* ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕೂಟ ದಾಖಲೆ ಬರೆದ ರಾಜ್ಯದ ಸಂಭವ್* ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ ಸಂಭವ್‌ ದಾಖಲೆ* ಕೂಟದಲ್ಲಿ ಕರ್ನಾಟದ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿದೆ.

ಬೆಂಗಳೂರು(ಅ.29): 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ (National Swimming Championship) ಕರ್ನಾಟಕದ 17 ವರ್ಷದ ಸಂಭವ್‌ ಆರ್‌. ಹೊಸ ದಾಖಲೆ ಬರೆದಿದ್ದಾರೆ. ಕೂಟದ 3ನೇ ದಿನವಾದ ಗುರುವಾರ ನಡೆದ ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ ಸಂಭವ್‌ 23.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದ್ದಲ್ಲದೇ, ಕೂಟದ ಅತೀ ವೇಗದ ಈಜುಗಾರ ಎಂಬ ದಾಖಲೆ ಬರೆದರು. 

ಇತ್ತೀಚೆಗಷ್ಟೇ ಮುಕ್ತಾಯಗೊಂಡ 47ನೇ ಜೂನಿಯರ್‌ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಸಂಭವ್‌ 4 ಚಿನ್ನ ಸೇರಿ ಒಟ್ಟು 5 ಪದಕ ಗೆದ್ದಿದ್ದರು. ಇನ್ನು, ದೆಹಲಿಯ ಕುಶಾಗ್ರ ರಾವತ್‌ ಮತ್ತೊಂದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 1500 ಮೀ. ಪುರುಷರ ಫ್ರೀಸ್ಟೈಲ್‌ನಲ್ಲಿ 15 ನಿಮಿಷ 38.13 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕುಶಾಗ್ರ, 2019ರಲ್ಲಿ ತಾವೇ ಬರೆದಿದ್ದ ದಾಖಲೆ(15 ನಿ. 41.45 ಸೆ.)ಯನ್ನು ಉತ್ತಮಪಡಿಸಿಕೊಂಡರು. 

ಈಜು ಚಾಂಪಿಯನ್‌ಶಿಪ್‌: ಶ್ರೀಹರಿ ನಟರಾಜ್ ಮತ್ತೆ ರಾಷ್ಟ್ರೀಯ ದಾಖಲೆ

ಈ ಮೊದಲು ಮೊದಲೆರಡು ದಿನದ ಕ್ರೀಡಾಕೂಟದಲ್ಲಿ ಕರ್ನಾಟಕದ ತಾರಾ ಈಜುಪಟು, ಒಲಿಂಪಿಯನ್‌ ಶ್ರೀಹರಿ ನಟರಾಜ್‌ (Srihari Nataraj) ಎರಡು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಮೊದಲ ದಿನ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 55.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ರಾಷ್ಟ್ರೀಯ ದಾಖಲೆ (National Record) (55.63 ಸೆ.)ಯನ್ನು ಉತ್ತಮಪಡಿಸಿಕೊಂಡರು. ಇನ್ನು ಎರಡನೇ ದಿನ 100 ಮೀ. ಫ್ರೀಸ್ಟೈಲ್‌ ಪುರುಷರ ವಿಭಾಗದಲ್ಲಿ ರಾಜ್ಯದ ಶ್ರೀಹರಿ ನಟರಾಜ್‌ ಹೀಟ್ಸ್‌ನಲ್ಲಿ 50.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ವಿರ್ಧವಾಲ್‌ ಖಾಡೆ 2012ರಲ್ಲಿ ಬರೆದಿದ್ದ ರಾಷ್ಟ್ರೀಯ ದಾಖಲೆ (National Record) (50.53 ಸೆ.)ಯನ್ನು ಮುರಿದರು. ಬಳಿಕ ಫೈನಲ್‌ನಲ್ಲಿ 49.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಕರ್ನಾಟದ ಒಟ್ಟು 24 ಪದಕಗಳನ್ನು ಗೆದ್ದುಕೊಂಡಿದೆ.

ಫ್ರೆಂಚ್‌ ಓಪನ್‌: ಕ್ವಾರ್ಟರ್‌ ಪ್ರವೇಶಿಸಿದ ಲಕ್ಷ್ಯ ಸೆನ್‌

ಪ್ಯಾರಿಸ್‌: ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ (Badminton) ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷ್ಯ ಸೆನ್‌ (Lakshya Sen) ಕೊರಿಯಾದ ಹ್ಯೋ ಕ್ವಾಂಗೀ ಅಥವಾ ಚೈನೀಸ್ ತೈಪೆಯ ವ್ಯಾಂಗ್ ತ್ಸು ವೀ ಅವರನ್ನು ಎದುರಿಸುವ ಸಾಧ್ಯತೆಯಿದೆ

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.40, ಸಿಂಗಾಪುರದ ಲ್ಹೊ ಕೀನ್‌ ಯೆವ್‌ ವಿರುದ್ಧ 21-17, 21-13 ಗೇಮ್‌ಗಳಲ್ಲಿ ಜಯಿಸಿದರು. 2 ವಾರಗಳ ಹಿಂದೆ ಡಚ್‌ ಓಪನ್‌ನ ಫೈನಲ್‌ನಲ್ಲಿ ಲಕ್ಷ್ಯ, ಲ್ಹೊ ಕೀನ್‌ ವಿರುದ್ಧ ಸೋತಿದ್ದರು. 

ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ

ಇದೇ ವೇಳೆ 2ನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡ ಸಮೀರ್‌ ವರ್ಮಾ ಟೂರ್ನಿಯಿಂದ ಹೊರನಡೆಯಲು ನಿರ್ಧರಿಸಿದರು. ಸಮೀರ್ ವರ್ಮಾ ಇಂಡೋನೇಷ್ಯಾದ ಆಟಗಾರ ಶೇಸರ್ ಹಿರೋನ್ ಎದುರು ಮೊದಲ ಗೇಮ್‌ನಲ್ಲಿ 21-16 ಅಂಕಗಳಿಂದ ಜಯಿಸಿದ್ದರು. ಆದರೆ ಎರಡನೇ ಗೇಮ್‌ನಲ್ಲಿ 12-21ರಿಂದ ಮುಗ್ಗರಿಸಿದರು. ಇನ್ನು ನಿರ್ಣಾಯಕ ಗೇಮ್‌ಗೂ ಮುನ್ನ ಗಾಯಗೊಂಡು ಟೂರ್ನಿಯಿಂದ ಹೊರನಡೆದರು. ಸಮೀರ್ ವರ್ಮಾ ಡೆನ್ಮಾರ್ಕ್ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲೂ ಗಾಯಗೊಂಡು ಕ್ವಾರ್ಟರ್‌ ಫೈನಲ್‌ನಲ್ಲಿ ಹಿಂದೆ ಸರಿದಿದ್ದರು. 

ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ರಾಜ್‌ ರಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ 21-15,17-21,19-21 ಗೇಮ್‌ಗಳಿಂದ ರೋಚಕ ಸೋಲು ಅನುಭವಿಸಿತು.