German Open: ವಿಶ್ವ ನಂ.1 ವಿಕ್ಟರ್ ಆಕ್ಸೆಲ್ಸೆನ್ ಮಣಿಸಿ ಫೈನಲ್ ಪ್ರವೇಶಿಸಿದ ಲಕ್ಷ್ಯ ಸೆನ್
* ವಿಶ್ವದ ನಂ.1 ಶಟ್ಲರ್‌ಗೆ ಶಾಕ್ ನೀಡಿದ 20 ವರ್ಷದ ಲಕ್ಷ್ಯ ಸೆನ್
* ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಲಕ್ಷ್ಯ ಸೆನ್‌ಗೆ ಜಯ
* ಫೈನಲ್‌ನಲ್ಲಿ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್‌ಸರ್ನ್ ವಿರುದ್ದ ಲಕ್ಷ್ಯ ಕಾದಾಟ
ಮುಯೆಲ್ಹೀಮ್ ಆನ್ ಡೆರ್ ರುಹ್ರ್(ಮಾ.13): ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (German Open Badminton Tournament) ಭಾರತದ 20 ವರ್ಷದ ಲಕ್ಷ್ಯ ಸೆನ್ (Lakshya Sen) ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ, ಹಾಲಿ ಒಲಿಂಪಿಕ್ ಚಾಂಪಿಯನ್, ವಿಶ್ವ ನಂ.1 ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ 21-13, 12-21, 23-21 ಗೇಮ್‌ಗಳಲ್ಲಿ ಜಯಗಳಿಸಿದರು.
ಕಳೆದ ಜನವರಿಯಲ್ಲಿ ಚೊಚ್ಚಲ ಸೂಪರ್ 500 ಪ್ರಶಸ್ತಿ ಜಯಿಸಿದ್ದ ಲಕ್ಷ್ಯ ಸೆನ್ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಒಂದು ಗಂಟೆ ಹಾಗೂ 10 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಒಲಿಂಪಿಕ್ ಚಾಂಪಿಯನ್‌ಗೆ ಶಾಖ್ ನೀಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಇದೀಗ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ಕನವರಿಕೆಯಲ್ಲಿದ್ದಾರೆ
ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ಷ್ಯ ತಮ್ಮ ಸ್ಮ್ಯಾಶ್‌ಗಳಿಂದ ಬಲಿಷ್ಠ ಆಕ್ಸೆಲ್ಸೆನ್‌ರನ್ನು ನಿಯಂತ್ರಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತೀಯ ಆಟಗಾರನಿಗೆ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್‌ಸರ್ನ್ ಎದುರಾಗಲಿದ್ದಾರೆ.
ಪ್ರೊ ಲೀಗ್: ಶೂಟೌಟಲ್ಲಿ ಭಾರತಕ್ಕೆ 1-2 ಸೋಲು
ಭುವನೇಶ್ವರ: ಎಫ್‌ಐಎಚ್ ಪ್ರೊ ಲೀಗ್‌ನ (FIH Pro League) ಜರ್ಮನಿ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ (Indian Women's Hockey Team) ಶೂಟೌಟ್‌ನಲ್ಲಿ 1-2 ಗೋಲುಗಳ ವೀರೋಚಿತ ಸೋಲು ಅನುಭವಿಸಿದೆ. ಶನಿವಾರ ನಡೆದ ಮೊದಲ ಪಂದ್ಯವು ನಿಗದಿತ 60 ನಿಮಿಷಗಳ ಮುಕ್ತಾಯಕ್ಕೆ 1-1 ಗೋಲುಗಳಲ್ಲಿ ಸಮಗೊಂಡಿತ್ತು.
