* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಆಕಾಶ್ ಕುಮಾರ್* 13 ಬಾಕ್ಸರ್‌ಗಳು ಸ್ಪರ್ಧಿಸಿದ್ದ ಈ ಕೂಟದಲ್ಲಿ ಭಾರತಕ್ಕೆ ಒಲಿದ ಏಕೈಕ ಪದಕ* ಆಕಾಶ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 7ನೇ ಭಾರತೀಯ ಬಾಕ್ಸರ್
ಬೆಲ್ಗ್ರೇಡ್(ನ.05): ಚೊಚ್ಚಲ ಬಾರಿಗೆ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (World Boxing Championships) ಸ್ಪರ್ಧಿಸಿದ ಆಕಾಶ್ ಕುಮಾರ್ (Akash Kumar) ಕಂಚಿನ ಪದಕ (Bronze Medal) ಜಯಿಸಿದ್ದಾರೆ. 54 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಗುರುವಾರ ಕಜಕಸ್ತಾನದ 19 ವರ್ಷದ ಮಖ್ಮುದ್ ಸಬ್ರಖಾನ್ ವಿರುದ್ಧ 0-5ರಲ್ಲಿ ಸೋಲುಂಡರು.
ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಬಾಕ್ಸರ್‌ಗಳಿಗೆ ನಗದು ಬಹುಮಾನ ನೀಡುತ್ತಿದ್ದು, ಆಕಾಶ್‌ಗೆ 25,000 ಅಮೆರಿಕನ್ ಡಾಲರ್ (ಅಂದಾಜು 18.63 ಲಕ್ಷ ರು.) ದೊರೆಯಿತು. 13 ಬಾಕ್ಸರ್‌ಗಳು ಸ್ಪರ್ಧಿಸಿದ್ದ ಈ ಕೂಟವನ್ನು ಭಾರತ ಒಂದು ಕಂಚಿನ ಪದಕದೊಂದಿಗೆ ಮುಕ್ತಾಯಗೊಳಿಸಿತು.
Boxing World Championships: ಭಾರತಕ್ಕೆ ಮೊದಲ ಪದಕ ಖಚಿತ!
ಆಕಾಶ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 7ನೇ ಭಾರತೀಯ ಬಾಕ್ಸರ್ ಎನ್ನುವ ಹಿರಿಮೆಗೆ ಪಾತ್ರರಾದರು. ಮೊದಲ ಸುತ್ತಿನಿಂದಲೂ ಆಕರ್ಷಕ ಪ್ರದರ್ಶನ ತೋರಿದ್ದ 21 ವರ್ಷದ ಆಕಾಶ್, ಸೆಮೀಸ್‌ನಲ್ಲಿ ಮಂಕಾದರು. ಮಖ್ಮುದ್‌ರ ವೇಗದ ಎದುರು ಅಂಕ ಗಳಿಸಲು ಆಕಾಶ್‌ಗೆ ಸಾಧ್ಯವಾಗಲಿಲ್ಲ.
ಆಕಾಶ್‌ಗೂ ಮೊದಲು ವಿಜೇಂದರ್ ಸಿಂಗ್ (2009, ಕಂಚು), ವಿಕಾಸ್ ಕೃಷ್ಣನ್ (2011, ಕಂಚು), ಶಿವ ಥಾಪ (2015, ಕಂಚು), ಗೌರವ್ ಬಿಧುರಿ (2017, ಕಂಚು), ಅಮಿತ್ ಪಂಘಾಲ್ (2019, ಬೆಳ್ಳಿ) ಹಾಗೂ ಮನೀಶ್ ಕೌಶಿಕ್ (2019, ಕಂಚು) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದರು.
ಹೈಲೋ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೇರಿದ ಶ್ರೀಕಾಂತ್
ಸಾಬ್ರ್ರೂಕೆನ್(ಜರ್ಮನಿ): ಭಾರತದ ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್, ಕೊರಿಯಾದ ಡಾಂಗ್ ಕೆನ್ ಲೀ ವಿರುದ್ಧ 21-9, 19-21, 21-10 ಗೇಮ್‌ಗಳಲ್ಲಿ ಪ್ರಯಾಸದ ಗೆಲುವು ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ಗೆ 3ನೇ ಶ್ರೇಯಾಂಕಿತ ಹಾಂಕಾಂಗ್‌ನ ಲಾಂಗ್ ಆ್ಯಂಗುಸ್ ಎದುರಾಗಲಿದ್ದಾರೆ.
World Chess: ಟಾಪ್ 100ರಲ್ಲಿ ಭಾರತದ 7 ಆಟಗಾರರು!
ಇದೇ ವೇಳೆ ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಸೌರಭ್ ವರ್ಮಾ, ಥಾಯ್ಲೆಂಡ್‌ನ ಕಂಟಾಫನ್ ವಿರುದ್ಧ 13-21, 10-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಮಹಿಳಾ ಡಬಲ್ಸ್‌ನ ಅಂತಿಮ 16ರ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಇಂಡೋನೇಷ್ಯಾದ ನಿಟಾ ಹಾಗೂ ಸೈಖಾ ಜೋಡಿ ವಿರುದ್ಧ 15-21, 16-21ರಲ್ಲಿ ಸೋಲುಂಡಿತು.
ಮಹಿಳಾ ಏಕದಿನ: ಸತತ 4ನೇ ಜಯ ಪಡೆದ ಕರ್ನಾಟಕ
ನಾಗ್ಪುರ: ಅಮೋಘ ಲಯದಲ್ಲಿರುವ ಕರ್ನಾಟಕ, ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ, ಎಲೈಟ್ ‘ಇ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಂಡ ನಾಕೌಟ್ ಹಂತಕ್ಕೇರುವುದು ಬಹುತೇಕ ಖಚಿತವಾಗಿದೆ.
ಗುರುವಾರ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ 41.2 ಓವರಲ್ಲಿ ಕೇವಲ 95 ರನ್‌ಗೆ ಆಲೌಟ್ ಆಯಿತು. ರಾಜ್ಯದ ಪರ ವಿ.ಚಂದು 17 ರನ್‌ಗೆ 5 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 15.1 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 99 ರನ್ ಗಳಿಸಿತು. ಎಸ್.ಶುಭಾ 55 ರನ್ ಸಿಡಿಸಿದರೆ, ಜಿ.ದಿವ್ಯಾ 43 ರನ್ ಗಳಿಸಿದರು. ಕರ್ನಾಟಕ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಬರೋಡಾ ವಿರುದ್ಧ ಸೆಣಸಲಿದೆ.
