ರಾಜ್ಯ ಅಥ್ಲೆಟಿಕ್ಸ್ ಬೆಂಗಳೂರಿಂದ ಉಡುಪಿಗೆ ದಿಢೀರ್ ಶಿಫ್ಟ್..!
* ರಾಜ್ಯ ಹಿರಿಯರ ಹಾಗೂ ಕಿರಿಯರ ಅಥ್ಲೆಟಿಕ್ಸ್ ದಿಢೀರ್ ಶಿಫ್ಟ್
* ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಈ ನಿರ್ಧಾರಕ್ಕೆ ಕೆಲ ಕ್ರೀಡಾಪಟುಗಳು, ಕೋಚ್‌ಗಳು ಅಸಮಾಧಾನ
* ಮೇ 8, 9ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ
ಬೆಂಗಳೂರು(ಮೇ.07): ರಾಜ್ಯ ಹಿರಿಯರ ಹಾಗೂ ಕಿರಿಯರ(ಅಂಡರ್-20) ಅಥ್ಲೆಟಿಕ್ಸ್ ಕೂಟವನ್ನು ದಿಢೀರನೆ ಬೆಂಗಳೂರಿನಿಂದ ಉಡುಪಿಗೆ ಸ್ಥಳಾಂತರ ಮಾಡಿದ್ದಕ್ಕೆ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ(ಕೆಎಎ) ವಿರುದ್ಧ ಕೆಲ ಕ್ರೀಡಾಪಟುಗಳು, ಕೋಚ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದು ಕೆಎಎ (KAA) ಅವ್ಯವಸ್ಥೆಯಿಂದಾಗಿ ರಾಜ್ಯದ ಅಥ್ಲೀಟ್‌ಗಳು ನರಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 8, 9ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟವನ್ನು ಗುರುವಾರ (ಮೇ 5), ಏಕಾಏಕಿ ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೇವಲ 2-3 ದಿನ ಬಾಕಿ ಇದ್ದಾಗ ಸ್ಥಳ ಬದಲಿಸಿದರೆ ಹೇಗೆ ಎಂದು ಕೆಲ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಗಳು ಸಹ ಪ್ರಶ್ನೆ ಮಾಡುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಥ್ಲೀಟ್‌ಗಳು ಅಸಮಾಧಾನ ವ್ಯಕ್ತಪಡಿಸಲು ಪ್ರಮುಖ ಕಾರಣ, ಈ ಕೂಟವು ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ ಅಂತರ-ರಾಜ್ಯ ಕೂಟಕ್ಕೆ ಆಯ್ಕೆ ಟ್ರಯಲ್ಸ್ ಸಹ ಆಗಿದೆ.
ಈ ಗೊಂದಲದ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ತಮ್ಮ ಬೇಸರ ತೋಡಿಕೊಂಡ ಮಾಜಿ ಅಥ್ಲೀಟ್, ಹಾಲಿ ಕೋಚ್ ಒಬ್ಬರು ‘ಕೂಟಕ್ಕೆ ಕೆಲವೇ ದಿನ ಬಾಕಿ ಇದ್ದಾಗ ಸ್ಥಳಾಂತರ ಮಾಡುವುದು ಎಷ್ಟುಸರಿ. ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ. ಉಡುಪಿಯಲ್ಲಿ ಉಳಿದುಕೊಳ್ಳಲು ಕೆಎಎ ವ್ಯವಸ್ಥೆ ಸಹ ಮಾಡಿಲ್ಲ. ಆದರೂ ಪ್ರತಿ ಕ್ರೀಡಾಪಟುವಿನಿಂದ 500 ರು. ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಿಯು, ಡಿಗ್ರಿ ಪರೀಕ್ಷೆಗಳ ಸಮಯದಲ್ಲಿ ಕೂಟವನ್ನು ಆಯೋಜಿಸಿಲಾಗುತ್ತಿದೆ’ ಎಂದರು.
ಸರ್ಕಾರ ಕಂಠೀರವದಲ್ಲಿ ಅವಕಾಶ ನಿರಾಕರಿಸಿದೆ: ಕೆಎಎ
ದಿಢೀರ್ ಸ್ಥಳಾಂತರವನ್ನು ಸಮರ್ಥಿಸಿಕೊಂಡಿರುವ ಕೆಎಎ ಕಾರ‍್ಯದರ್ಶಿ ಎ.ರಾಜವೇಲು ಅವರು, ‘ಕಂಠೀರವದಲ್ಲೇ ಕೂಟ ನಡೆಸಲು ಯೋಜಿಸಲಾಗಿತ್ತು. ಆದರೆ ಸರ್ಕಾರದ ಯಾವುದೋ ಕಾರ‍್ಯಕ್ರಮ ನಿಗದಿಯಾದ ಕಾರಣ ಕ್ರೀಡಾ ಇಲಾಖೆಯು ಅನುಮತಿ ನಿರಾಕರಿಸಿದೆ. ಹೀಗಾಗಿ, ಕಳೆದೆರಡು ಬಾರಿ ಉತ್ತಮ ನಿರ್ವಹಣೆ ನಡೆಸಿದ್ದ ಉಡುಪಿ ಜಿಲ್ಲೆಗೆ ಆಯೋಜನಾ ಅವಕಾಶ ನೀಡಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ’ ಎಂದರು. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನ ಅಥ್ಲೀಟ್‌ಗಳಿಗೆ ಉಡುಪಿಗೆ ಹೋಗುವುದು ಕಷ್ಟಎನ್ನುವುದಾದರೆ, ಉತ್ತರ ಕರ್ನಾಟಕದ, ಕರಾವಳಿಯ ಕ್ರೀಡಾಪಟುಗಳಿಗೆ ಬೆಂಗಳೂರಿಗೆ ಆಗಮಿಸಲು ಸಹ ಕಷ್ಟವಾಗುತ್ತದೆ. ಉಡುಪಿಗೆ ಎಲ್ಲೆಡೆಯಿಂದ ಬಸ್ ಸಂಪರ್ಕವಿದೆ. ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್(ಎಎಫ್‌ಐ) ಮಾರ್ಗಸೂಚಿ ಪ್ರಕಾರ ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ಹಾಗಿಲ್ಲ. ಪ್ರವೇಶ ಶುಲ್ಕ ಪಡೆಯದಿದ್ದರೆ ಸ್ಪರ್ಧಾಳುಗಳ ಸಂಖ್ಯೆಯನ್ನು ನಿಯಂತ್ರಿಸಲು ಆಗುವುದಿಲ್ಲ. ಈಗಾಗಲೇ 600 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ಎಎಫ್‌ಐ ಸಹ ಪ್ರವೇಶ ಶುಲ್ಕ ಪಡೆಯುತ್ತದೆ’ ಎಂದು ವಿವರಿಸಿದರು.
ಕೋವಿಡ್ ಕಾರಣದಿಂದಾಗಿ ಏಷ್ಯನ್ ಗೇಮ್ಸ್ ಮುಂದೂಡಿಕೆ!
ಕಂಠೀರವದಲ್ಲಿ ಸ್ಥಳಾವಕಾಶ ನಿರಾಕರಿಸಿದ್ದೇಕೆ ಎನ್ನುವ ಮಾಹಿತಿ ಪಡೆಯಲು ಕ್ರೀಡಾ ಇಲಾಖೆ ಅಧಿಕಾರಿಗಳನ್ನು ‘ಕನ್ನಡಪ್ರಭ’ ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ನಡೆಸಿತು. ಆದರೆ ಅಧಿಕಾರಿಗಳು ಉತ್ತರಿಸಲಿಲ್ಲ.