ಕುಸ್ತಿಪಟು ವಿನೇಶ್ ಫೋಗಾಟ್ ಶೀಘ್ರ ನಿವೃತ್ತಿ ಘೋಷಣೆ?
* ನಿವೃತ್ತಿಯ ಸುಳಿವು ನೀಡಿದ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಫೋಗಾಟ್
* ಒಲಿಂಪಿಕ್ಸ್‌ನಲ್ಲಿ ಪೋಗಾಟ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು
ನವದೆಹಲಿ(ಆ.14): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿ ಬಳಿಕ ಅಶಿಸ್ತಿನ ಕಾರಣಕ್ಕೆ ಅಮಾನತುಗೊಂಡಿರುವ ತಾರಾ ಕುಸ್ತಿ ಪಟು ವಿನೇಶ್ ಫೋಗಾಟ್ ಕುಸ್ತಿಗೆ ಗುಡ್‌ಬೈ ಹೇಳುವ ಸುಳಿವು ನೀಡಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಲೇಖನ ಬರೆದಿರುವ ಪೋಗಾಟ್, ‘ಒಂದು ಪದಕ ಕಳೆದುಕೊಂಡರೆ ಭಾರತದಲ್ಲಿ ನೀವು ಏರಿದಷ್ಟೇ ವೇಗವಾಗಿ ಕೆಳಕ್ಕೆ ಬೀಳುತ್ತೀರಿ ಎಂದು ನನಗೆ ಗೊತ್ತಿತ್ತು. ಈಗ ಎಲ್ಲವೂ ಮುಗಿದಿದೆ. ನಾನು ಯಾವಾಗ ಕುಸ್ತಿಗೆ ಮರಳುತ್ತೇನೆಂದು ಗೊತ್ತಿಲ್ಲ. ಬಹುಶಃ ನಾನು ವಾಪಸಾಗದೆಯೂ ಇರುಬಹುದು. 2016ರ ಒಲಿಂಪಿಕ್ಸ್‌ನಲ್ಲಿ ಕಾಲು ಮುರಿದುಕೊಂಡಿದ್ದೆ. ಅದರಿಂದ ನಾನು ಚೇತರಿಸಿಕೊಂಡೆ. ಆದರೆ ಈಗ ನನ್ನ ದೇಹ ಸರಿ ಇದ್ದರೂ, ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ’ ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ವಿನೇಶ್ ಪೋಗತ್ ಅಮಾನತು!
ಒಲಿಂಪಿಕ್ಸ್‌ನಲ್ಲಿ ಪೋಗಾಟ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಬಳಿಕ ಅಶಿಸ್ತಿನ ಆರೋಪದ ಮೇಲೆ ಪೋಗಾಟ್‌ರನ್ನು ಭಾರತೀಯ ಕುಸ್ತಿ ಫೆಡರೇಶನ್ ಅಮಾನತು ಮಾಡಿತ್ತು. ಟೋಕಿಯೋ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್‌ರನ್ನು ಭಾರತೀಯ ಕುಸ್ತಿ ಫೆಡರೇಷನ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಕೊರೋನಾ ಸೋಂಕು ತಗುಲಬಹುದು ಎನ್ನುವ ನೆಪ ಹೇಳಿ ವಿನೇಶ್, ಭಾರತೀಯ ಕ್ರೀಡಾಪಟುಗಳ ಜೊತೆ ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಭಾರತೀಯ ಕ್ರೀಡಾಪಟುಗಳೊಂದಿಗೆ ಅಭ್ಯಾಸ ನಡೆಸಲು ಹಿಂದೇಟು ಹಾಕಿದ್ದರು. ವಿನೇಶ್, ಹಂಗೇರಿಯಿಂದ ಟೋಕಿಯೋಗೆ ಆಗಮಿಸಿದ್ದರು. ಉಳಿದ ಕುಸ್ತಿಪಟುಗಳು ಭಾರತದಿಂದ ತೆರಳಿದ್ದರು.