Nick Kyrgios ಸಿಟ್ಟಲ್ಲಿ ರಾಕೆಟ್‌ ಎಸೆದ ಕಿರಿಯೊಸ್‌: ಬಚಾವ್‌ ಆದ ಬಾಲ್‌ ಬಾಯ್‌! ವಿಡಿಯೋ ವೈರಲ್

* ಇಂಡಿಯಾನಾ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮತ್ತೆ ಸುದ್ದಿಯಾದ ನಿಕ್ ಕಿರಿಯೊಸ್‌

* ನಡಾಲ್ ಎದುರು ಸೋಲುತ್ತಿದ್ದಂತೆಯೇ ರಾಕೆಟ್‌ ನೆಲಚ್ಚಿ ಬಿಸಾಡಿದ ಆಸ್ಟ್ರೇಲಿಯಾದ ಟೆನಿಸಿಗ

* ಇಂತಹ ಘಟನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ ರಾಫೆಲ್ ನಡಾಲ್

Indian Wells Angry Nick Kyrgios smashes racket that almost hit ball boy after loss to Rafa Nadal video goes viral kvn

ಕ್ಯಾಲಿಫೋರ್ನಿಯಾ(ಮಾ.19): ವಿವಾದಾತ್ಮಕ ಟೆನಿಸಿಗ, ಆಸ್ಪ್ರೇಲಿಯಾದ ನಿಕ್‌ ಕಿರಿಯೊಸ್‌ (Nick Kyrgios) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಂಡಿಯಾನಾ ವೆಲ್ಸ್‌ ಟೆನಿಸ್‌ ಟೂರ್ನಿಯ (Indian Wells Tennis Tournament) ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 21 ಗ್ರ್ಯಾನ್‌ ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌ (Rafael Nadal) ವಿರುದ್ಧ ಸೋತ ಬಳಿಕ, ಕಿರಿಯೊಸ್‌ ಸಿಟ್ಟಿನಲ್ಲಿ ಅಂಕಣದ ಮೇಲೆ ತಮ್ಮ ರಾಕೆಟ್‌ (racket) ಎಸೆದಿದ್ದಾರೆ. ಅದು ಪುಟಿದೆದ್ದು ಸವೀರ್ಸ್‌ ಲೈನ್‌ ಹಿಂದೆ ಇದ್ದ ಬಾಲ್‌ ಬಾಯ್‌ಗೆ ತಗುಲುವಷ್ಟರಲ್ಲಿ ಆತ ಪಕ್ಕಕ್ಕೆ ಸರಿದ ಕಾರಣ ಯಾವುದೇ ಅನಾಹುತ ಆಗಿಲ್ಲ. 

ಕಿರಿಯೊಸ್‌ ಎಸೆದ ರಬಸದಲ್ಲಿ ರಾಕೆಟ್‌ ಬಾಲ್‌ ಬಾಯ್‌ಗೆ (Ball Boy) ತಗುಲಿದ್ದರೆ, ಆತನಿಗೆ ದೊಡ್ಡ ಪ್ರಮಾಣದಲ್ಲಿ ಏಟಾಗುವ ಸಾಧ್ಯತೆ ಇತ್ತು. ಬಳಿಕ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಬಾಲ್‌ ಬಾಯ್‌ ಬಳಿ ಕ್ಷಮೆ ಕೇಳಿರುವ ಕಿರಿಯೊಸ್‌, ತಾವು ಎಸೆದ ರಾಕೆಟ್‌ ಅನ್ನು ಆತನಿಗೆ ನೆನಪಿನ ಕಾಣಿಕೆಯಾಗಿ ನೀಡುವುದಾಗಿ ತಿಳಿಸಿದ್ದಾರೆ. ನಾನು ಎಸೆದ ರಾಕೆಟ್‌, ನನಗರಿವಿಲ್ಲದಂತೆಯೇ ದೊಡ್ಡ ಪುಟಿತ ಕಂಡಿತು. ಆದರೆ ನನ್ನ ಉದ್ದೇಶ ಆ ರೀತಿಯದ್ದಾಗಿರಲಿಲ್ಲ ಎಂದು ಹೇಳಿದ್ದಾರೆ.ಇಂಡಿಯಾನಾ ವೆಲ್ಸ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಕ್‌ ಕಿರಿಯೊಸ್‌ ಹಾಗೂ ರಾಫೆಲ್ ನಡಾಲ್ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಅಂತಿಮವಾಗಿ ರಾಫೆಲ್ ನಡಾಲ್ 7-6(0), 5-7, 6-4 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿದರು. ಪಂದ್ಯ ಸೋಲುತ್ತಿದ್ದಂತೆಯೇ ಆಸ್ಟ್ರೇಲಿಯಾದ ಆಟಗಾರ ತಾಳ್ಮೆ ಕಳೆದುಕೊಂಡರು.

ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅಸಮಾಧಾನ:

ನಿಕ್‌ ಕಿರಿಯೊಸ್‌ ತೋರಿದ ಈ ಅನುಚಿತ ವರ್ತನೆಯ ಬಗ್ಗೆ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅಸಮಾಧಾನ ಹೊರಹಾಕಿದ್ದಾರೆ. ಟೆನಿಸ್‌ನಲ್ಲಿ ಇಂತಹ ಪ್ರಸಂಗಗಳು ಹೆಚ್ಚುತ್ತಿವೆ. ವೃತ್ತಿಪರ ಟೆನಿಸಿಗರ ಸಂಸ್ಥೆ(ಎಟಿಪಿ) ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು 21 ಗ್ರ್ಯಾನ್‌ಸ್ಲಾಂಗಳ ಒಡೆಯ ರಾಫೆಲ್ ನಡಾಲ್ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಅಂಪೈರ್ ಕುರ್ಚಿಗೆ ರಾಕೆಟ್‌ನಿಂದ ಹೊಡೆದು ಸುದ್ದಿಯಾಗಿದ್ದರು.

ಟೆನಿಸ್‌ ಗ್ರ್ಯಾನ್‌ ಸ್ಲಾಂಗಳಲ್ಲಿನ್ನು ಏಕರೂಪ ಟೈ ಬ್ರೇಕರ್‌ ನಿಯಮ

ಲಂಡನ್‌: ಇನ್ಮುಂದೆ ಎಲ್ಲಾ 4 ಟೆನಿಸ್‌ ಗ್ರ್ಯಾನ್‌ಸ್ಲಾಂಗಳಲ್ಲಿ (Tennis Grandslam) ಏಕರೂಪ ಟೈ ಬ್ರೇಕರ್‌ ನಿಯಮ ಜಾರಿ ಮಾಡಲು ಗ್ರ್ಯಾನ್‌ ಸ್ಲಾಂ (Grandslam) ಮಂಡಳಿ ನಿರ್ಧರಿಸಿದೆ. ಪಂದ್ಯಗಳ ಅಂತಿಮ ಸೆಟ್‌ 6-6 ಗೇಮ್‌ಗಳಲ್ಲಿ ಸಮಗೊಂಡಾಗ 10 ಅಂಕಗಳ ಟೈ ಬ್ರೇಕರ್‌ ಆಡಿಸಿ ಫಲಿತಾಂಶ ಕಂಡುಕೊಳ್ಳಲು ತೀರ್ಮಾನಿಸಲಾಗಿದೆ. ಸದ್ಯ ಒಂದೊಂದು ಗ್ರ್ಯಾನ್‌ ಸ್ಲಾಂಗಳಲ್ಲಿ ಒಂದೊಂದು ರೀತಿಯ ಟೈ ಬ್ರೇಕರ್‌ಗಳಿವೆ. 

ಆಸ್ಪ್ರೇಲಿಯನ್‌ ಓಪನ್‌ನಲ್ಲಿ (Australian Open) ಈಗಾಗಲೇ 10 ಅಂಕಗಳ ಟೈ ಬ್ರೇಕರ್‌ ಜಾರಿಯಲ್ಲಿದೆ. ಫ್ರೆಂಚ್‌ ಓಪನ್‌ನ (French Open) ಅಂತಿಮ ಸೆಟ್‌ನಲ್ಲಿ ಯಾವುದೇ ಟೈ ಬ್ರೇಕರ್‌ ಇಲ್ಲ. ವಿಂಬಲ್ಡನ್‌ನಲ್ಲಿ (Wimbledon) ಕೊನೆ ಸೆಟ್‌ 12-12 ಗೇಮ್‌ಗಳಲ್ಲಿ ಸಮಗೊಂಡರೆ 7 ಅಂಕಗಳ ಟೈ ಬ್ರೇಕರ್‌ ಆಡಿಸಲಾಗುತ್ತದೆ. ಯುಎಸ್‌ ಓಪನ್‌ನಲ್ಲಿ (US Open) ಕೊನೆ ಸೆಟ್‌ 6-6 ಗೇಮ್‌ಗಳಲ್ಲಿ ಸಮಗೊಂಡಾಗ 7 ಅಂಕಗಳ ಟೈ ಬ್ರೇಕರ್‌ ಆಡಿಸಲಾಗುತ್ತದೆ. ಇನ್ಮುಂದೆ ಗ್ರ್ಯಾನ್‌ ಸ್ಲಾಂ ಪಂದ್ಯದ ಅಂತಿಮ ಸೆಟ್‌ 6-6ರಲ್ಲಿ ಸಮಗೊಂಡಾಗ 10 ಅಂಕಗಳ ಟೈ ಬ್ರೇಕರ್‌ ನಡೆಯಲಿದ್ದು, 2 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಮೊದಲು 10 ಅಂಕ ಗಳಿಸುವ ಆಟಗಾರ, ಆಟಗಾರ್ತಿ ಪಂದ್ಯ ಗೆಲ್ಲಲಿದ್ದಾರೆ.

Latest Videos
Follow Us:
Download App:
  • android
  • ios