ಬೆಂಗಳೂರು(ಫೆ.04): ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಿರುವ 14 ವರ್ಷದೊಳಗಿನ ಮಿನಿ ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು. ‘ಭಾರತದ ಮಿನಿ ಒಲಿಂಪಿಕ್ಸ್‌ ಈಗ ಆರಂಭಗೊಂಡಿದೆ’ ಎಂದು ಘೋಷಿಸುವ ಮೂಲಕ ಚಾಲನೆ ನೀಡಿದರು. 

ಇದಕ್ಕೂ ಮುನ್ನ ರಾಜ್ಯ ಕ್ರೀಡಾ ಸಚಿವರಿಗೆ ರಾಷ್ಟ್ರೀಯ ಕ್ರೀಡಾಪಟುಗಳಾದ ಐಶ್ವರ್ಯಾ, ಅರುಣ್‌ ಶರ್ಮಾ ಕ್ರೀಡಾಜ್ಯೋತಿ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳ ಪಥ ಸಂಚಲನ, ಹುಲಿ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಾಗಾಸೆ ಗಮನ ಸೆಳೆಯಿತು.

ಇಂದಿನಿಂದ ಬೆಂಗಳೂರಲ್ಲಿ ಮಿನಿ ಒಲಿಂಪಿಕ್ಸ್‌ ಕೂಟ

ನಂತರ ಮಾತನಾಡಿದ ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌, ‘ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ನಿಂತಿದೆ. ಅಂ.ರಾ. ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಪೊಲೀಸ್‌ ಇಲಾಖೆಯಲ್ಲಿ ಅವಕಾಶ ಕಲ್ಪಿಸುವಂತಹ ಕಾರ್ಯಗಳನ್ನು ಸರ್ಕಾರ ನಡೆಸಬೇಕು. ಜಿಲ್ಲಾ ಕ್ರೀಡಾಂಗಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದರು. ‘ಪ್ರತಿ ವರ್ಷ ಕಿರಿಯರ ಹಾಗೂ ಹಿರಿಯರ ಒಲಿಂಪಿಕ್ಸ್‌ ಆಯೋಜಿಸುವ ಯೋಚನೆ ಹೊಂದಿದ್ದು ಸರ್ಕಾರ ಇದೇ ರೀತಿ ಪ್ರೋತ್ಸಾಹ ನೀಡಬೇಕು’ ಎಂದರು.

ಮೊದಲ ದಿನವಾದ ಸೋಮವಾರ ಫುಟ್ಬಾಲ್‌, ವಾಲಿಬಾಲ್‌, ಹಾಕಿ, ಜುಡೋ, ನೆಟ್‌ಬಾಲ್‌, ಟೆನಿಸ್‌ ಹಾಗೂ ವಾಲಿಬಾಲ್‌ ಸ್ಪರ್ಧೆಗಳು ನಡೆದವು. ಹಾಕಿ ಪಂದ್ಯಗಳ ಬಾಲಕರ ವಿಭಾಗದಲ್ಲಿ ಬಳ್ಳಾರಿ, ಗದಗ ವಿರುದ್ಧ 12-0 ಗೋಲುಗಳಿಂದ ಗೆದ್ದರೇ, ಕೂರ್ಗ್‌ ತಂಡ, ಕಲಬುರ್ಗಿ ವಿರುದ್ಧ 16-0 ಗೋಲುಗಳಿಂದ ಜಯಿಸಿತು.

ಮಕ್ಕಳು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ, ದೈಹಿಕವಾಗಿ ಸದೃಢರಾಗಬೇಕು. ಈ ಮಟ್ಟದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು. ಕ್ರೀಡೆಗೆ ರಾಜ್ಯ ಸರ್ಕಾರದಿಂದ ಇನ್ನಷ್ಟುಪ್ರೋತ್ಸಾಹ ದೊರೆಯಲಿದೆ.

- ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಆಗಮಿಸಿದ್ದಾರೆ. ಈ ವೇದಿಕೆಯನ್ನು ಬಳಸಿಕೊಂಡು ಮುಂದಿನ ಹಂತಕ್ಕೇರಬೇಕು. ರಾಜ್ಯ, ದೇಶದ ಕೀರ್ತಿ ಹೆಚ್ಚಿಸಲು ಶ್ರಮಿಸಬೇಕು.

- ಕೆ.ಎಸ್‌. ಈಶ್ವರಪ್ಪ, ರಾಜ್ಯ ಕ್ರೀಡಾ ಸಚಿವ