ದಿಗ್ಗಜ ಅಥ್ಲೀಟ್ ಮಿಲ್ಖಾ ಪತ್ನಿ ನಿರ್ಮಲ್ ಕೌರ್ ಕೋವಿಡ್‌ಗೆ ಬಲಿ
* ಕೋವಿಡ್ ಅಟ್ಟಹಾಸಕ್ಕೆ ನಿರ್ಮಲ್ ಕೌರ್(85) ಬಲಿ
* ನಿರ್ಮಲ್ ಕೌರ್ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿ
* ಭಾರತ ವಾಲಿಬಾಲ್ ತಂಡದ ನಾಯಕಿಯಾಗಿಯೂ ಮಿಂಚಿದ್ದ ನಿರ್ಮಲ್ ಕೌರ್
ಚಂಡೀಗಢ(ಜೂ.14): ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ, ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲ್ ಕೌರ್(85) ಕೊರೋನಾ ಸೋಂಕಿನ ಸಮಸ್ಯೆಗಳಿಂದಾಗಿ ಭಾನುವಾರ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ತಿಂಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕೋವಿಡ್ ವಿರುದ್ದದ ನಿರಂತರ ಹೋರಾಟದಲ್ಲಿ ಇಂದು(ಜೂ.13) ಸಂಜೆ 4 ಗಂಟೆಗೆ ನಿರ್ಮಲಾ ಮಿಲ್ಖಾ ಸಿಂಗ್ ಕೊನೆಯುಸಿರೆಳೆದರು ಎಂದು ತಿಳಿಸಲು ದುಃಖವಾಗುತ್ತಿದೆ ಎಂದು ಮಿಲ್ಖಾ ಕುಟುಂಬದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿರ್ಮಲ್ ಕೌರ್, ಪತಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮಿಲ್ಖಾ ಸಿಂಗ್ ಅವರಿಗೆ ಕೋವಿಡ್ ದೃಢಪಟ್ಟ ಎರಡು ದಿನಗಳ ಬಳಿಕ ಅಂದರೆ ಮೇ 26ರಂದು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ನಿರ್ಮಲ್ ದಾಖಲಾಗಿದ್ದರು. ಮಿಲ್ಖಾ ಸಿಂಗ್ ಹಾಗೂ ನಿರ್ಮಲ್ ಒಂದೇ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿಗೂ ಕೋವಿಡ್ ಪಾಸಿಟಿವ್
ಮಿಲ್ಖಾ ಸಿಂಗ್‌ಗೂ ಕೋವಿಡ್ ತಗುಲಿರುವ ಕಾರಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಐಸಿಯುನಲ್ಲಿರುವ ಕಾರಣ, ತಮ್ಮ ಪತ್ನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ನಿರ್ಮಲ್, ಪಂಜಾಬ್ ಸರ್ಕಾರದ ಕ್ರೀಡಾ ಇಲಾಖೆಯ ಮಹಿಳಾ ವಿಭಾಗದ ನಿರ್ದೇಶಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"