ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಬೆಂಗಳೂರು: ಮಾರ್ಟಿನಾ ಹಿಂಗಿಸ್, ಅವಳು ಟೆನಿಸ್​ ಲೋಕದ ಮರಿಲಿನ್​ ಮನ್ರೋ. ಸೌಂದರ್ಯದ ಖನಿ. ವಿಶ್ವವಿಖ್ಯಾತ ಸೊಗಸುಗಾತಿ. ಸ್ವಿಟ್ಝರ್​ಲೆಂಡ್​ನ ಟೆನಿಸ್​ ದೇವತೆ.​ ಆಡಲಿಕ್ಕೆಂದೇ ಹುಟ್ಟಿದ್ದವಳು ಹಾಗೆಯೇ, ಆಡಿದ್ದವಳು. ಟೆನಿಸ್​ ಲೋಕವನ್ನೇ 20 ನೇ ಶತಮಾನದಲ್ಲಿ ಬೆರಗು ಮಾಡಿದವಳು. ಒಂದು ವಿಸ್ಮಯದಂತೆ ಸಂಚರಿಸಿದವಳು. 90ರ ದಶಕವನ್ನ ಅವಳಷ್ಟು ಚೆನ್ನಾಗಿ ಆಳಿದ ಇನ್ನೊಬ್ಬ ಆಟಗಾರ್ತಿ ಇಲ್ಲ ಮತ್ತು ಅವಳನ್ನ ಮಾರ್ಟಿನಾ ಹಿಂಗಿಸ್​ ಎಂದು ಕರೆಯುತ್ತಾರೆ.

ಮಾರ್ಟಿನಾ ಹಿಂಗಿಸ್​ ಎಂದರೆ ಅಷ್ಟೇನಾ? ಅಲ್ಲವೇ ಅಲ್ಲ. ಮೊನ್ನೆ ಲಿಯಾಂಡರ್​ ಪೇಸ್​ ಬಗ್ಗೆ ಬರೆಯುವಾಗ, ಹಿಂಗಿಸ್​ ಬಗ್ಗೆಯೂ ಬರೆದಿದ್ದೆ. ಹಿಂಗಿಸ್​ ದೇವತೆಯಂತೆ ಲಿಯಾಂಡರ್​ ಪೇಸ್​ಬಾಳಲ್ಲಿ ಬಂದು ಅವನ ಬದುಕನ್ನ ಸರಿಮಾಡಿದ್ದಳೆಂದು. ಅವಳೂ ಕೂಡ ಜೀವನದಲ್ಲಿ ಅನೇಕ ಏರಿಳಿತ ಕಂಡವಳೆಂದು. ಕೆಲವರು ಇನ್​ಬಾಕ್ಸ್​ ಮಾಡಿದ್ದರು. ಹಿಂಗಿಸ್​ ಬದುಕಲ್ಲಿ ಅಂಥದ್ದೇನಾಯಿತೆಂದು ಕೇಳಿದ್ದರು. ಹೇಳುತ್ತೇನೆ. ಅವಳಂಥ ಅವಳ ಸೌಂದರ್ಯ ಅವಳನ್ನ ಏನು ಮಾಡಿತು. ಅವಳು ಬದಲಾಯಿಸಿದ ಬಾಯ್​ಫ್ರೆಂಡ್​ಗಳು, ಗಂಡನಿಗೆ ಹೋಟೆಲ್ ರೂಮ್ ಒಂದರಲ್ಲಿ ಅವಳು ಎಂಥ ಸರ್​ಪ್ರೈಸ್​ ಕೊಟ್ಟಿದ್ದಳು ಅಂತ.