FIH Pro League: ಭಾರತ ಮಹಿಳಾ ಹಾಕಿ ತಂಡಕ್ಕಿಂದು ಜರ್ಮನಿ ಎದುರಾಳಿ
ಭಾರತ ಪರ ನವ್‌ನೀತ್ ಕೌರ್(4ನೇ ನಿಮಿಷ), ಜರ್ಮನಿ ಪರ ಕಾರ್ಲೋಟಾ ಸಿಪ್ಪೆಲ್(5ನೇ ನಿಮಿಷ) ಗೋಲು ಬಾರಿಸಿದರು. ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ನವ್‌ನೀತ್ ಭಾರತ ಪರ ಏಕೈಕ ಗೋಲು ಬಾರಿಸಿದರು. ಶರ್ಮಿಳಾ, ನೇಹಾ, ಲಾಲ್ರೆಮ್ಸಯಾಮಿ ಹಾಗೂ ಮೋನಿಕಾ ಅವಕಾಶ ವ್ಯರ್ಥಗೊಳಿಸಿದರು. ಜರ್ಮನಿ ಪರ ಪೌಲಿನ್ ಹೇನ್‌್ಜ ಹಾಗೂ ಸಾರಾ ಸ್ಟ್ರಾಸ್ ಗೋಲು ಬಾರಿಸಿದರು. ಉಭಯ ತಂಡಗಳ ನಡುವಿನ 2ನೇ ಪಂದ್ಯ ಭಾನುವಾರ ನಡೆಯಲಿದೆ.
ರಣಜಿ ಪ್ರಿ ಕ್ವಾರ್ಟರ್: ಜಾರ್ಖಂಡ್ ಮೇಲುಗೈ
ಕೋಲ್ಕತಾ: ಕುಮಾರ್ ಕುಶಾಗ್ರಾ(ಔಟಾಗದೆ 112) ಹಾಗೂ ವಿರಾಟ್ ಸಿಂಗ್(107)ರ ಶತಕಗಳ ನೆರವಿನಿಂದ ಶನಿವಾರದಿಂದ ಆರಂಭಗೊಂಡ ನಾಗಾಲ್ಯಾಂಡ್ ವಿರುದ್ಧದ ರಣಜಿ ಟ್ರೋಫಿ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 402 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಜಾರ್ಖಂಡ್ 64ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 5ನೇ ವಿಕೆಟ್‌ಗೆ ಕುಶಾಗ್ರಾ ಹಾಗೂ ವಿರಾಟ್ 213 ಎಸೆತಗಳಲ್ಲಿ 175 ರನ್ ಸೇರಿಸಿ ತಂಡಕ್ಕೆ ನೆರವಾದರು.
2ನೇ ಟೆಸ್ಟ್: ಆಸೀಸ್‌ಗೆ ಖವಾಜ ಶತಕದ ಆಸರೆ
ಕರಾಚಿ: ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಅವರ ಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್‌ನ ಮೊದಲ ದಿನ ಆಸ್ಪ್ರೇಲಿಯಾ ಮೇಲುಗೈ ಸಾಧಿಸಿದೆ. ಖವಾಜ ಔಟಾಗದೆ 127 ರನ್ ಗಳಿಸಿದ್ದು, ಆಸ್ಪ್ರೇಲಿಯಾ ದಿನದಂತ್ಯಕ್ಕೆ 3 ವಿಕೆಟ್‌ಗೆ 251 ರನ್ ಕಲೆಹಾಕಿತು.
ಮೊದಲ ಟೆಸ್ಟ್‌ನಲ್ಲಿ ಶತಕದಿಂದ ವಂಚಿತರಾಗಿದ್ದ ಖವಾಜ, ತಾವು ಹುಟ್ಟಿದ ದೇಶದಲ್ಲಿ ಮೊದಲ ಶತಕ ಬಾರಿಸಿ ಸಂಭ್ರಮಿಸಿದರು. 3ನೇ ವಿಕೆಟ್‌ಗೆ ಸ್ಟೀವ್ ಸ್ಮಿತ್(72) ಜೊತೆ 159 ರನ್ ಜೊತೆಯಾಟದಲ್ಲಿ ಖವಾಜ ಭಾಗಿಯಾದರು. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಡ್ರಾಗೊಂಡಿತ್ತು.