ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ
* ಬಸವರಾಜ ಬೊಮ್ಮಾಯಿಯವರ ಮಹತ್ವಾಕಾಂಕ್ಷೆ ಯೋಜನೆ ಅಮೃತ ಕ್ರೀಡಾ ದತ್ತು ಯೋಜನೆ
* ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ರಾಜ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಯೋಜನೆ
* ರಾಜ್ಯದ 75 ಪ್ರತಿಭಾನ್ವಿತ ಕ್ರೀಡಾಪಟುಗಳು ಆಯ್ಕೆ
ಬೆಂಗಳೂರು(ಅ.24): ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಕ್ರೀಡಾಕೂಟಕ್ಕೆ ರಾಜ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ರೂಪಿಸಿರುವ ‘ಅಮೃತ ಕ್ರೀಡಾ ದತ್ತು ಯೋಜನೆ’ಗೆ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸ್ವಾತಂತ್ರ್ಯೋತ್ಸವದ (Independence Day Speech) ಭಾಷಣದಲ್ಲಿ ಘೋಷಿಸಿದ ಈ ಯೋಜನೆಗೆ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ ಅವರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ವಿಸ್ತೃತವಾಗಿ ಚರ್ಚಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಈ 75 ಕ್ರೀಡಾಪಟುಗಳ ಜತೆಗೆ ಹೆಚ್ಚುವರಿಯಾಗಿ 20 ಮಂದಿ ಕ್ರೀಡಾಪಟುಗಳನ್ನು ಕಾಯ್ದಿರಿಸುವ ಪಟ್ಟಿಗೆ ಆಯ್ಕೆ ಮಾಡಲಾಗಿದೆ.
ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್ ಕರೆ
ಗಾಲ್ಫ್ -1, ಸ್ವಿಮ್ಮಿಂಗ್ - 5, ಅಥ್ಲೆಟಿಕ್ಸ್ - 12, ಪ್ಯಾರಾ ಅಥ್ಲೆಟಿಕ್ಸ್ -3, ಸೈಕ್ಲಿಂಗ್ - 8, ಬ್ಯಾಸ್ಕೆಟ್ ಬಾಲ್-7, ಕುಸ್ತಿ (Wrestling) -4, ಟೆನ್ನಿಸ್ (Tennis) -3, ಟೇಬಲ್ ಟೆನ್ನಿಸ್ (Table Tennis) -2, ಹಾಕಿ (Hockey) -5, ಬ್ಯಾಡ್ಮಿಂಟನ್ (Badminton) -9 ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸುವ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್ (Aditi Ashok), ಈಜುಪಟು ಶ್ರೀಹರಿ ನಟರಾಜ್ (Srihari Nataraj), ಪ್ಯಾರಾ ಈಜುಪಟು ನಿರಂಜನ್, ಫೌದಾ ಮಿರ್ಜಾ ಮೊದಲಾದವರು ಆಯ್ಕೆಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ (Tokyo Olympics), ಕಾಮನ್‌ವೆಲ್ತ್ ಗೇಮ್ಸ್ (Commonwealth Games), ಏಷ್ಯನ್ ಗೇಮ್ಸ್ (Asian Games) ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದವರನ್ನು ಅಮೃತ ಕ್ರೀಡಾ ದತ್ತು ಯೋಜನೆಗೆ ಆಯ್ಕೆ ಮಾಡಲಾಗಿದೆ.
ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು
ನವೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆಯಡಿ ಆಯ್ಕೆಯಾಗಿರುವ ಎಲ್ಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಿಸಲಿದ್ದಾರೆ. ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ವಾರ್ಷಿಕ ಐದು ಲಕ್ಷ ರುಪಾಯಿ ನೀಡಲಾಗುತ್ತದೆ. ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲಾಗುತ್ತದೆ. ಇದರ ಜತೆಗೆ ಕ್ರೀಡಾಪಟುಗಳಿಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಸಿಎಸ್‌ಆರ್ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು 150ಕ್ಕೂ ಕಂಪನಿಗಳಿಗೆ ಪತ್ರ ಬರೆದು ಚರ್ಚಿಸಲಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಏನಿದು ಅಮೃತ ಕ್ರೀಡಾ ದತ್ತು ಯೋಜನೆ?
75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಈ ಪೈಕಿ ಅಮೃತ ಕ್ರೀಡಾ ದತ್ತು ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಗಮನದಲ್ಲಿರಿಸಿಕೊಂಡು, ಉತ್ತಮ ಸಾಧನೆ ತೋರಿ ಪದಕ ವಿಜೇತರಾಗುವ ಸಾಮರ್ಥ್ಯ ಉಳ್ಳ ಆಯ್ದ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುವುದು. ಕ್ರೀಡೆಗೆ ಉತ್ತೇಜನ ನೀಡುವುದರ ಜತೆಗೆ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೊಳಿಸಲಾಗಿದೆ.