ಇಂದಿನಿಂದ ಬೆಂಗಳೂರು ಓಪನ್ ಆರಂಭ
ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಇಂದಿನಿಂದ(ಫೆ.10) ಆರಂಭವಾಗಿದೆ. ಭಾರತದಲ್ಲಿ ಕೊನೆಯ ಟೂರ್ನಿ ಆಡುತ್ತಿರುವ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈ ಕೂಟದ ಪ್ರಮುಖ ಆಕರ್ಷಣೆ ಆಗಿದ್ದಾರೆ. ಈ ಕರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಫೆ.10): 3ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಸೋಮವಾರದಿಂದ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ)ಯಲ್ಲಿ 7 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.
ಟೆನಿಸ್ ದಿಗ್ಗಜ ಭಾರತದ ಲಿಯಾಂಡರ್ ಪೇಸ್ ಕೂಡ ಕಣದಲ್ಲಿರುವುದು ವಿಶೇಷವಾಗಿದೆ. ಪೇಸ್ ತವರಿನಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ. ಪ್ರಮುಖ ಸುತ್ತಿಗೆ ಭಾರತದ 6 ಟೆನಿಸಿಗರಿಗೆ ನೇರ ಪ್ರವೇಶ ನೀಡಲಾಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 200ರೊಳಗಿರುವ 21 ಆಟಗಾರರು ಸೇರಿದಂತೆ 40 ಟೆನಿಸಿಗರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಓಪನ್ ಆಡಲಿದ್ದಾರೆ ಲಿಯಾಂಡರ್ ಪೇಸ್
ಭಾರತದ ಅಗ್ರ ಟೆನಿಸಿಗರು ಕಣಕ್ಕೆ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್, ಹಾಲಿ ಚಾಂಪಿಯನ್ ಪ್ರಜ್ನೇಶ್ ಗುಣೇಶ್ವರನ್, 2017ರ ಚಾಂಪಿಯನ್ ಸುಮಿತ್ ನಗಾಲ್, ಸಸಿಕುಮಾರ್ ಮುಕುಂದ್, ಅರ್ಜುನ್ ಖಾಡೆ, ಸಾಕೇತ್ ಮೈನೇನಿ, ನಿಕಿ ಪೂಣಚ್ಚ, ಆದಿಲ್ ಕಲ್ಯಾಣ್‌ಪುರ್, ಕರ್ನಾಟಕದ ಸೂರಜ್ ಪ್ರಬೋದ್, ಪ್ರಜ್ವಲ್ ದೇವ್, ಸಿದ್ಧಾರ್ಥ್ ರಾವತ್ ಕಣಕ್ಕಿಳಿಯಲಿರುವ ಭಾರತದ ಪ್ರಮುಖರು. ಪ್ರಜ್ನೇಶ್ ಹಾಗೂ ಸುಮಿತ್ ನಗಾಲ್ ಮೊದಲ ಸುತ್ತಲ್ಲಿ ಬೈ ಪಡೆದಿದ್ದಾರೆ.
ಉಚಿತ ಪ್ರವೇಶ:
ವಾರದ 5 ದಿನ ಟೆನಿಸ್ ಪಂದ್ಯಗಳ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಪಂದ್ಯ ವೀಕ್ಷಣೆಗಾಗಿ ಪ್ರೇಕ್ಷಕರು ಟಿಕೆಟ್‌ಗಳನ್ನು ಖರೀದಿಸಬೇಕು. 100 ರಿಂದ 300 ರುಪಾಯಿವರೆಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.