ವಿಶ್ವದ ನಂ.1 ಚೆಸ್ ಆಟಗಾರರ ಮ್ಯಾಗ್ನಸ್ ವಿರುದ್ದ ಗೆದ್ದ ಪ್ರಜ್ಞಾನಂದ..!
* ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸೆನ್‌ರನ್ನು ಸೋಲಿಸಿದ ಆರ್. ಪ್ರಜ್ಞಾನಂದ
* 16 ವರ್ಷದ ಪ್ರಜ್ಞಾನಂದ ಅವರ ಸಾಧನೆಯನ್ನು ಕೊಂಡಾಡಿದ ವಿವಿಧ ಕ್ಷೇತ್ರಗಳ ತಾರೆಯರು
* ಮ್ಯಾಗ್ನಸ್‌ರ ಸತತ 3 ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪ್ರಜ್ಞಾನಂದ
ಚೆನ್ನೈ(ಫೆ.22): ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ (R Praggnanandhaa) ಅವರು ಐದು ಬಾರಿ ಚೆಸ್ ವಿಶ್ವ ಚಾಂಪಿಯನ್, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸೆನ್‌ರನ್ನು (Magnus Carlsen) ಸೋಲಿಸಿ ಗಮನ ಸೆಳೆದಿದ್ದಾರೆ. ಸೋಮವಾರ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರಾರಯಪಿಡ್ ಚೆಸ್ ಟೂರ್ನಿಯ 8ನೇ ಸುತ್ತಿನಲ್ಲಿ 16 ವರ್ಷದ ಪ್ರಜ್ಞಾನಂದ, ಮ್ಯಾಗ್ನಸ್ ವಿರುದ್ಧ ಕೇವಲ 19 ನಡೆಗಳಲ್ಲಿ ಜಯಗಳಿಸಿ ಅಚ್ಚರಿ ಮೂಡಿಸಿದರು.
ಇದರೊಂದಿಗೆ ಮ್ಯಾಗ್ನಸ್‌ರ ಸತತ 3 ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪ್ರಜ್ಞಾನಂದ, ನಾರ್ವೆಯ ದಿಗ್ಗಜ ಆಟಗಾರನ ವಿರುದ್ಧ ಗೆದ್ದ ಭಾರತದ 3ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಐದು ಬಾರಿ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ (Viswanathan Anand) ಹಾಗೂ ಕಿರಿಯರ ವಿಶ್ವ ಚಾಂಪಿಯನ್ ಪಿ.ಹರಿಕೃಷ್ಣ ಅವರು ಮ್ಯಾಗ್ನಸ್‌ರನ್ನು ಸೋಲಿಸಿದ್ದರು. ಪ್ರಜ್ಞಾನಂದ ಸಾಧನೆಯನ್ನು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು, ವಿವಿಧ ಕ್ಷೇತ್ರಗಳ ತಾರೆಯರು ಕೊಂಡಾಡಿದ್ದಾರೆ.
ಆರ್.ಪ್ರಜ್ಞಾನಂದ ಅವರ ಸಾಧನೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Sachin Tendulkar) ಕೊಂಡಾಡಿದ್ದು, ನೀವು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದೀರ ಎಂದು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ
ಐಎಸ್‌ಎಲ್: ಒಡಿಶಾ ವಿರುದ್ಧ ಗೆದ್ದ ಬೆಂಗಳೂರು ಎಫ್‌ಸಿ
ಬ್ಯಾಂಬೋಲಿಮ್: 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) (Indian Super League) ಫುಟ್ಬಾಲ್ ಲೀಗ್‌ನಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (Bengaluru FC) ಗೆಲುವಿನ ಲಯಕ್ಕೆ ಮರಳಿದೆ. ಆದರೆ ತಂಡ ಸೆಮಿಫೈನಲ್ ಪ್ರವೇಶಿಸುವುದು ಅನುಮಾನ. ಸೋಮವಾರ ನಡೆದ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ 2-1 ಗೋಲುಗಳಲ್ಲಿ ಗೆಲುವು ಸಾಧಿಸಿತು.