ಮಾರ್ಟಿನಾ ಹಿಂಗಿಸ್​ನ ಅಪ್ಪ ಅಮ್ಮ ಇಬ್ಬರೂ ಟೆನಿಸ್​ ಪ್ಲೇಯರ್ಸ್​. ಸ್ಲೊವಾಕಿಯಾದವರು. ಇಬ್ಬರಿಗೂ ಹಿಂಗಿಸ್​ನ, ವಿಶ್ವದ ಕಣ್ಣು ಕುಕ್ಕುವಂತ ಟೆನಿಸ್​ ಆಟಗಾರ್ತಿಯನ್ನಾಗಿ ಮಾಡಬೇಕೆಂಬ ಹಂಬಲ. ಹಿಂಗಿಸ್​,  ಗರ್ಭದಲ್ಲಿದ್ದಾಗಲೇ ಅಮ್ಮ , ಅವಳಿಗೆ ಟೆನಿಸ್​ ಪಾಠ ಮಾಡುತ್ತಿರುತ್ತಾರೆ. ಒಂಥರಾ ಹೆಣ್ಣು ಅಭಿಮನ್ಯು. 2 ವರ್ಷದ ಮಗುವಿದ್ದಾಗ ಹಿಂಗಿಸ್​ ಟೆನಿಸ್​ ಆಡುತ್ತಾಳೆ. 4 ವರ್ಷದವಳಿದ್ದಾಗ ಅವಳು ಟೂರ್ನಿಮೆಂಟ್​ಗೆ ಎಂಟ್ರಿ ಕೊಡುತ್ತಾಳೆ. ಇಂಥ ಇನ್ನೊಬ್ಬಳಿದ್ದರೆ ಹೇಳಿ ಬರೆಯುತ್ತೇನೆ. 

ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!

ಹಿಂಗಿಸ್​ 6 ವರ್ಷದ ಮುದ್ದು ಕಂದಮ್ಮನಿದ್ದಾಗ ಅವರಪ್ಪ, ಹೆಂಡತಿಗೆ ಡಿವೋರ್ಸ್​ ಬರೆದುಬಿಡುತ್ತಾನೆ. ಹಿಂಗಿಸ್​ ಅಮ್ಮ ಅವಳನ್ನ ಸೀದಾ ಎಲ್ಲಿಗೆ ಕರೆದುಕೊಂಡು ಬಂದರು ಗೊತ್ತಾ? ಯೂರೋಪಿನ ಆಟದ ಮೈದಾನ, ಭೂಲೋಕದ ಸ್ವರ್ಗ ಸ್ವಿಟ್ಝರ್​ಲೆಂಡ್​ಗೆ! ಅದು 1993. ಹಿಂಗಿಸ್​ಗೆ 12 ವರ್ಷಗಳಷ್ಟೇ. ಫ್ರೆಂಚ್​ ಓಪನ್ ಗ್ರಾಂಡ್​ ಸ್ಲಾಂ ಜೂನಿಯರ್​ ಗೆದ್ದುಬಿಡುತ್ತಾಳೆ. ಆಗಲೇ ವಿಶ್ವ ಬೆಚ್ಚಿರುತ್ತೆ. ಅಂಥ ಆಟ ಅವಳದ್ದು. 1996 ರಲ್ಲಿ ಅವಳಿಗೆ 15 ವರ್ಷ 9 ತಿಂಗಳಿದ್ದಾಗ ವಿಂಬಲ್ಡನ್​ ಮಹಿಳಾ ಡಬಲ್ಸ್​ ಗೆದ್ದು ಬೀಗುತ್ತಾಳೆ. ಅದು ಅವಳ ಚೊಚ್ಚಲ ಗ್ರಾಂಡ್​ ಸ್ಲಾಂ ಕಿರೀಟ.  ಮುಂದೆ 1997ರಲ್ಲಿ  ಅವಳಿಗೆ ಸ್ವೀಟ್​ 16​. ಗೆದ್ದಿದ್ದು ಆಸ್ಟ್ರೇಲಿಯನ್​ ಓಪನ್​ ಮಹಿಳಾ ಸಿಂಗಲ್ಸ್​ ಗ್ರಾಂಡ್​ ಸ್ಲಾಂ. 

ನಿಮಗೆ ಗೊತ್ತಿರಲಿ!  ವಿಶ್ವದಲ್ಲಿ ವರ್ಷಕ್ಕೆ ಅದೆಷ್ಟೋ ಟೆನಿಸ್​ ಟೂರ್ನಿಗಳು ನಡೆಯಬಹುದು. ಆದರೆ ಗ್ರಾಂಡ್​ ಸ್ಲಾಂಗಳು ನಡೆಯುವುದು 4 ಮಾತ್ರ. ವರ್ಷದ ಮೊದಲಿಗೆ ಆಸ್ಟ್ರೇಲಿಯನ್ ಓಪನ್​, ಆಮೇಲೆ ಕೆಂಪು ಮಣ್ಣನ್ನ ಸುತ್ತುವರೆದ ಹೂವಿನ ಅಂಕಣ ರೊಲ್ಯಾಂಡ್​ ಗ್ಯಾರೋಸ್​ನಲ್ಲಿ ಫ್ರೆಂಚ್​ ಓಪನ್​, ಮುಂಗಾರು ಮಳೆಯ ಸಿಂಚನದಲ್ಲಿ ವಿಂಬಲ್ಡನ್​ ಹಾಗೂ ವರ್ಷದ ಕೊನೆಗೆ ಯುಎಸ್​ ಓಪನ್​. ಇಂಥ ಗ್ರಾಂಡ್​ ಸ್ಲಾಂಗಳನ್ನ ಅವಳು ಒಟ್ಟು 25 ಗೆದ್ದಿದ್ದಾಳೆ. ಪ್ರಪಂಚ ಗೆದ್ದವಳು. ಸೌಂದರ್ಯದಲ್ಲೂ!

