ಟಿರುವ ಕಾರಣ ಈಗ ರಾಹುಲ್ ದೇವರ ಮೊರೆ ಹೋಗಿದ್ದಾರೆ. ಭಾರತದಲ್ಲಿ ಪ್ರಖ್ಯಾತ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್‌ಗಳಲ್ಲಿ ಕೆಎಲ್ ರಾಹುಲ್ ಬದಲಿಗೆ ಶುಭ್‌ಮನ್ ಗಿಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಸುಳಿವು ನೀಡಿದ್ದಾರೆ. ಭಾರತದ ಉಪನಾಯಕ ರಾಹುಲ್ ಅವರ ಕೆಟ್ಟ ಫಾರ್ಮ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ.
ಕೆ ಎಲ್ ರಾಹುಲ್ ಫಾರ್ಮ್ ಬಗ್ಗೆ ಕೊನೆಗೂ ಮೌನ ಮುರಿದ ನಾಯಕ ರೋಹಿತ್ ಶರ್ಮಾ..!
ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆಯ ಹೊರತಾಗಿಯೂ, ಗಿಲ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ರಾಹುಲ್ ಮೇಲೆ ಇದರಿಂದಾಗಿ ಒತ್ತಡ ಹೆಚ್ಚಾಗುತ್ತಿದೆ. "ತಂಡದ ಮ್ಯಾನೇಜ್‌ಮೆಂಟ್‌ಗೆ ಅವರ (ರಾಹುಲ್) ಫಾರ್ಮ್ ತಿಳಿದಿದೆ, ಅವರಿಗೆ ಅವರ ಮಾನಸಿಕ ಸ್ಥಿತಿ ತಿಳಿದಿದೆ. ಅವರು ಗಿಲ್‌ನಂತಹವರನ್ನು ಹೇಗೆ ನೋಡಬೇಕು ಎಂದು ಅವರಿಗೆ ತಿಳಿದಿದೆ" ಎಂದು ಐಸಿಸಿ ರಿವ್ಯೂ ಪಾಡ್‌ಕಾಸ್ಟ್‌ನಲ್ಲಿ ಶಾಸ್ತ್ರಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕೊನೇ 2 ಟೆಸ್ಟ್, ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ರಾಹುಲ್‌ಗೆ ಶಾಕ್!
ಭಾರತದ ತಂಡಕ್ಕೆ ಎಂದಿಗೂ ಉಪನಾಯಕನ ಅಗತ್ಯವೊಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದರ ಬದಲು ಬೆಸ್ಟ್ ಇಲೆವೆನ್ ಅನ್ನು ಆಯ್ಕೆ ಮಾಡೋದೇ ಗುರಿಯಾಗಿರಬೇಕು. ಹಾಗೇನಾದರೂ ನಾಯಕ ಮೈದಾನದಿಂದ ಹೊರಹೋಗುವ ಸಂದರ್ಭದ ಬಂದಾಗ ಮಾತ್ರವೇ, ಒಬ್ಬ ಉತ್ತಮ ಆಟಗಾರನಿಗೆ ನಾಯಕನ ಜವಾಬ್ದಾರಿ ನೀಡಿ ಹೊರಹೋದರೆ ಸಾಕಾಗುತ್ತದೆ. ಇದಕ್ಕೆ ಉಪನಾಯಕನೇ ಆಗಬೇಕು ಅಂತೇನಿಲ್ಲ ಎಂದು ಹೇಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್‌ಗಳಿಗೆ ಉಪನಾಯಕರಾಗಿದ್ದ ರಾಹುಲ್, ಅಂತಿಮ ಎರಡು ಪಂದ್ಯಗಳಿಗೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಅವರ ಉಪನಾಯಕ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ.