ಸೆಕ್ಸ್ ಬೇಡವೆಂದ್ರೆ ಟೀಂನಿಂದ ಹೊರಹಾಕೋ ಬೆದರಿಕೆ, ಕಾಮುಕ ಕಬಡ್ಡಿ ಕೋಚ್ ಕಂಬಿ ಹಿಂದೆ..!
* ಕಬಡ್ಡಿ ಆಟಗಾರ್ತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಕೋಚ್ ಈಗ ಕಂಬಿ ಹಿಂದೆ
* ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದರೆ ತಂಡದಿಂದಲೇ ಹೊರಗೆ ಹಾಕುವ ಬೆದರಿಕೆಯೊಡ್ಡಿದ್ದ ಕೋಚ್
* ಪೊಲೀಸರ ತನಿಖೆಯ ವೇಳೆ ಹೊರಬಂತು ಬೆಚ್ಚಿಬೀಳಿಸುವಂತಹ ಮಾಹಿತಿ
ಮುಂಬೈ(ಮಾ.19): ಕಬಡ್ಡಿ (Kabaddi) ಆಟಗಾರ್ತಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯ ಎಸಗಿದ ಕಬಡ್ಡಿ ಕೋಚ್‌ವೊಬ್ಬರಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಲಾಗಿದೆ. ಮಹಾರಾಷ್ಟ್ರದ ಅಕೋಲದಲ್ಲಿ ಈ ಘಟನೆ ನಡೆದಿದ್ದು, ಕಾಮುಕ ಕೋಚ್ ಈಗ ಕಂಬಿ ಹಿಂದೆ ಸೇರಿದ್ದಾನೆ. ಮಹಿಳಾ ಆಟಗಾರ್ತಿಯೊಬ್ಬರಿಗೆ ಆಮಿಷವೊಡ್ಡಿ ಲೈಂಗಿಕ ಕಿರುಕುಳ (sexually abusing) ನೀಡಿದ ಆರೋಪದ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಕೋಚ್ ಅವರಿಂದ ಕಬಡ್ಡಿ ಆಟಗಾರ್ತಿ ಗರ್ಭ ಧರಿಸಿದ್ದರು. ಆರೋಪಿತ ಕೋಚ್ ಶುದ್ದೋಧನ್ ಸಹದೇವ್ ಅಂಭೂರೆ (Shuddhodhan Sahdev Ambhore) ವಿರುದ್ದ ಹಲವಾರು ಸಾಕ್ಷಾಧಾರಗಳು ಪತ್ತೆಯಾಗಿವೆ. ಹೀಗಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು ದುಷ್ಕೃತ್ಯ ಎಸಗಿದ ಕೋಚ್ ಶುದ್ದೋಧನ್ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯ ಮೇಲೆ ಈ ಕೋಚ್ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಕಬಡ್ಡಿ ಆಟಗಾರ್ತಿಯ ಮೇಲೆ ದೌರ್ಜನ್ಯ ಎಸಗಿದ್ದು 2018ರ ಜುಲೈ 30ರಂದು ಬೆಳಕಿಗೆ ಬಂದಿತ್ತು.
ತಮ್ಮ ಜತೆ ದೈಹಿಕ ಸಂಪರ್ಕ ಹೊಂದದೇ ಹೋದರೆ, ತಮ್ಮನ್ನು ತಂಡದಿಂದಲೇ ಹೊರಹಾಕುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ಥ ಕಬಡ್ಡಿ ಆಟಗಾರ್ತಿ ದೂರು ದಾಖಲಿಸಿದ್ದರು. ಹೀಗಾಗಿ ಅನಿವಾರ್ಯವಾಗಿ ತಾವು ಕೋಚ್ ಅವರ ಬೆದರಿಕೆಗೆ ಮಣಿಯಬೇಕಾಯಿತು ಎಂದು ಹೇಳಿದ್ದಾರೆ. ಇದಾದ ಬಳಿಕ ಕಬಡ್ಡಿ ಆಟಗಾರ್ತಿಯು ಗರ್ಭವತಿಯಾಗಿದ್ದರು. ನಂತರ ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಯು ಈಕೆ ಅವಿವಾಹಿತೆ ಎನ್ನುವ ಶಂಕೆ ವ್ಯಕ್ತಪಡಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
Nick Kyrgios ಸಿಟ್ಟಲ್ಲಿ ರಾಕೆಟ್ ಎಸೆದ ಕಿರಿಯೊಸ್: ಬಚಾವ್ ಆದ ಬಾಲ್ ಬಾಯ್! ವಿಡಿಯೋ ವೈರಲ್
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಈಕೆಯನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆಗೊಳಪಡಿಸಿದ್ದಾರೆ. ನಂತರ ಆಕೆ ಪೊಲೀಸರೆದುರು ಎಲ್ಲಾ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಸಂತ್ರಸ್ಥ ಯುವತಿ ನೀಡಿದ ದೂರನ್ನು ಆಧರಿಸಿ, ಕಬಡ್ಡಿ ಕೋಚ್ ಶುದ್ದೋಧನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಕೋಚ್ ಅವರನ್ನು ವಿಚಾರಣೆಗೊಳಪಡಿಸಿದಾಗ ತಮ್ಮ ಮೇಲೆ ಕೇಳಿ ಬಂದಿರುವ ಎಲ್ಲಾ ಆರೋಪಗಳು ಶುದ್ದ ಸುಳ್ಳು ಹಾಗೂ ಆಧಾರ ರಹಿತವಾದದ್ದು ಎಂದು ವಾದಿಸಿದ್ದಾರೆ. ಇದರ ಜತೆಗೆ ಜನಿಸಿದ ಮಗು ಕೂಡಾ ತಮ್ಮದಲ್ಲ ಎಂದು ವಾದಿಸಿದ್ದಾರೆ. ಇದಾದ ಪೊಲೀಸರು ಕಟ್ಟಕಡೆಯ ಹಂತ ಎನ್ನುವಂತೆ ಆತನ ಡಿಎನ್‌ಎ ಟೆಸ್ಟ್ ನಡೆಸಿದ್ದಾರೆ. ಆಗ ಆ ಮಗುವು ಕೋಚ್‌ನಿಂದಾಗಿ ಜನಿಸಿದ್ದು ಎನ್ನುವುದು ಖಚಿತವಾಗಿದೆ.
ಈ ಎಲ್ಲಾ ವಿಚಾರಗಳು ಕೋರ್ಟ್‌ನಲ್ಲಿ ಕೂಡಾ ಸಾಬೀತಾದ ಹಿನ್ನೆಲೆಯಲ್ಲಿ ಕೋಚ್ ಶುದ್ದೋಧನ್ ಸಹದೇವ್ ಅಂಭೂರೆ ಅವರಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 3.10 ಲಕ್ಷ ರುಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.