ಮಾರ್ಟಿನಾ ಹಿಂಗಿಸ್​ ಆಟದ್ದು ಒಂದು ಸೊಗಸಾದರೆ, ಅವಳದ್ದು ಇಡಿಯಾಗಿ ಆವರಿಸಿಕೊಂಡುಬಿಡುವ ಸೌಂದರ್ಯ. ತುಸು ನೀಲಿ ಮಿಶ್ರಿತ ಕಣ್ಣು, ತುಂಬು ತುಟಿಗಳ ಅವಳ ನಗು, ಚಂದದ ಒಂದು ಬಾಯ್ಕಟ್​ ಹೇರ್​ ಸ್ಟೈಲ್​, ಅದರ ಮೇಲೊಂದು ಹೇರ್​ ಬ್ಯಾಂಡ್​, ಮಿನಿ ಸ್ಕರ್ಟ್​ ಧರಿಸಿ, ಅಂಗಳದ ಆ ಕಡೆಯಿಂದ ಈ ಕಡೆಗೆ ಮಿಂಚಂತ ಸಂಚಾರ. ಎಲ್ಲಕ್ಕೂ ಕಳಶವಿಟ್ಟಂತೆ ಗೆಲುವಿನ ಕಿರೀಟದ ಜಿಗಿತ. ಸಾಕಲ್ಲ. ಆರಾಧನೆಗೆ! ಟೆನಿಸ್​ ಲೋಕ ಹಾಗೇನೆ. ಆಟದ ಜೊತೆಗೆ ಸೌಂದರ್ಯ ಸೇರಿಕೊಂಡುಬಿಟ್ಟರೆ, ಆರಾಧಿಸಿಬಿಡುತ್ತದೆ. ಆ ಕಾಲದ ಏರುಜವ್ವನದ ಚೆಲುವೆ ಮಾರ್ಟಿನಾ ಹಿಂಗಿಸ್​ ಆಡುತ್ತಿದ್ದರೆ ಅದರ ಲಹರಿಯೇ ಬೇರೆ. ಸುಮ್ಮನೆ ಅಭಿಮಾನಿಗಳಾಗಿಬಿಡುತ್ತಿದ್ದರು. ನಂಬಿ, ಆ ಕಾಲದಲ್ಲಿ ಮಾರ್ಟಿನಾ ಹಿಂಗಿಸ್​ ಫೋಟೋ ಮನೆಯ ರೂಮ್​ನಲ್ಲಿ, ಬುಕ್​ನ ಮಧ್ಯೆ, ಹಾಸ್ಟೆಲ್​ಗಳಲ್ಲಿ ಅಂಟಿಸಿರಲಿಲ್ಲವೆಂದರೆ, ಅಷ್ಟೂ ಹುಡುಗರ ಯೌವ್ವನದ ಮೇಲಾಣೆ...

