ಬೆಂಗಳೂರು(ಜ.28): ಫೆ.3ರಿಂದ 8ರವರೆಗೂ ಅಂಡರ್‌-14 ವಿಭಾಗದಲ್ಲಿ ಮಿನಿ ಒಲಿಂಪಿಕ್ಸ್‌ ನಡೆಸಲು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ನಿರ್ಧರಿಸಿದೆ. ಕ್ರೀಡಾಕೂಟದಲ್ಲಿ ರಾಜ್ಯದ 3732 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಕ್ರೀಡಾ ಸಚಿವ ಕೆ.ಎಸ್‌.ಈಶ್ವರಪ್ಪ ಘೋಷಿಸಿದರು. 

ಫೆ.3 ರಿಂದ ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್‌ ಕೂಟ

ಕಿರಿಯ ಕ್ರೀಡಾಪಟುಗಳಿಗೆ ಈ ರೀತಿಯ ಕ್ರೀಡಾಕೂಟ ದೇಶದಲ್ಲೇ ಇದು ಮೊದಲ ಬಾರಿಗೆ ಆಗಿದೆ ಎಂದು ಅವರು ತಿಳಿಸಿದರು. ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಹ್ಯಾಂಡ್‌ಬಾಲ್‌ ಸೇರಿದಂತೆ ಒಟ್ಟು 18 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಕೂಟವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಸಚಿವರು, ಕ್ರೀಡಾಕೂಟದ ವೆಬ್‌ಸೈಟ್‌ ಹಾಗೂ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದರು.

ಹಾಳಾದ ಟ್ರ್ಯಾಕ್‌ನಲ್ಲೇ ಅಥ್ಲೆಟಿಕ್ಸ್‌ ಸ್ಪರ್ಧೆಗಳು!

ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದಿರುವ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಅಥ್ಲೆಟಿಕ್ಸ್‌ ಸ್ಪರ್ಧೆಗಳು ನಡೆಯಲಿದೆ. ಟ್ರ್ಯಾಕ್‌ ಮರು ಅಳವಡಿಕೆ ಕಾರ್ಯವನ್ನು ಕ್ರೀಡಾ ಇಲಾಖೆ ಮುಂದೂಡುತ್ತಲೇ ಇದ್ದು, ಈ ವರ್ಷವೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂದು ಹಲವರು ಅಭಿಪ್ರಾಯಿಸಿದ್ದಾರೆ.