ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್ ಪ್ರವೇಶಿಸಿದ ಮೇರಿ ಕೋಮ್
* ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಮೇರಿ ಕೋಮ್
* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6 ಬಾರಿ ಚಾಂಪಿಯನ್ ಆಗಿರುವ ಮೇರಿ ಕೋಮ್
* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾರ್ವಕಾಲಿಕ ಸಾಧನೆ ಮಾಡಿರುವ ಭಾರತದ ಬಾಕ್ಸರ್‌ಗಳು
ದುಬೈ(ಮೇ.28): 6 ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಬಲಿಷ್ಠ ಎದುರಾಳಿ ಲುಟ್ಸಾಯಿಖಾನ್ ಅಲ್ಟಾಂಟ್‌ಟ್ಸೆಗ್ ವಿರುದ್ದ 4-1 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಚಾಂಪಿಯನ್ ಪಟ್ಟಕ್ಕಾಗಿ ಮೇರಿ ಕೋಮ್, ಕಜಕಿಸ್ತಾನದ ನಜ್ಯಾಮ್ ಖೈಜೈಬೇ ವಿರುದ್ದ ಹೋರಾಟ ನಡೆಸಲಿದ್ದಾರೆ. ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ತಯಾರಿಸುವಾಗಲೇ ಮೇರಿ ನೇರವಾಗಿ ಸೆಮೀಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರು.
ಮೊದಲ ಸುತ್ತಿನಲ್ಲಿ ಮಂಗೋಲಿಯಾದ ಬಾಕ್ಸರ್‌ನಿಂದ ಮೇರಿ ಕೋಮ್‌ಗೆ ಪ್ರಬಲ ಪೈಪೋಟಿ ಎದುರಾಯಿತು. ಆದರೆ ಎರಡನೇ ಹಾಗೂ ಮೂರನೇ ಸುತ್ತಿನಲ್ಲಿ ಮೇರಿ ಕೋಮ್ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಪರಿಣಾಮ ಮಂಗೋಲಿಯಾದ ಆಟಗಾರ್ತಿ ನೆಲಕಚ್ಚುವಂತಾಯಿತು.
ಏಷ್ಯನ್ ಬಾಕ್ಸಿಂಗ್‌ನಲ್ಲಿ ಭಾರತ ಸಾರ್ವಕಾಲಿಕ ಸಾಧನೆ
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ 10 ಮಹಿಳಾ ಬಾಕ್ಸರ್‌ಗಳ ಪೈಕಿ 7 ಬಾಕ್ಸರ್‌ಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಭಾರತದ 15 ಬಾಕ್ಸರ್‌ಗಳು(ಮಹಿಳಾ& ಪುರುಷರ ವಿಭಾಗದಲ್ಲಿ) ಪದಕವನ್ನು ಖಚಿತಪಡಿಸಿಕೊಳ್ಳುವ ಮೂಲಕ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾರ್ವಕಾಲಿಕ ಸಾಧನೆ ಮಾಡಿದ್ದಾರೆ.