ಸ್ಟೆಫೀ ಗ್ರಾಫ್​ನ ಸಮರ್ಥ ಉತ್ತರಾಧಿಕಾರಿಯೆಂಬಂತೆ, ಕಿರೀಟ ಧರಿಸದೇ ಮೆರೆಯುತ್ತಿದ್ದ ರಾಣಿಯವಳು. ಹಿಂಗಿಸ್​!  ಇಂಥವಳು ಭರ್ಜರಿ 209 ವಾರಗಳ ಕಾಲ ವಿಶ್ವದ ಟೆನಿಸ್ ಲೋಕವನ್ನ ಆಳಿಬಿಟ್ಟಳು. ಒಂದು ಕಡೆ ಫೋರ್ಬ್ಸ್​ ಬರೆಯುತ್ತೆ 1997 ರಿಂದ 2001 ರ ವರೆಗೆ ಅವಳಷ್ಟು ಹಣ ಗಳಿಸಿದ ವಿಶ್ವದ ಇನ್ನೊಬ್ಬ ಆಟಗಾರ್ತಿ ಇಲ್ಲ ಅಂತ. ಹಣ ಅವಳೆದುರಿಗೆ ಕಾಲು ಮುರಿದುಕೊಂಡು ಬಿದ್ದಿರುತ್ತೆ. ಅವಳೆಂದರೆ ಅಷ್ಟೇನಾ? ಅಲ್ಲ. ಅವಳಿಗೆ 100 ಗ್ರಾಂಡ್​​ ಸ್ಲಾಂ ಗೆಲ್ಲುವ ತಾಕತ್ತಿತ್ತು. ಗೆಲ್ಲಲಿಲ್ಲ. ಯಾಕೆ ಗೊತ್ತಾ? ವೈಯಕ್ತಿಕ ಮತ್ತು ವೈವಾಹಿಕ ಬದುಕನ್ನ ಹಾಗೆ ನಡೆಸಿಕೊಂಡುಬಿಟ್ಟಳು ಹಿಂಗಿಸ್​. ಮನಬಂದಂತೆ. 2002 ರಲ್ಲಿ ಅವಳನ್ನ ಇನ್ನಿಲ್ಲದಂತೆ ಹಿಮ್ಮಡಿ ನೋವು ಕಾಡಿಬಿಡುತ್ತದೆ. ಟೆನಿಸ್​ ಸಾಕು ಎಂದು ಮನೆ ಕಡೆ ನಡೆದುಬಿಡುತ್ತಾಳೆ. ಅವಳಿಗಾಗ 22 ವರ್ಷ. ಮಿನಿಮನ್​ 15 ವರ್ಷಗಳ ಕಾಲದ ಆಟ ಅವಳಲ್ಲಿ ಬಾಕಿ ಇತ್ತು.

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಟೆನಿಸ್​ ಬಿಟ್ಟಿರಲಾದರ ಪ್ರೀತಿಗೆ ಒಂದು ವರ್ಷದ ತಯಾರಿ ನಂತರ ಮತ್ತೆ 2006ಕ್ಕೆ ಅವಳು ವಾಪಸ್ಸಾಗುತ್ತಾಳೆ. ಆಸ್ಟ್ರೇಲಿಯನ್​ ಓಪನ್​ ಕ್ವಾರ್ಟರ್​ ಫೈನಲ್​ ಸೆಣಸಿನಲ್ಲಿ ಕಿಂ ಕ್ಲೈಜೆಸ್ಟರ್​ ವಿರುದ್ಧದ ಸಮಾ ಸಮ ಕದನದಲ್ಲಿ ಸೋತು ಹೋಗುತ್ತಾಳೆ. ಆಗ ಅವಳಿಗೆ ಜೊತೆಯಾದವನು ಭಾರತದ ಮಹೇಶ್​ ಭೂಪತಿ. ಸೋತ ನೋವನ್ನ ಮಿಕ್ಸೆಡ್​ ಡಬಲ್ಸ್​ ಟ್ರೋಫಿ ಗೆಲುವಿನಲ್ಲಿ ಮರೆಯುತ್ತಾಳೆ. 2007 ರ ಹಿಂಗಿಸ್​ ಪಾಲಿಗೆ ಕರಾಳ ವರ್ಷವೆಂದೇ ದಾಖಲಾಗುತ್ತದೆ. ವಿಂಬಲ್ಡನ್​ ಆಡುವ ವೇಳೆ ಒಂದು ಅಸಾಧ್ಯ ಪೃಷ್ಠದ ನೋವಿಗೆ ಅವಳು ಕಂಗಾಲಾಗಿಬಿಡುತ್ತಾಳೆ. ಜೊತೆಗೆ ಕೊಕೇನ್​ ಸೇವನೆ ಮಾಡಿದ್ದಕ್ಕಾಗಿ ಸಿಕ್ಕುಬಿದ್ದು 2 ವರ್ಷಗಳ ಕಾಲ ಟೆನಿಸ್​ ನಿಂದ ನಿಷೇಧಕ್ಕೆ ಒಳಗಾಗಿಬಿಡುತ್ತಾಳೆ. ಇವಳೇನಾ ನಾವು ಆರಾಧಿಸಿದ್ದ ಮಾರ್ಟಿನಾ ಹಿಂಗಿಸ್​ ಎಂದು ವಿಶ್ವ ಬೆಚ್ಚಿರುತ್ತೆ. ಅಲ್ಲಿಂದ ಹಿಂಗಿಸ್​ ಹಾದಿ ತಪ್ಪಿದ ಹುಡುಗಿಯಾದಳಾ? ಗೊತ್ತಿಲ್ಲ.

ಟೆನಿಸ್​ ಬಿಟ್ಟು 2009 ರಲ್ಲಿ  ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದ ಡಾನ್ಸ್​ ಕಾಂಪಿಟೇಷನ್​ಗೆ ಮಾರ್ಟಿನಾ ಎಂಟ್ರಿ ಕೊಟ್ಟುಬಿಡುತ್ತಾಳೆ. ಟೆನಿಸ್​ ಎಲ್ಲಿ ಡಾನ್ಸ್​ ಎಲ್ಲಿ. ಡಾನ್ಸ್​ ಕಾಂಪಿಟೇಷನ್​ ಹೆಸರೇನು ಗೊತ್ತಾ? ಸ್ಟ್ರಿಕ್ಟ್​ಲೀ ಕಮ್​ ಡಾನ್ಸಿಂಗ್​ ಅಂತ. ಮೊದಲ ಸುತ್ತಿನಲ್ಲೇ ಸೋತು ಸಪ್ಪೆ ಮೋರೆ ಹಾಕಿಕೊಂಡು ಆಚೆ ಬರುತ್ತಾಳೆ. ಅದು ಅವಳದ್ದಲ್ಲದ ಆಟ.  ಅದೇಕೋ ಗೊತ್ತಿಲ್ಲ ಮಾರ್ಟಿನಾ ತುಂಬ ಸುತ್ತಾಡೋದಕ್ಕೆ ಶುರು ಮಾಡಿರುತ್ತಾಳೆ. ಹಾಗೆ ಸುತ್ತಾಡಬೇಕಾದರೆ ಅವನು ಕಣ್ಣಿಗೆ ಬಿದ್ದಿದ್ದ, ಚೆಲುವಾಂತ ಚೆನ್ನಿಗ. ಅವನ ಹೆಸರು ಥಿಬಾಲ್ಟ್​ ಹಟಿನ್.  ಅದು 2010ರ ಏಪ್ರಿಲ್​. ಸೇಂಟ್​ ಟ್ರೊಪೆಝ್​. ಅವನು ಕುದುರೆ ಎಗರಿಸುವ ಜಾಕಿ. ಕೆನೆಯುವ ಕುದುರೆಯ ಹಾರಿಸಿ ಹಾರಿಸಿಯೇ ಅವಳನ್ನ ಗೆದ್ದು ಬಿಟ್ಟಿರುತ್ತಾನೆ. ಅವನ ಕುದುರೆ ಸವಾರಿ ಕಲೆಗೆ, ಹಾಕಿದ್ದ ಧಿರಿಸಲ್ಲಿ ಅವನಲ್ಲಿ ಗ್ರೀಕ್​ ವೀರನನ್ನೇ ಕಂಡುಬಿಟ್ಟಿರುತ್ತಾಳೆ ಹಿಂಗಿಸ್​. ಆ ಕ್ಷಣಕ್ಕೆ ಅವನೇ ನನ್ನವನು ಎಂದು ನಿರ್ಧರಿಸಿರುತ್ತಾಳೆ ​. ಮುಂದಿನ 8 ತಿಂಗಳು ಸುತ್ತಾಡಿದ ಬಳಿಕ ಮುದುವೆಯೂ ಆಗುತ್ತಾರೆ, ಥಿಬಾಲ್ಟ್​ ಹಟಿನ್ ಮತ್ತು ಮಾರ್ಟಿನಾ ಹಿಂಗಿಸ್​..ಆಗ ಅವನಿಗೆ 24, ಅವಳಿಗೆ 30. ಥಿಬಾಲ್ಟ್​ ಹಟಿನ್​ ಪಾಪದ ಹುಡುಗನಾಗಿದ್ದನಾ? ಗೊತ್ತಿಲ್ಲ.

ಥಿಬಾಲ್ಟ್​, ದೇವತೆ ಸಿಕ್ಕ ಖುಷಿಯಲ್ಲಿರುತ್ತಾನೆ. ಮಾರ್ಟಿನಾ ಎಂಥ ಅಚ್ಚರಿ ಕೊಟ್ಟಿರುತ್ತಾಳೆ ಗೊತ್ತಾ? ಅವಳು 2011 ರಲ್ಲಿ ನ್ಯೂಯಾರ್ಕ್​ಗೆ ಹೋಗಿರುತ್ತಾಳೆ. ಥಿಬಾಲ್ಟ್​ , ಪ್ರೀತಿಯ ಮಡದಿಗೆ ಸರ್ಪೈಸ್​ ಕೊಡಲಿಕ್ಕೆ ನ್ಯೂಯಾರ್ಕ್​ ಹೋಟೆಲ್​ ರೂಮ್​ನ ಕದ ಬಡಿಯುತ್ತಾನೆ. ಸರ್ಪೈಸ್​ ಕೊಟ್ಟಿದ್ದು ಅವನಲ್ಲ. ಅವಳು. ಹಿಂಗಿಸ್​ ಬಾಗಿಲು ತೆರೆದಿರುತ್ತಾಳೆ. ಒಳಗೆ ಬೇರೊಬ್ಬ ಗಂಡಸಿದ್ದ ಅಷ್ಟೇ! ಅವನ ಹೆಸರನ್ನ ಇಂದಿಗೂ ಥಿಬಾಲ್ಟ್​ ಹೇಳಿಲ್ಲ. ಗಂಡನಂತ ಗಂಡ ಥಿಬಾಲ್ಟ್​ ಹಿಂಗಿಸ್​ನ ಕ್ಷಮಿಸಿರುತ್ತಾನೆ. 

ಮತ್ತೆ ಅವನಿಗೆ ಇನ್ನೊಂದು ಆಘಾತ ಯಾವಾಗ ಗೊತ್ತಾ? 2012ರ ಫ್ರೆಂಚ್​ ಓಪನ್​ ಮತ್ತು ವಿಂಬಲ್ಡನ್​ ಟೂರ್ನಿಯ ಟೈಮ್​ನಲ್ಲಿ. ಅವನ ಹೆಸರು ಡೇವಿಡ್​ ಟೊಸಾಸ್ ರೋಸ್. ಅವನ ತೋಳತೆಕ್ಕೆಯಲ್ಲಿ ಹಿಂಗಿಸ್​ ಕುಳಿತು ಮ್ಯಾಚ್​ ನೋಡುತ್ತಿರುತ್ತಾಳೆ. ಅವನು ಸ್ಪೇನ್​ನವನು. ಸ್ಪಾನಿಷ್​ ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ ಎಕ್ಸಿಕ್ಯುಟಿವ್​ ಆಗಿದ್ದವನು. ಥಿಬಾಲ್ಟ್​ಗೆ ಮನಸೇ ಮುರಿದುಹೋಗಿರುತ್ತೆ. ಗಂಡನೊಂದಿಗೆ ಒಂದು ಸಂಬಂಧವನ್ನ ಮುರಿದುಕೊಳ್ಳದೇ ಮತ್ತೊಬ್ಬನೊಂದಿಗೆ ಫ್ರಾನ್ಸ್​ನ ಬೀದಿಗಳಲ್ಲಿ ಹಾಗೆ ಅಡ್ಡಾಡಿರುತ್ತಾಳೆ. ಗಂಡನಿಗೆ ವಿಷಯ ಗೊತ್ತಾಗುತ್ತಿದ್ದಂತೆ ಏನೆಂದಿರುತ್ತಾಳೆ ಗೊತ್ತಾ? ಒಂದು ಸೋಮವಾರ ಬೆಳಿಗ್ಗೆ ಎದ್ದವಳೇ, ನೇರ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿರುತ್ತಾಳೆ ಹಿಂಗಿಸ್​. ಪತ್ರಿಕೆ ಹೆಸರು Schweizer Illustrierten. ಈ ವರ್ಷದ ಆರಂಭದಲ್ಲಿಯೇ ನನ್ನ ಮತ್ತು ಹಟಿನ್​ ಸಂಬಂಧ ಮುರಿದುಬಿದ್ದಿದೆ ಎನ್ನುತ್ತಾಳೆ. ಮುಂದೆ ಒಂದೇ ಒಂದು ಶಬ್ಧವಿಲ್ಲ. 

