Indian National Basketball League: ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಲೀಗ್ ಉದ್ಘಾಟನೆ
* ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿ ಬೆಂಗಳೂರಿನಲ್ಲಿ ಉದ್ಘಾಟನೆ
* ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಚಾಲನೆ
* 2022ರ ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿ
ಬೆಂಗಳೂರು(ನ.21) ಮುಂದಿನ ವರ್ಷ ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್) (Indian National Basketball League) ಉದ್ಘಾಟನೆಗೊಂಡಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಟೂರ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಯುವ ಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ, ಹುಮ್ಮಸ್ಸು ಜಾಸ್ತಿಯಾಗಬೇಕು. ದೇಶದಲ್ಲಿ ಕ್ರಿಕೆಟ್ (Cricket), ಫುಟ್ಬಾಲ್ (Football), ಹಾಕಿ (Hockey), ಕಬಡ್ಡಿ (Kabaddi) ಪ್ರಾರಂಭಿಸಿದಂತೆಯೇ ಈಗ ಬಾಸ್ಕೆಟ್‌ಬಾಲ್ ಲೀಗ್ ಕೂಡಾ ಆರಂಭಿಸಲಾಗಿದೆ. ಈ ಕ್ರೀಡೆ ದೇಶದೆಲ್ಲೆಡೆ ಪ್ರಚಾರ ಪಡೆದು ಉನ್ನತ ಮಟ್ಟಕ್ಕೆ ತಲುಪಬೇಕು. ಟೋಕಿಯೋ ಯಶಸ್ಸಿನ ಬಳಿಕ ದೇಶದಲ್ಲಿ ಕ್ರೀಡೆಯತ್ತ ಮತ್ತಷ್ಟು ಆಸಕ್ತಿ ಕಂಡುಬರುತ್ತಿದೆ. ಬಾಸ್ಕೆಟ್‌ಬಾಲ್ ಲೀಗ್ ಯಶಸ್ಸಿಗೆ ಬೇಕಾದ ಎಲ್ಲಾ ಸಹಕಾರವನ್ನು ಸರ್ಕಾರದ ವತಿಯಿಂದ ನೀಡುತ್ತೇವೆ’ ಎಂದರು.
ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) ಅಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ‘ದೇಶದಲ್ಲಿ ಬಾಸ್ಕೆಟ್‌ಬಾಲ್ ಕೂಡಾ ಬೆಳೆಯಬೇಕೆಂಬ ಉದ್ದೇಶದಿಂದ ಈ ಟೂರ್ನಿ ಆರಂಭಿಸಲಾಗಿದೆ. ಸದ್ಯ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಜನವರಿ ಕೊನೆಯಲ್ಲಿ ಟೂರ್ನಿಗೆ ಚಾಲನೆ ನೀಡಲಿದ್ದೇವೆ. ಯುವ ಜನತೆ ಬಾಸ್ಕೆಟ್‌ಬಾಲ್‌ನತ್ತ ಆಕರ್ಷಿಸಲು ಟೂರ್ನಿ ನೆರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Interview: ದೇಶದಲ್ಲಿ Basketball ಕ್ರಿಕೆಟ್‌ನಷ್ಟೇ ಜನಪ್ರಿಯಗೊಳ್ಳಲಿದೆ: BFI ಅಧ್ಯಕ್ಷ ಗೋವಿಂದರಾಜು
ಟೂರ್ನಿಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ 9 ತಂಡಗಳು ಇರಲಿದ್ದು, 3*3 ಹಾಗೂ 5*5 ಮಾದರಿಯಲ್ಲಿ ಸ್ಪರ್ಧೆ ನಡೆಯಲಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಆಟಗಾರರಿಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿದೆ. ಮುಂಬರುವ ಆವೃತ್ತಿಗಳಲ್ಲಿ ಆಟಗಾರರ ಬಿಡ್ಡಿಂಗ್ ಸಹ ನಡೆಯುವ ನಿರೀಕ್ಷೆ ಇದೆ.
ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ನಟ ಯಶ್ (Yash) ಮಾತನಾಡಿ, ‘ಕ್ರೀಡೆ ನಮಗೆ ಒಗ್ಗಟ್ಟಾಗಿರಲು ಕಲಿಸುತ್ತದೆ. ನಾವು ಆರೋಗ್ಯವಾಗಿರಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದೆ ನಡೆಯುವ ಐಎನ್‌ಬಿಎಲ್ ಟೂರ್ನಿ ಮೂಲಕ ದೇಶದಲ್ಲಿ ಬಾಸ್ಕೆಟ್‌ಬಾಲ್ ಮತ್ತಷ್ಟು ಬೆಳೆಯಬೇಕು’ ಎಂದರು. ರಾಜ್ಯಪಾಲ ಗೆಹಲೋತ್, ಕ್ರೀಡಾ ಸಚಿವ ನಾರಾಯಣ ಗೌಡ ಲೀಗ್‌ಗೆ ಶುಭ ಹಾರೈಸಿದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥ ನರೀಂದ್ರ ಬಾತ್ರಾ ಸೇರಿದಂತೆ ಹಲವರು ವಿಡಿಯೋ ಸಂದೇಶದ ಮೂಲಕ ಐಎನ್‌ಬಿಎಲ್ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಶ್ರೀಘ್ರದಲ್ಲೇ IPL ರೀತಿಯ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿ ಆರಂಭ
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಜೈ ಹೋ ಹಾಗೂ ಗೊಂಬೆ ಹೇಳುತೈತೆ ಹಾಡಿನ ಮೂಲಕ ನೆರೆದಿದ್ದ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳನ್ನು ರಂಜಿಸಿದರು. ಇತ್ತೀಚಿಗೆ ನಿಧನರಾದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಾಲ್ಯದ ಭಾವಚಿತ್ರಗಳನ್ನು ಪರದೆಯಲ್ಲಿ ಪ್ರದರ್ಶಿಸಿ ನಮನ ಸಲ್ಲಿಸಲಾಯಿತು. ಕಾರ‍್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಬಿಎಫ್‌ಐ ಕಾರ‍್ಯದರ್ಶಿ ಚಂದ್ರಮುಖಿ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
3*3 ಪ್ರದರ್ಶನ ಟೂರ್ನಿ
ಉದ್ಘಾಟನಾ ಸಮಾರಂಭಕ್ಕೂ ಮುನ್ನ 3*3 ವಿಭಾಗದಲ್ಲಿ ಬೆಂಗಳೂರು ಓಪನ್ ಪ್ರದರ್ಶನ ಟೂರ್ನಿ ನಡೆಯಿತು. 24 ತಂಡಗಳ ನಡುವಿನ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಟೀಂ ಬಿಒಬಿ ಚಾಂಪಿಯನ್ ಆದರೆ, ಮಹಿಳಾ ವಿಭಾಗದಲ್ಲಿ ಟೀಂ ಬಾಲರ್ಸ್ ತಂಡ ವಿಜಯಿಯಾಯಿತು. ಚಾಂಪಿಯನ್ ಆದ ತಂಡಗಳಿಗೆ ತಲಾ 20 ಸಾವಿರ ರು. ಬಹುಮಾನ ನೀಡಲಾಯಿತು. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ನಗದು ಬಹುಮಾನ ವಿತರಿಸಲಾಯಿತು.