Pro Kabaddi League: ಸೆಮಿಫೈನಲ್‌ಗೆ ಬೆಂಗಳೂರು ಬುಲ್ಸ್ ಲಗ್ಗೆ
31ನೇ ನಿಮಿಷದಲ್ಲಿ ಡ್ಯಾನಿಶ್ ಹಾಗೂ 49ನೇ ನಿಮಿಷದಲ್ಲಿ ಪೆನಾಲ್ಟಿಮೂಲಕ ಕ್ಲೀಟನ್ ಗೋಲು ಬಾರಿಸಿದರು. ಒಡಿಶಾದ ನಂದಾ 8ನೇ ನಿಮಿಷದಲ್ಲಿ ಗೋಲು ಗಳಿಸಿದರು. ಬಿಎಫ್‌ಸಿಗೆ ಲೀಗ್ ಹಂತದಲ್ಲಿ ಇನ್ನು ಕೇವಲ 2 ಪಂದ್ಯ ಬಾಕಿ ಇದ್ದು, ಎರಡರಲ್ಲೂ ಗೆದ್ದು ಉಳಿದ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ಬಂದರಷ್ಟೇ ಸೆಮೀಸ್‌ನಲ್ಲಿ ಸ್ಥಾನ ಸಿಗಲಿದೆ.
ಮಾರ್ಚ್ 12ರಿಂದ ಅಂಧರ ಕ್ರಿಕೆಟ್ ತ್ರಿಕೋನ ಸರಣಿ
ಬೆಂಗಳೂರು: ಮುಂಬರುವ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಸರಣಿಗೆ 17 ಆಟಗಾರರ ಭಾರತ ಅಂಧರ ಕ್ರಿಕೆಟ್ ತಂಡವನ್ನು ಸೋಮವಾರ ಪ್ರಕಟಿಸಲಾಯಿತು. ಸರಣಿ ಯುಎಇಯಲ್ಲಿ ಮಾರ್ಚ್ 12ರಿಂದ 19ರ ವರೆಗೆ ನಡೆಯಲಿದ್ದು, ಲೀಗ್ ಹಂತದಲ್ಲಿ 6 ಪಂದ್ಯಗಳಿರಲಿವೆ.
ತಂಡದಲ್ಲಿ ಕರ್ನಾಟಕದ ಬಸಪ್ಪ ವಾಡ್ಡಗೊಲ್, ಲೋಕೇಶ, ಪ್ರಕಾಶ ಜಯರಾಮಯ್ಯ ಹಾಗೂ ಸುನಿಲ್ ರಮೇಶ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ತಂಡ ಮಾರ್ಚ್ 1ರಿಂದ ಬೆಂಗಳೂರಿನಲ್ಲಿ 10 ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಬಳಿಕ ಯುಎಇಗೆ ಪ್ರಯಾಣ ಬೆಳೆಸಲಿದೆ.
ಸಿ.ಕೆ.ನಾಯ್ಡು, ಮಹಿಳಾ ಟಿ20 ಟೂರ್ನಿ ಶೀಘ್ರ ಆಯೋಜನೆ
ನವದೆಹಲಿ: ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿದ್ದ ಸಿ.ಕೆ.ನಾಯ್ಡು ಅಂಡರ್-25 ಹಾಗೂ ಹಿರಿಯ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಗಳನ್ನು ಸದ್ಯದಲ್ಲೇ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಮಾರ್ಚ್ 2ರಂದು ನಡೆಯಲಿರುವ ವರ್ಚುವಲ್ ಸಭೆಯಲ್ಲಿ ಟೂರ್ನಿಯ ದಿನಾಂಕಗಳು ನಿರ್ಧಾರವಾಗಲಿವೆ ಎನ್ನಲಾಗಿದೆ.
ಇದೇ ವೇಳೆ 2023ರ ಏಕದಿನ ವಿಶ್ವಕಪ್ ಸಿದ್ಧತೆಗಾಗಿ ಸ್ಥಳೀಯ ಆಯೋಜನಾ ಸಮಿತಿಯನ್ನು ರಚನೆ ಮಾಡುವ ಬಗ್ಗೆಯೂ ನಿರ್ಧರಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಜೂನ್ ತಿಂಗಳಲ್ಲಿ ದ.ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೂ ಅನುಮತಿ ನೀಡುವ ಸಾಧ್ಯತೆ ಇದೆ.