ಹಟಿನ್​ಗೆ ಪತ್ರಿಕೆ ನೋಡಿ ವಿಷಯ ಗೊತ್ತಾಗುತ್ತೆ. ನನ್ನ ಅವಳ ಸಂಬಂಧ ಮುಗಿದ ಅಧ್ಯಾಯ ಅಂತ. ಅವಳದ್ದು ಮದುವೆಯಲ್ಲದ ಮದುವೆ, ವಿಚ್ಛೇದನವಲ್ಲದ ವಿಚ್ಛೇದನ. ಹಟಿನ್ ಬಡವ, ಕುದುರೆ ಓಡಿಸುತ್ತಿದ್ದ ಜಾಕಿ. ಹಿಂಗಿಸ್​ ಗುಂಗಿನಲ್ಲಿ ಅದ್ಯಾವ ಪರಿ ನಲುಗಿಹೋಗಿದ್ದನೆಂದರೆ, ಅವನಿಗೆ ರೂಮ್​ನ ಬಾಡಿಗೆ ಕಟ್ಟೋಕು ದುಡ್ಡಿರುವುದಿಲ್ಲ. ಅವನ ಸಂಬಂಧಿಕರು ಕೈಹಿಡಿಯದಿದ್ದರೆ ಬೀದಿಯಲ್ಲಿ ಮಲಗಬೇಕಾಗುತ್ತಿತ್ತು. ಹಾಗಂತ ಅವನು Sonntagsblick ಎನ್ನುವ ಪತ್ರಿಕೆಗೆ ಹೇಳಿಕೊಳ್ಳುತ್ತಾನೆ.

ಹಿಂಗಿಸ್​ಗೆ ಹುಡುಗರನ್ನ ಟೆನಿಸ್​ ಚೆಂಡಿಗಿಂತ ವೇಗವಾಗಿ ಬದಲಾಯಿಸುವ ಮಾನಸಿಕ ಖಾಯಿಲೆ ಇತ್ತಾ? ಅವಳಿಗೆ ಅದೊಂದು ಚಟವಾ? ವಿಲಕ್ಷಣ ಆಸೆಗಳ ಗೊತ್ತಿಲ್ಲ. ಅಷ್ಟು ಹೊತ್ತಿಗಾಗಲೇ ಮ್ಯಾಗ್ನಸ್​ ನಾರ್ಮನ್​, ಇವೋ ಹೆನ್​ಬರ್ಗರ್​ ಮತ್ತು ಜೂಲಿಯನ್​ ಅಲೋನ್ಸೋ ನೊಂದಿಗೆ ಓಡಾಡಿರುತ್ತಾಳೆ. ಹಟಿನ್​, ಅವಳೊಬ್ಬ ಸೀರಿಯಲ್​ ವ್ಯಭಿಚಾರಿಣಿ ಎಂದು ಬಿಡುತ್ತಾನೆ. ಅಷ್ಟು ರೋಸಿ ಹೋಗಿರುತ್ತಾನೆ. ಹೀಗೆ ಹುಡುರನ್ನ ಬದಲಾಯಿಸುತ್ತಿದ್ದ ಹಿಂಗಿಸ್​ ಮತ್ತೆ ಟೆನಿಸ್​ ರಾಕೆಟ್​ ಹಿಡಿಯುತ್ತಾಳೆ. ಅದು 2013 ರಲ್ಲಿ. 

ಅದೆ ಕಾಲದಲ್ಲಿ ಬದುಕಿನ ಏರಿಳಿತಗಳಲ್ಲಿ ಬತ್ತಿಯೇ ಹೋಗಿದ್ದ ಭಾರತದ ಲಿಯಾಂಡರ್ ಜೊತೆಯಾಗುತ್ತಾನೆ.  ವೈಯಕ್ತಿಕ ಜೀವನ, ಪೇಸ್ ಗೆ ಒಂದು ತರಹ ದಿಕ್ಕು ತಪ್ಪಿಸಿರುತ್ತೆ. ಹಿಂಗಿಸ್, ಬದುಕನ್ನೇ ಕನ್ಫ್ಯೂಸ್ ಮಾಡಿದ ಹುಡುಗಿ. ಜೊತೆಯಾಗುತ್ತಾಳೆ. ಸಾಂತ್ವನದಂತೆ. ಪೇಸ್ ಮತ್ತು ಹಿಂಗಿಸ್ ಅದೆಂಥಾ ಮೋಡಿ ಮಾಡಿಬಿಡುತ್ತಾರೆ ಗೊತ್ತಾ? ವಯಸ್ಸಲ್ಲದ ವಯಸ್ಸಲ್ಲಿ ಟೆನಿಸ್ ಅಂಗಳಲ್ಲಿ ಬಿರುಗಾಳಿಯೆಬ್ಬಿಸಿಬಿಡುತ್ತಾರೆ.16 ತಿಂಗಳಲ್ಲಿ ಗೆದ್ದಿದ್ದು ಎಲ್ಲ ನಾಲ್ಕು ಗ್ರಾಂಡ್ ಸ್ಲಾಂಗಳು. 2015ರಿಂದ 2017ರ ವೇಳೆಯಲ್ಲಿ ಬೆಂಕಿಯಂತ ಆಟವಾಡಿದ ಹಿಂಗಿಸ್​ 4 ಮಹಿಳಾ ಡಬಲ್ಸ್​ ಮತ್ತು 6 ಮಿಶ್ರ ಡಬಲ್ಸ್​ ಗ್ರಾಂಡ್​ ಸ್ಲಾಂ ಗೆಲ್ಲುತ್ತಾಳೆ. ಹಳೇ ಸಿಂಹಿಣಿ!

 ಆಗ ಮತ್ತೊಬ್ಬ ಜೊತೆಯಾಗಿದ್ದ  ಹೆರಾಲ್ಡ್​ ಲೀಮನ್​! ಸ್ಪೋರ್ಟ್ಸ್​ ಫಿಸಿಷಿಯನ್​. ಇವನು 2016ರ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಹಿಂಗಿಸ್​ಗೆ ಪರ್ಸನಲ್​ ಸೂಪರ್​ವೈಸರ್​ ಆಗಿರುತ್ತಾನೆ. ಅದ್ಯಾವ ಘಳಿಗೆಯಲ್ಲೋ ಅವನನ್ನ ತನ್ನ ಮೋಹಪಾಶದಲ್ಲಿ ಕೆಡವಿಹಾಕಿರುತ್ತಾಳೆ. ಮಾರ್ಟಿನಾ ಹಿಂಗಿಸ್​! ನೀಲಿ ಕಂಗಳ ರೂಪಸಿ. ಅದು 2018 ಜುಲೈ. ಸ್ವಿಟ್ಜರ್​ಲೆಂಡ್​ನಲ್ಲಿ ಒಂದು ಅತ್ಯದ್ಭುತ ಶುಕ್ರವಾರ ಮಾರ್ಟಿನಾ, ಅವನನ್ನ ಬಿಡದೆ ವರಿಸುತ್ತಾಳೆ. ಆನಂತರ ಟೆನಿಸ್​ಗೂ ವಿದಾಯ ಹೇಳಿದ್ದಾಳೆ. ಇದು ವಯೋಸಹಜ ವಿದಾಯವೂ ಆಗಿರಲಿಕ್ಕೆ ಸಾಕು.

ಉಳಿಯುವ ಪ್ರಶ್ನೆಗಳು ಸಾವಿರ. ಅವಳ ಟೆನಿಸ್​ ಜೀವನ ಇನ್ನೂ ಸೊಗಸಾಗಿರಬೇಕಿತ್ತಲ್ಲವೇ? ಸೊಗಸಾಗಿದ್ದಿದ್ದು ಸಾಲದೇ? ವೈಯಕ್ತಿಕ ಜೀವನ ಅವಳಿಗಷ್ಟೇ ಚಂದ ಇದ್ದರೆ ಸಾಕೇ? ಹುಡುಗರನ್ನ ಅವಳು ಬದಲಾಯಿಸಿದ್ದು ತೃಷೆಗಾ? ವಾಂಛೆಗಾ? ಟೆನಿಸ್​ ಅಂಗಳದ ಸೋಲನ್ನ ಮರೆಯಲೆಂದೇ ಹೀಗೆ ಮಾಡುತ್ತಿದ್ದಳಾ? ಅಥವಾ ಅವಳನ್ನ ಇನ್ನಿಲ್ಲದ ವಿಚಿತ್ರ, ವಿಲಕ್ಷಣ ಖಿನ್ನತೆ ಕಾಡಿತ್ತಾ? ಅಥವಾ ಯಶಸ್ಸು ನಿಭಾಯಿಸಲಾರದ ಅವಳ ಹುಚ್ಚು ಯೌವ್ವನವಾ? 
ನಿಮಗೆ ಬಿಡುತ್ತೇನೆ...